×
Ad

ಕನ್ಹಯ್ಯ ಕುಮಾರ್ ಜಾಮೀನು ಅರ್ಜಿ ವಿಚಾರಣೆ: ದಿಲ್ಲಿ ಹೈಕೋರ್ಟ್‌ಗೆ ವರ್ಗಾವಣೆ

Update: 2016-02-19 23:55 IST

ಹೊಸದಿಲ್ಲಿ, ಫೆ.19: ಜೆಎನ್‌ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾ ಕುಮಾರ್ ಜಾಮೀನು ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ದಿಲ್ಲಿ ಹೈಕೋರ್ಟ್‌ಗೆ ವರ್ಗಾಯಿಸಿದೆ. ಪ್ರಕರಣದ ಬಗ್ಗೆ ವಿಶೇಷ ನ್ಯಾಯಾಂಗ ಅಧಿಕಾರ ತೋರಿಸುವುದರಿಂದ ಅದನ್ನು ನಿಭಾಯಿಸಲು ತಾವು ‘ಅಸಮರ್ಥರೆಂಬ’ ತಪ್ಪು ಭಾವನೆಯನ್ನು ಕೆಳ ನ್ಯಾಯಾಲಯಗಳಲ್ಲಿ ಮೂಡಿಸಿದಂತಾಗುತ್ತದೆಂದು ಅದು ಉಲ್ಲೇಖಿಸಿದೆ.

ತಾವು ಈ ಅರ್ಜಿಯ ವಿಚಾರಣೆ ನಡೆಸಿದಲ್ಲಿ, ಸುಪ್ರೀಂ ಕೋರ್ಟ್‌ನ ಹೊರತಾಗಿ ಬೇರೆ ನ್ಯಾಯಾಲಯಗಳು ಈ ಪರಿಸ್ಥಿತಿಯನ್ನು ನಿಭಾಯಿಸಲು ಶಕ್ತವಾಗಿಲ್ಲವೆಂಬ ಅಭಿಪ್ರಾಯವನ್ನು ಕೊಟ್ಟಂತಾಗಬಹುದೆಂದು ನ್ಯಾಯಮೂರ್ತಿ ಜೆ.ಚೆಲಮೇಶ್ವರ್ ಅಭಿಪ್ರಾಯಿಸಿದರು.

ವಿದ್ಯಾರ್ಥಿಯ ಪ್ರಾಣಕ್ಕೆ ಹಾಗೂ ಭದ್ರತೆಗೆ ಅಪಾಯವಿದೆಯೆಂಬ ಕನ್ಹಯ್ಯೆನ ಪರ ವಕೀಲರ ಅಭಿಪ್ರಾಯವನ್ನು ಒಪ್ಪಿದ, ನ್ಯಾಯಮೂರ್ತಿ ಅಭಯ ಮನೋಹರ ಸಪ್ರೆ ಸದಸ್ಯರಾಗಿದ್ದ ನ್ಯಾಯ ಪೀಠ, ಸಾಂವಿಧಾನಿಕ ಶಿಷ್ಟಾಚಾರ ದಿಲ್ಲಿ ಹೈಕೋರ್ಟ್‌ನ ಕುರಿತು ಪರಸ್ಪರ ಗೌರವದಿಂದಾಗಿ, ಜಾಮೀನು ಮನವಿಯ ವಿಚಾರಣೆ ನಡೆಸದಿರಲು ಪ್ರಜ್ಞಾಪೂರ್ವಕವಾಗಿ ನಿರ್ಧರಿಸಿತು.

ದಿಲ್ಲಿ ಹೈಕೋರ್ಟ್ ಒಂದು ಸಾಂವಿಧಾನಿಕ ನ್ಯಾಯಾಲಯವೂ ಆಗಿದೆಯೆಂದು ನ್ಯಾ.ಚೆಲಮೇಶ್ವರ್ ಹೇಳಿದರು. ಕನ್ಹಯ್ಯಾನ ಜಾಮೀನು ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸುವಂತೆ ಹೈಕೋರ್ಟ್‌ಗೆ ಸೂಚಿಸಿದ ನ್ಯಾಯಪೀಠ, ಜಾಮೀನಿಗೆ ಸಂಬಂಧಿಸಿದ ಎಲ್ಲ ಕಡತಗಳು ಹಾಗೂ ದಾಖಲೆಗಳನ್ನು ತಕ್ಷಣವೇ ಹೈಕೋರ್ಟ್‌ಗೆ ವರ್ಗಾಯಿಸುವಂತೆ ಆದೇಶ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದವರಿಗೆ ಹೈಕೋರ್ಟ್‌ನಲ್ಲಿ ಭದ್ರತೆ ಒದಗಿಸುವ ಹೊಣೆಯನ್ನು ಕೇಂದ್ರ ಸರಕಾರ ಹಾಗೂ ದಿಲ್ಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ನೀಡಿದೆ.

ಪೊಲೀಸರು ಕರ್ತವ್ಯ ನಿಷ್ಠರಾಗಿದ್ದು, ಎಚ್ಚರಿಕೆ ವಹಿಸುತ್ತಾರೆಂದು ನ್ಯಾ.ಚೆಲಮೇಶ್ವರ ಹೇಳಿದರು. ಮುಂಜಾನೆ 10:30ಕ್ಕೆ ಆರಂಭವಾದ ವಿಚಾರಣೆಯುದ್ದಕ್ಕೂ ನ್ಯಾಯ ಪೀಠವು ನ್ಯಾಯಾಂಗ ಸಂಯಮವನ್ನು ಪ್ರದರ್ಶಿಸಿತ್ತು.

