ಈಗ ಅಲಿಗಡ ಮುಸ್ಲಿಮ್ ವಿವಿಯಲ್ಲಿ ‘‘ಬೀಫ್ ಬಿರ್ಯಾನಿ’’ವಿವಾದ

Update: 2016-02-20 13:44 GMT

ಅಲಿಗಡ,ಫೆ.20:ಅಲ್ಪಸಂಖ್ಯಾತ ಶಿಕ್ಷಣಸಂಸ್ಥೆ ಎಂಬ ತನ್ನ ಪಟ್ಟವನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯ(ಅಮು)ವು ಇದೀಗ ಗೋಮಾಂಸ ಕುರಿತ ವಿವಾದದಲ್ಲಿ ಸಿಲುಕಿಕೊಂಡಿದೆ.

 ಅಮು ಮೆಡಿಕಲ್ ಕಾಲೇಜಿನ ಕ್ಯಾಂಟೀನಿನಲ್ಲಿ ‘‘ಬೀಫ್ ಬಿರ್ಯಾನಿ’’ಪೂರೈಸಲಾಗುತ್ತಿದೆ ಎಂಬ ಸಂದೇಶ ಶುಕ್ರವಾರ ವ್ಯಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹರಿದಾಡುವುದರೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದ ಭುಗಿಲೆದ್ದಿತ್ತು.

ಕ್ಯಾಂಟೀನಿನಲ್ಲಿ ಪೂರೈಕೆಯಾಗುತ್ತಿರುವುದು ಗೋಮಾಂಸವೇ ಹೊರತು ಎಮ್ಮೆಯ ಮಾಂಸವಲ್ಲ ಎಂಬ ಭಾವನೆಯನ್ನು ಈ ಸಂದೇಶವು ಪ್ರಸಾರಿಸಿದ್ದು, ಕ್ಯಾಂಟೀನಿನ ಮೆನು ಕಾರ್ಡ್‌ನ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಬಿಜೆಪಿ ಮೇಯರ್ ಶಕುಂತಲಾ ಭಾರ್ತಿ,ಪಕ್ಷದ ನಾಯಕರು ಮತ್ತು ಇತರ ಹಲವಾರು ಬಲಪಂಥೀಯ ಕಾರ್ಯಕರ್ತರು ಸೀನಿಯರ್ ಎಸ್.ಪಿ.ಕಚೇರಿಯೆದುರು ಪ್ರತಿಭಟನೆ ನಡೆಸಿ ‘‘ಬೀಫ್ ಬಿರ್ಯಾನಿ’’ಯನ್ನು ಪೂರೈಸುತ್ತಿರುವುದಕ್ಕಾಗಿ ಅಮು ಮೆಡಿಕಲ್ ಕಾಲೇಜಿನ ಕ್ಯಾಂಟೀನಿನ ಗುತ್ತಿಗೆದಾರನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಆಗ್ರಹಿಸಿದರು.

ಈ ಬಗ್ಗೆ ತನಿಖೆಯಿನ್ನೂ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವಾದದ ಸುದ್ದಿ ಹರಡುತ್ತಿದ್ದಂತೆ ವಿವಿಯ ಶಿಸ್ತುಪಾಲಕ ಎಂ.ಮೊಹ್ಸಿನ್‌ಖಾನ್ ನೇತೃತ್ವದಲ್ಲಿ ಕ್ಯಾಂಟೀನಿಗೆ ಧಾವಿಸಿದ ಹಿರಿಯ ಅಮು ಅಧಿಕಾರಿಗಳು ಪ್ರಾಥಮಿಕ ತನಿಖೆಯನ್ನು ನಡೆಸಿದರು.

ಇದು ಸಂಸ್ಥೆಯ ಹೆಸರಿಗೆ ಮಸಿ ಬಳಿಯಲು ನಡೆಸಿರುವ ದುರುದ್ದೇಶಪೂರಿತ ಪ್ರಯತ್ನವಾಗಿದೆ ಎಂದು ಆರೋಪಿಸಿದ ವಿವಿಯ ವಕ್ತಾರ ರಾಹತ್ ಅಬ್ರಾರ್ ಅವರು, ಮೆನುವಿನಲ್ಲಿ ಉಲ್ಲೇಖಿಸಲಾಗಿರುವ ‘‘ಬೀಫ್’’ ಎಮ್ಮೆಯ ಮಾಂಸವಾಗಿದೆ ಎಂದು ಸ್ಪಷ್ಟಪಡಿಸಿದರು.

 ಕ್ಯಾಂಟೀನಿನ ಗುತ್ತಿಗೆ ಅವಧಿ ಫೆ.23ರಂದು ಅಂತ್ಯಗೊಳ್ಳಲಿದೆ. ಅದರ ಮೇಲೆ ಕಣ್ಣಿಟ್ಟಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ವಿವಾದವನ್ನು ಸೃಷ್ಟಿಸಿವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News