×
Ad

8 ರಾಜ್ಯಗಳ ವಿಧಾನಸಭಾ ಉಪಚುನಾವಣೆ: ಎಸ್ಪಿಗೆ ಮುಖಭಂಗ ಟಿಆರ್‌ಎಸ್ ಜಯಭೇರಿ

Update: 2016-02-16 23:57 IST

ಹೊಸದಿಲ್ಲಿ, ಫೆ.16: ಎಂಟು ರಾಜ್ಯಗಳ 12 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಉತ್ತರಪ್ರದೇಶದಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಮುಝಫ್ಫರ್‌ನಗರ ಹಾಗೂ ದೇವ್‌ಬಂದ್ ಕ್ಷೇತ್ರಗಳೆರಡನ್ನೂ ಅದು ಕಳೆದುಕೊಂಡಿದೆ. ಮುಝಫ್ಫರ್‌ನಗರ ಕ್ಷೇತ್ರವನ್ನು ಬಿಜೆಪಿ ಗೆದ್ದರೆ, ದೇವ್‌ಬಂದ್ ಕ್ಷೇತ್ರವನ್ನು ಕಾಂಗ್ರೆಸ್ ಕಸಿದಿದೆ. ಬಿಕಾಪುರ್ ಕ್ಷೇತ್ರದಲ್ಲಿ ಮಾತ್ರ ಎಸ್ಪಿ ಗೆಲುವು ಸಾಧಿಸಿದೆ.2017ರಲ್ಲಿ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಈ ಉಪಚುನಾವಣಾ ಫಲಿತಾಂಶವು ಅಖಿಲೇಶ್ ಯಾದವ್ ನೇತೃತ್ವದ ಎಸ್ಪಿ ಸರಕಾರಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಬೀದರ್ ಕ್ಷೇತ್ರವನ್ನು ಮಾತ್ರ ಗೆದ್ದಿದ್ದು, ಹೆಬ್ಬಾಳ ಹಾಗೂ ದೇವದುರ್ಗ ಕ್ಷೇತ್ರಗಳಲ್ಲಿ ಬಿಜೆಪಿ ಜಯದ ಕಹಳೆ ಮೊಳಗಿಸಿದೆ.
 ಮಹಾರಾಷ್ಟ್ರದ ಪಾಲ್‌ಘರ್ (ಮೀಸಲು) ವಿಧಾನಸಭಾ ಕ್ಷೇತ್ರದಲ್ಲಿ ಶಿವಸೇನಾ ಅಭ್ಯರ್ಥಿ ಅಮಿತ್ ಘೋಡಾ, ಕಾಂಗ್ರೆಸ್ ರಾಜೇಂದ್ರ ಗಾವಿತ್ ಅವರನ್ನು 19 ಸಾವಿರ ಮತಗಳ ಭಾರ ಅಂತರದಿಂದ ಸೋಲಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಈ ಕ್ಷೇತ್ರವನ್ನು ಶಿವಸೇನಾ ಗೆದ್ದಿತ್ತು. ಶಿವಸೇನಾ ಶಾಸಕ ಕೃಷ್ಣ ಅರ್ಜುನ್ ಗೋಡಾ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು.

ಬಿಹಾರದ ಹರ್‌ಲಾಖಿ ವಿಧಾನಸಭಾ ಕ್ಷೇತ್ರದಲ್ಲಿ ಆರ್‌ಎಲ್‌ಎಸ್ಪಿ(ಎನ್‌ಡಿಎ) ಅಭ್ಯರ್ಥಿ ಸುಂಧಾಶು ಶೇಖರ್ ಜಯಗಳಿಸಿದ್ದಾರೆ. ಮಧ್ಯಪ್ರದೇಶದ ಮೈಹಾರ್ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಬಿಜೆಪಿಯ ನಾರಾಯಣ್ ತ್ರಿಪಾಠಿ, ಕಾಂಗ್ರೆಸ್ ಅಭ್ಯರ್ಥಿ ಮನೀಶ್ ಪಟೇಲ್‌ರನ್ನು ಸೋಲಿಸಿದ್ದಾರೆ.

ಮುಂದಿನ ವರ್ಷ ಚುನಾವಣೆಗೆ ತೆರಳಲಿರುವ ಇನ್ನೊಂದು ರಾಜ್ಯವಾದ ಪಂಜಾಬ್‌ನಲ್ಲಿ, ಆಡಳಿತಾರೂಢ ಶಿರೋಮಣಿ ಅಕಾಲಿದಳದ ಅಭ್ಯರ್ಥಿ ರವೀಂದರ್ ಸಿಂಗ್ ಬ್ರಹ್ಮಪುತ್ರ ಖಡೂರ್ ಸಾಹಿಬ್ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಅವರು ತಮ್ಮ ನಿಕಟಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಭೂಪಿಂದರ್‌ಸಿಂಗ್ ಅವರನ್ನು 65,664 ಮತಗಳಿಂದ ಪರಾಭವಗೊಳಿಸಿದ್ದಾರೆ.

ತ್ರಿಪುರದಲ್ಲಿಯೂ ಆಡಳಿತಾರೂಢ ಸಿಪಿಎಂ ಗೆಲುವಿನ ನಗೆಬೀರಿದೆ. ಅದು, ಅಮರ್‌ಪುರ್ ಕ್ಷೇತ್ರವನ್ನು ನಿರಾಯಾಸವಾಗಿ ಗೆದ್ದುಕೊಂಡಿದೆ. ತೆಲಂಗಾಣದಲ್ಲಿ ಟಿಆರ್‌ಎಸ್ ತನ್ನ ವಿಜಯಯಾತ್ರೆಯನ್ನು ಮುಂದುವರಿಸಿದ್ದು, ಮೇಡಕ್ ಜಿಲ್ಲೆಯ ನಾರಯಣ್‌ಖೇಡ್ ಕ್ಷೇತ್ರವನ್ನು ಗೆದ್ದುಕೊಂಡಿದೆ. ಕಳೆದ ವಾರ ನಡೆದ ಹೈದರಾಬಾದ್‌ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ಟಿಆರ್‌ಎಸ್ ಪ್ರಚಂಡ ಜಯಭೇರಿ ಬಾರಿಸಿತ್ತು, ಪ್ರತಿಪಕ್ಷಗಳಾದ ಟಿಡಿಪಿ, ಕಾಂಗ್ರೆಸ್ ಹಾಗೂ ಬಿಜೆಪಿ ಧೂಳೀಪಟಗೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News