..............

 ಕನ್ಹಯ್ಯ ಮೈಮೇಲೆ ಹಲವು ಗಾಯದ ಗುರುತುಗಳು: ವೈದ್ಯಕೀಯ ಪರೀಕ್ಷಾ ವರದಿ

ಹೊಸದಿಲ್ಲಿ, ಫೆ.19: ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ನಡೆದಿದ್ದ ಹಲ್ಲೆಯಿಂದ ಜೆಎನ್‌ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾ ಕುಮಾರ್‌ಗೆ ಬಾಹ್ಯ ಗಾಯಗಳು ಆಗಿವೆಯೆಂದು ವೈದ್ಯಕೀಯ ಪರೀಕ್ಷಾ ವರದಿ ತಿಳಿಸಿದೆ. ಇದು ಪೊಲೀಸರ ಪ್ರತಿಪಾದನೆಗೆ ವಿರುದ್ಧವಾಗಿದೆ.

ಕನ್ಹಯ್ಯ ಕುಮಾರ್‌ಗೆ ಗಾಯಗಳಾಗಿವೆ. ಅವರ ಎಡಗಾಲು ಹಾಗೂ ಮೂಗಿಗೆ ಅನೇಕ ತರಚು ಗಾಯಗಳಾಗಿವೆ. ಎಡ ಹಿಮ್ಮಡಿಯ ನರಕ್ಕೂ ನೋವಾಗಿದೆಯೆಂದು ವೈದ್ಯಕೀಯ ವರದಿ ಬಹಿರಂಗಪಡಿಸಿದೆಯೆಂದು ಪೊಲೀಸ್ ಮೂಲವೊಂದು ತಿಳಿಸಿದೆ.

ಬುಧವಾರ ವಕೀಲರ ಗುಂಪೊಂದು ನ್ಯಾಯಾಲಯದಲ್ಲಿ ಕನ್ಹಯ್ಯಾನ ಮೇಲೆ ಹಲ್ಲೆ ನಡೆಸಿತ್ತು. ಈ ಘಟನೆಯ ಬಳಿಕ ದಿಲ್ಲಿ ಪೊಲೀಸ್ ಆಯುಕ್ತ ಭೀಮಸೇನ ಬಸ್ಸಿ, ಕನ್ಹಯ್ಯಿನಿಗೆ ಸೂಕ್ತ ರಕ್ಷಣೆ ನೀಡಲಾಗಿತ್ತು. ಆತ ಥಳಿತಕ್ಕೊಳಗಾಗಿಲ್ಲ ಎಂದಿದ್ದರು.

ಆದಾಗ್ಯೂ, ಆತನ ಮೇಲೆ ಕಲ್ಲು ತೂರಾಟ ನಡೆದ ವರದಿಯ ಕುರಿತು ತನಿಖೆಯೊಂದನ್ನು ಅವರು ಆರಂಭಿಸಿದ್ದರು.

........................

 ದಿಲ್ಲಿ ಹೈಕೋರ್ಟ್‌ನಲ್ಲಿ ಬಿಗಿ ಬಂದೋಬಸ್ತ್

ಹೊಸದಿಲ್ಲಿ, ಫೆ.19: ಜೆಎನ್‌ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾಕುಮಾರ್‌ರ ಜಾಮೀನು ಅರ್ಜಿ ವಿಚಾರಣೆಗೆ ಮುನ್ನ ದಿಲ್ಲಿ ಹೈಕೋರ್ಟ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕನ್ಹಯ್ಯಿರ ಜಾಮೀನು ಮನವಿಯ ವಿಚಾರಣೆ ನಡೆಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿದವರಿಗೆ ಭದ್ರತೆಯನ್ನು ಖಚಿತಪಡಿಸುವಂತೆ ಕೇಂದ್ರ ಸರಕಾರ ಹಾಗೂ ದಿಲ್ಲಿ ಪೊಲೀಸರಿಗೆ ಸೂಚಿಸಿದೆ.

ಕೆಳಗಿನ ನ್ಯಾಯಾಲಯಗಳಿಗೆ ಹೋಗುವುದು ಸಾಕಷ್ಟು ಸುರಕ್ಷಿತವೆಂದು ತನಗೆ ಅನಿಸುವುದಿಲ್ಲವೆಂದು ದೇಶದ್ರೋಹದ ಆರೋಪದಲ್ಲಿ ವಾರದ ಹಿಂದೆ ಬಂಧಿಸಲ್ಪಟ್ಟು, ಮಾ.2ರ ವರೆಗೆ ತಿಹಾರ್ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಕ್ಕೆ ಆದೇಶಿಸಲ್ಪಟ್ಟಿರುವ ಕನ್ಹಯ್ಯಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದನು.

ಕೇವಲ ಸುಪ್ರೀಂ ಕೋರ್ಟ್ ಮಾತ್ರ ಭದ್ರತೆ ಒದಗಿಸಲು ಶಕ್ತವಾಗಿದೆ. ಇತರ ನ್ಯಾಯಾಲಯಗಳಿಗೆ ಆ ಸಾಮರ್ಥ್ಯವಿಲ್ಲವೆಂದು ಜನರು ಭಾವಿಸಬಾರದೆಂದು ಹೇಳಿರುವ ಸುಪ್ರೀಂ ಕೋರ್ಟ್, ಆತನ ಜಾಮೀನು ಅರ್ಜಿಯನ್ನು ದಿಲ್ಲಿ ಹೈಕೋರ್ಟ್‌ಗೆ ವರ್ಗಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News