ದಲಿತ ಸ್ನಾನ ಮಾಡಿದ್ದ ದೇವಸ್ಥಾನದ ಕೆರೆಯ ಶುದ್ಧೀಕರಣ ವಿಧಿ ನಡೆಸಿದ ಅರ್ಚಕರು
ಕೊಝಿಕೊಡೆ,ಫೆ.20: ದೇವಸ್ಥಾನವೊಂದರ ಕೆರೆಯಲ್ಲಿ ದಲಿತ ವ್ಯಕ್ತಿಯೋರ್ವ ಸ್ನಾನ ಮಾಡಿದ ಬಳಿಕ ಅರ್ಚಕರು ಶುದ್ಧೀಕರಣ ಪ್ರಕ್ರಿಯೆ ಕೈಗೊಂಡ ಘಟನೆ ಇಲ್ಲಿ ನಡೆದಿದೆ.
ಕೊಝಿಕೊಡೆ ಸಮೀಪದ ಕೊಯಿಲಾಂಡಿಯ ಕೊಂಡಂವಳ್ಳಿ ಅಯ್ಯಪ್ಪ ದೇವಸ್ಥಾನದಲ್ಲಿ ಜ.26ರಂದು ಈ ಘಟನೆ ನಡೆದಿದೆ.
ದುರವಸ್ಥೆಯಲ್ಲಿದ್ದ ದೇವಸ್ಥಾನದ ಕೆರೆಯ ನವೀಕರಣಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿದ್ದು,ಅಧ್ಯಕ್ಷನಾಗಿ ದಲಿತ ವ್ಯಕ್ತಿಯೋರ್ವನನ್ನು ಆಯ್ಕೆ ಮಾಡಲಾಗಿತ್ತು. ಮೊದಲ ಹಂತದ ಕಾಮಗಾರಿ ಮುಗಿದ ಬಳಿಕ ದೇವಸ್ಥಾನದ ಅಧಿಕಾರಿಗಳು ಆತನನ್ನು ಹುದ್ದೆಯಿಂದ ತೆಗೆದು ಹಾಕಿದ್ದರು. ನವೀಕರಣ ಪೂರ್ಣಗೊಂಡು 2015,ಅ.17ರಂದು ನೂತನ ಕೆರೆಯನ್ನು ದೇವಸ್ಥಾನಕ್ಕೆ ಅರ್ಪಿಸಲಾಗಿತ್ತು. ಸಮಾರಂಭದ ಭಾಗವಾಗಿ ದಲಿತ ವ್ಯಕ್ತಿ ದೇವಸ್ಥಾನದ ತಂತ್ರಿಗಳಿಗೆ ದಕ್ಷಿಣೆಯನ್ನು ನೀಡಿ ಕೆರೆಯಲ್ಲಿ ಸ್ನಾನವನ್ನು ಮಾಡಿದ್ದ ಎಂದು ದಲಿತ ನಾಯಕರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆದರೆ ದಲಿತ ವ್ಯಕ್ತಿ ಸ್ನಾನ ಮಾಡಿದ್ದು ಕೆಲವರಿಗೆ ಅಸಮಾಧಾನವನ್ನುಂಟು ಮಾಡಿತ್ತು. ಹೀಗಾಗಿ ಅವರು ಜ.26ರಂದು ಮರು ಅರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ದೇವಸ್ಥಾನದ ಕೆರೆಯಲ್ಲಿ ಶುದ್ಧೀಕರಣ ಪೂಜೆಯನ್ನು ನಡೆಸಿದ ಬಳಿಕ ಮೇಲ್ಜಾತಿಗಳ ಜನರು ಕೆರೆಯಲ್ಲಿ ಸ್ನಾನ ಮಾಡಿದ್ದಾರೆ. ದೇವಸ್ಥಾನ ಸಮಿತಿಗಾಗಲೀ ತಂತ್ರಿಗಳಿಗಾಗಲೀ ಈ ವಿಷಯ ಗೊತ್ತಿರಲಿಲ್ಲ ಎಂದು ತಿಳಿಸಿದ ಅವರು, ಇದು ಕೇರಳದಲ್ಲಿ ಜಾತಿ ವ್ಯವಸ್ಥೆಯನ್ನು ಮರಳಿ ತರುವ ಸಂಚಿನ ಭಾಗವಾಗಿದೆ ಎಂದು ಆರೋಪಿಸಿದರು.
ಶೆಂಗೊಟ್ಟುಕಾವು ಗ್ರಾಮ ಪಂಚಾಯತ್ ಅಧ್ಯಕ್ಷ ಕೂಮುಲಿ ಕರುಣಾಕರನ್ ಅವರು ಈ ಶುದ್ಧೀಕರಣ ಪ್ರಕ್ರಿಯೆಯ ನೇತೃತ್ವ ವಹಿಸಿದ್ದು,ಮಾಜಿ ಶಾಸಕ ಪಿ.ವಿಶ್ವನ್ ಅವರೂ ಉಪಸ್ಥಿತರಿದ್ದರು ಎಂದರು.
ದಲಿತರು ಮತ್ತು ಇತರ ಸಾಮಾಜಿಕ ಕಾರ್ಯಕರ್ತರು ಇಂತಹ ಅನಾಗರಿಕ ಕ್ರಮಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಈ ನಾಯಕರು ಹೇಳಿದರು.