ಸೌದಿ ಯುವಜನರಿಗಿದು ಸಂಕ್ರಮಣ ಕಾಲ
ರಿಯಾದ್, ಫೆ. 17: ಸೌದಿ ಅರೇಬಿಯ ರಾಜಧಾನಿ ರಿಯಾದ್‌ನ ವಿಶ್ವವಿದ್ಯಾನಿಲಯವೊಂದರ ಬೃಹತ್ ಸಭಾಂಗಣದಲ್ಲಿ ಈ ತಿಂಗಳ ಆದಿ ಭಾಗದಲ್ಲಿ ಯುವ ಸೌದಿ ಅರೇಬಿಯನ್ನರು ಕಿಕ್ಕಿರಿದು ಸೇರಿದ್ದರು. ಉದ್ಯೋಗ ಸಂದರ್ಶನಕ್ಕಾಗಿ ಬಂದಿದ್ದ ಅವರು ಉದ್ದದ ಸಾಲುಗಳಲ್ಲಿ ತಮ್ಮ ಸರದಿಗಾಗಿ ಕಾಯುತ್ತಿದ್ದರು.
ಅದು ರಿಯಾದ್‌ನಲ್ಲಿ ಎರಡು ವಾರಗಳಲ್ಲಿ ನಡೆದ ಮೂರನೆ ಉದ್ಯೋಗ ಮೇಳವಾಗಿತ್ತು. ತೈಲವೇ ಸರ್ವಸ್ವವಾಗಿರುವ ದೇಶದಲ್ಲಿ ಕುಸಿಯುತ್ತಿರುವ ತೈಲ ಬೆಲೆ ಭವಿಷ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವ ಹೆದರಿಕೆಯಿಂದಾಗಿ ಉದ್ಯೋಗ ಮೇಳದಲ್ಲಿ ಅಷ್ಟು ಜನ ಸೇರಿದ್ದರು.
ದಶಕಗಳ ಕಾಲ ಸೌದಿ ರಾಜ ಕುಟುಂಬ ದೇಶದ ಅಗಾಧ ತೈಲ ಸಂಪತ್ತಿನಿಂದ ತನ್ನ ಜನರಿಗೆ ಭಾರೀ ಸೌಲಭ್ಯಗಳನ್ನು ಒದಗಿಸಿತ್ತು. ಉಚಿತ ಶಿಕ್ಷಣ ಮತ್ತು ವೈದ್ಯಕೀಯ ಆರೈಕೆ, ಬೃಹತ್ ಇಂಧನ ರಿಯಾಯಿತಿ ಹಾಗೂ ಉತ್ತಮ ಸಂಬಳದ (ಹೆಚ್ಚಿನ ಪ್ರಕರಣಗಳಲ್ಲಿ ಅಗತ್ಯವಿಲ್ಲದ) ಸರಕಾರಿ ಕೆಲಸಗಳನ್ನು ತನ್ನ ಜನರಿಗೆ ನೀಡಿತ್ತು. ಯಾರೂ ತೆರಿಗೆ ಕಟ್ಟುತ್ತಿರಲಿಲ್ಲ. ರಾಜಕೀಯ ಹಕ್ಕುಗಳ ಬಗ್ಗೆ ತಲೆಕೆಡಿಸಿಕೊಳ್ಳದ ಜನರಿಗೆ ಈ ವ್ಯವಸ್ಥೆ ಒಪ್ಪಿಗೆಯಾಗಿತ್ತು.
