ಭಾರತ ವಿರೋಧಿ ಹೇಳಿಕೆ | ಬಾಂಗ್ಲಾದೇಶಿ ರಾಯಭಾರಿಯನ್ನು ಕರೆಸಿದ ಕೇಂದ್ರ, ಪ್ರತಿಭಟನೆ ಸಲ್ಲಿಕೆ
ಮುಹಮ್ಮದ್ ರಿಯಾಜ್ ಹಮೀದುಲ್ಲಾ | Photo Credit : thehindu.com
ಹೊಸದಿಲ್ಲಿ,ಡಿ.17: ಢಾಕಾದಲ್ಲಿಯ ಭಾರತೀಯ ರಾಯಭಾರ ಕಚೇರಿಗೆ ಇತ್ತೀಚಿನ ಬೆದರಿಕೆಗಳು ಮತ್ತು ಬಾಂಗ್ಲಾದೇಶಿ ರಾಜಕೀಯ ನಾಯಕರಿಂದ ಪ್ರಚೋದನಾಕಾರಿ ಭಾರತ ವಿರೋಧಿ ಹೇಳಿಕೆಗಳ ಕುರಿತು ಬುಧವಾರ ದಿಲ್ಲಿಯಲ್ಲಿಯ ಬಾಂಗ್ಲಾದೇಶ ರಾಯಭಾರಿ ಮುಹಮ್ಮದ್ ರಿಯಾಜ್ ಹಮೀದುಲ್ಲಾ ಅವರನ್ನು ಕರೆಸಿಕೊಂಡ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಿಧ್ಯುಕ್ತ ರಾಜತಾಂತ್ರಿಕ ಪ್ರತಿಭಟನೆಯನ್ನು ದಾಖಲಿಸಿದೆ.
ಬಾಂಗ್ಲಾದೇಶದ ನ್ಯಾಷನಲ್ ಸಿಟಿಜನ್ ಪಾರ್ಟಿಯ (ಎನ್‌ಸಿಪಿ) ನಾಯಕ ಹಸ್ನತ್ ಅಬ್ದುಲ್ಲಾ,ತನ್ನ ದೇಶವು ಭಾರತ ವಿರೋಧಿ ಪಡೆಗಳಿಗೆ ಆಶ್ರಯ ನೀಡಲಿದೆ ಮತ್ತು ಭಾರತ ‘ಏಳು ಸೋದರಿಯರನ್ನು(ಈಶಾನ್ಯ ರಾಜ್ಯಗಳನ್ನು ಬಣ್ಣಿಸಲು ಬಳಸುವ ಪದ)’ ಅದರಿಂದ ಬೇರ್ಪಡಿಸುವುದಾಗಿ ಕಳೆದ ವಾರ ಬೆದರಿಕೆಯೊಡ್ಡಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಬಾಂಗ್ಲಾದೇಶದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಹಮೀದುಲ್ಲಾ ಅವರಿಗೆ ಭಾರತದ ತೀವ್ರ ಕಳವಳಗಳನ್ನು ತಿಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ. ಢಾಕಾದಲ್ಲಿರುವ ಭಾರತದ ರಾಯಭಾರ ಕಚೇರಿಗೆ ಬೆದರಿಕೆಯೊಡ್ಡಿರುವ ಕೆಲವು ಉಗ್ರಗಾಮಿ ಶಕ್ತಿಗಳ ಚಟುವಟಿಕೆಗಳ ಬಗ್ಗೆಯೂ ಅವರಿಗೆ ತಿಳಿಸಲಾಗಿದೆ ಎಂದಿದೆ.
ಬಾಂಗ್ಲಾದೇಶದಲ್ಲಿಯ ಇತ್ತೀಚಿನ ಘಟನೆಗಳಿಗೆ ಸಂಬಂಧಿಸಿದಂತೆ ಉಗ್ರಗಾಮಿ ಶಕ್ತಿಗಳ ಸುಳ್ಳು ನಿರೂಪಣೆಯನ್ನು ತಾನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ ಎಂದೂ ಭಾರತವು ತಿಳಿಸಿದೆ.
ಭಾರತವು ಬಾಂಗ್ಲಾದೇಶದ ಜನರ ಜೊತೆ ನಿಕಟ ಮತ್ತು ಸ್ನೇಹಪರ ಸಂಬಂಧಗಳನ್ನು ಹೊಂದಿದೆ. ಈ ಸಂಬಂಧಗಳು ಬಾಂಗ್ಲಾದೇಶದ ವಿಮೋಚನಾ ಹೋರಾಟದಲ್ಲಿ ಬೇರೂರಿದ್ದು,ವಿವಿಧ ಅಭಿವೃದ್ಧಿ ಉಪಕ್ರಮಗಳಿಂದ ಬಲಗೊಂಡಿವೆ. ನಾವು ಬಾಂಗ್ಲಾದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯ ಪರವಾಗಿದ್ದೇವೆ ಹಾಗೂ ಶಾಂತಿಯುತ ವಾತಾವರಣದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗೆ ನಿರಂತರವಾಗಿ ಕರೆ ನೀಡುತ್ತಿದ್ದೇವೆ. ಬಾಂಗ್ಲಾದೇಶದ ಮಧ್ಯಂತರ ಸರಕಾರವು ತನ್ನ ರಾಜತಾಂತ್ರಿಕ ಬಾಧ್ಯತೆಗಳಿಗೆ ಅನುಗುಣವಾಗಿ ಭಾರತದ ರಾಯಭಾರ ಕಚೇರಿ ಮತ್ತು ಇತರ ನೆಲೆಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.