ಜೆಎನ್‌ಯು ವಿವಾದ:ಮೂವರಿಗಾಗಿ ಲುಕ್ ಔಟ್ ನೋಟಿಸ್
ಹೊಸದಿಲ್ಲಿ,ಫೆ.20: ದೇಶವಿರೋಧಿ ಘೋಷಣೆಗಳನ್ನು ಕೂಗಲಾಗಿತ್ತೆನ್ನಲಾದ,ಕಳೆದ ವಾರದ ವಿವಾದಾತ್ಮಕ ಜೆಎನ್‌ಯು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮೂವರು ಯುವಕರಿಗಾಗಿ ದಿಲ್ಲಿ ಪೊಲೀಸರು ಲುಕ್ ಔಟ್ ನೋಟಿಸುಗಳನ್ನು ಹೊರಡಿಸಿದ್ದಾರೆ.
ಜೆಎನ್‌ಯು ವಿದ್ಯಾರ್ಥಿಗಳೆನ್ನಲಾಗಿರುವ ಈ ಶಂಕಿತರು ದೇಶವನ್ನು ಬಿಟ್ಟು ಪರಾರಿಯಾಗದಂತೆ ವಿಮಾನ ನಿಲ್ದಾಣ ಅಧಿಕಾರಿಗಳನ್ನು ಕಟ್ಟೆಚ್ಚರದಲ್ಲಿರಿಸುವಂತೆ ಪೊಲೀಸರು ವಿದೇಶ ಪ್ರಾದೇಶಿಕ ನೋಂದಾವಣೆ ಕಚೇರಿಗೆ ತಿಳಿಸಿದ ನಂತರ ಈ ನೋಟಿಸುಗಳನ್ನು ಹೊರಡಿಸಲಾಗಿದೆ.
ಈ ಮೂವರು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮುಖ್ಯ ಸಂಚುಕೋರರಾಗಿದ್ದಾರೆ ಎಂದು ಪೊಲೀಸರು ಗುರುತಿಸಿದ್ದಾರೆ.
ಫೆ.9ರ ನಂತರ ಈ ಯುವಕರ ಮೊಬೈಲ್ ಫೋನಗಳು ಸ್ವಿಚ್ ಆಫ್ ಆಗುವವರೆಗಿನ ಕರೆಗಳ ವಿವರಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಸಾಕ್ಷಿಗಳಾಗಿರುವ 12ಕ್ಕೂ ಅಧಿಕ ಜೆಎನ್‌ಯು ವಿದ್ಯಾರ್ಥಿಗಳ ಹೇಳಿಕೆಗಳನ್ನು ತನಿಖಾತಂಡವು ದಾಖಲಿಸಿಕೊಂಡಿದೆ ಎಂದು ಮೂಲಗಳು ತಿಳಿಸಿದವು. ತನ್ಮಧ್ಯೆ ವಿವಿಧ ನಗರಗಳಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಗಳಲ್ಲಿ ವಿಶೇಷ ಘಟಕವನ್ನೂ ತೊಡಗಿಸಿಕೊಳ್ಳಲಾಗಿದೆ. ಜೆಎನ್‌ಯು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ 10 ಜನರಿಗಾಗಿ ಪೊಲೀಸರು ಶೋಧಿಸುತ್ತಿದ್ದಾರೆ.