ಆದರೆ, 2014ರ ಜೂನ್‌ನಲ್ಲಿ ತೈಲಕ್ಕೆ ಬ್ಯಾರಲ್‌ವೊಂದರ 100 ಡಾಲರ್‌ಗೂ ಅಧಿಕ ಇದ್ದ ಬೆಲೆ ಈಗ ಬ್ಯಾರಲ್‌ಗೆ 30 ಡಾಲರ್‌ಗಿಂತಲೂ ಕೆಳಗೆ ಕುಸಿದಿರುವುದು ಪರಿಸ್ಥಿತಿಯಲ್ಲಿ ಭಾರೀ ಬದಲಾವಣೆಯನ್ನು ಉಂಟು ಮಾಡಿದೆ. ಕುಸಿದ ತೈಲ ಬೆಲೆ ಸರಕಾರದ ಬಜೆಟ್‌ಗೆ ತೂತು ಕೊರೆದಿದೆ ಹಾಗೂ ಸುದೀರ್ಘ ಕಾಲದಿಂದ ಚಾಲ್ತಿಯಲ್ಲಿರುವ ಅಲಿಖಿತ ಸಾಮಾಜಿಕ ಸೌಲಭ್ಯಗಳ ಒಪ್ಪಂದದ ಮೇಲೆ ಕರಿನೆರಳು ಬೀರಿದೆ. ಈ ಬದಲಾವಣೆ ದೇಶದ ಆರ್ಥಿಕತೆಯ ಮೇಲೆ ಈಗಾಗಲೇ ಪರಿಣಾಮ ಬೀರಿದೆ. ಸರಕಾರದ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ, ಸಚಿವಾಲಯಗಳ ವೆಚ್ಚದ ಮೇಲೆ ಮಿತಿ ಹೇರಲಾಗಿದೆ. ಇಷ್ಟೂ ಸಾಲದೆಂಬಂತೆ, ತೆರಿಗೆಗಳನ್ನು ವಿಧಿಸುವ ಹಾಗೂ ಸೌದಿ ಅರಾಮ್ಕಿ ಕಂಪೆನಿಯ ಶೇರುಗಳನ್ನು ಮಾರಾಟ ಮಾಡುವುದು- ಇವೇ ಮುಂತಾದ ಈವರೆಗೆ ಅಸಂಭವ ಎಂದು ಭಾವಿಸಲಾಗಿದ್ದ ಕ್ರಮಗಳ ಬಗ್ಗೆ ಉನ್ನತ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಸೌದಿ ಅರಾಮ್ಕಿ ಸರಕಾರಿ ಒಡೆತನದ ದೈತ್ಯ ತೈಲ ಸಂಸ್ಥೆಯಾಗಿದ್ದು, ಜಗತ್ತಿನ ಅತ್ಯಂತ ಬೆಲೆಬಾಳುವ ಕಂಪೆನಿ ಎಂಬುದಾಗಿ ಅಂದಾಜಿಸಲಾಗಿದೆ.
ಜಾಗತಿಕ ತೈಲ ಬೆಲೆಗೆ ಸ್ಥಿರತೆ ಒದಗಿಸುವ ನಿಟ್ಟಿನಲ್ಲಿ, ತೈಲ ಉತ್ಪಾದನೆ ಪ್ರಮಾಣವನ್ನು ಕಡಿಮೆಗೊಳಿಸುವ ಪ್ರಸ್ತಾಪವೊಂದನ್ನು ಸೌದಿ ಅರೇಬಿಯ, ರಶ್ಯ, ಕತಾರ್ ಮತ್ತು ವೆನೆಝುವೆಲದ ತೈಲ ಸಚಿವರು ಮಂಗಳವಾರ ಘೋಷಿಸಿದರು. ಆದರೆ, ಇರಾನ್ ಮತ್ತು ಇರಾಕ್ ಮುಂತಾದ ಇತರ ದೇಶಗಳು ಇದರಂತೆ ನಡೆಯದಿದ್ದರೆ, ಈ ಪ್ರಸ್ತಾಪ ಎಷ್ಟು ಪರಿಣಾಮಕಾರಿ ಎಂಬ ಸಂದೇಹವೂ ಇದೆ.
ಹೆಚ್ಚು ಕಷ್ಟಪಡಬೇಕಾದ ಯುವಜನರು
ಸೌದಿ ಅರೇಬಿಯದಲ್ಲಿ ಯುವ ಜನತೆಯ ಪ್ರಮಾಣ ಹೆಚ್ಚು. ಜನಸಂಖ್ಯೆಯ 70 ಶೇಕಡ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಕುಸಿಯುತ್ತಿರುವ ತೈಲ ಬೆಲೆ ದೇಶದ ಯುವ ಜನತೆಯ ನಿರೀಕ್ಷೆಗಳನ್ನೂ ತಗ್ಗಿಸಿದೆ. ತಮ್ಮ ಹೆತ್ತವರಿಗಿಂತ ಹೆಚ್ಚು ಕಷ್ಟಪಟ್ಟು ಕೆಲಸ ಮಾಡಬೇಕಾದ, ಕಡಿಮೆ ಉದ್ಯೋಗ ಭದ್ರತೆ ಹೊಂದಬೇಕಾದ ಹಾಗೂ ಕಡಿಮೆ ಸೌಲಭ್ಯಗಳನ್ನು ಪಡೆಯಬೇಕಾದ ಸಾಧ್ಯತೆಯನ್ನು ಅವರು ಎದುರಿಸುತ್ತಿದ್ದಾರೆ.