ಫ್ರೀಡಂ 251:ರಿಂಗಿಂಗ್ ಬೆಲ್ಸ್ ಮೇಲೆ ಆದಾಯ ತೆರಿಗೆ ಇಲಾಖೆಯ ನಿಗಾ
ಹೊಸದಿಲ್ಲಿ,ಫೆ.20: ವಿಶ್ವದಲ್ಲಿಯೇ ಅತ್ಯಂತ ಅಗ್ಗದ ಸ್ಮಾರ್ಟ್‌ಫೋನ್ ‘‘ಫ್ರೀಡಂ 251’’ನ್ನು ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿರುವ ನೊಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿಯ ಮೇಲೀಗ ಅಬಕಾರಿ ಮತ್ತು ಆದಾಯ ತೆರಿಗೆ ಇಲಾಖೆಗಳ ಕಣ್ಣು ಬಿದ್ದಿದೆ. ಇದೇ ವೇಳೆ ಇಷ್ಟೊಂದು ಸೌಲಭ್ಯಗಳನ್ನು ಹೊಂದಿರುವ ಫೋನ್‌ನ್ನು ಕೇವಲ 251 ರೂ.ಗೆ ನೀಡಲು ಸಾಧ್ಯವೇ ಎಂಬ ಬಗ್ಗೆ ಚರ್ಚೆ ತಾರಕಕ್ಕೇರುತ್ತಿದೆ.ಕಂಪನಿಯ ಹಣಕಾಸು ಸ್ವರೂಪವನ್ನು ಪರಿಶೀಲಿಸುತ್ತಿರುವ ಆದಾಯ ತೆರಿಗೆ ಇಲಾಖೆಯು ಕಂಪನಿಗಳ ರಿಜಿಸ್ಟ್ರಾರ್‌ರಿಂದ ಸೇರಿದಂತೆ ಕೆಲವು ದಾಖಲೆಗಳನ್ನು ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.ಅಬಕಾರಿ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಕಂಪನಿಗೆ ಭೇಟಿ ನೀಡಿದ್ದು ನಿಜ. ಮೇಕ್ ಇನ್ ಇಂಡಿಯಾ,ಸ್ಕಿಲ್ ಇಂಡಿಯಾ ಮತ್ತು ಸ್ಟಾರ್ಟ್‌ಪ್ ಇಂಡಿಯಾ ಅಭಿಯಾನಗಳಡಿ ಮಹತ್ವದ ಸಾಧನೆಗೆ ನಾವು ಯೋಜನೆ ಹಾಕಿಕೊಂಡಿರುವುದರಿಂದ ಅವರು ಭವಿಷ್ಯಕ್ಕಾಗಿ ಕೆಲವು ಮಾರ್ಗಸೂಚಿಗಳನ್ನು ನಮಗೆ ನೀಡಿದ್ದಾರೆ ಮತ್ತು ಸಂಪೂರ್ಣ ಬೆಂಬಲ ಮತ್ತು ಸಹಕಾರದ ಭರವಸೆ ನೀಡಿದ್ದಾರೆ ಎಂದು ರಿಂಗಿಂಗ್ ಬೆಲ್ಸ್‌ನ ಅಧ್ಯಕ್ಷ ಅಶೋಕ ಛಡ್ಡಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.ರಿಂಗಿಂಗ್ ಬೆಲ್ಸ್ ತನ್ನ ಪ್ರತಿಸ್ಪರ್ಧಿ ಕಂಪನಿ ಆಡ್‌ಕಾಮ್‌ನ ಹ್ಯಾಂಡಸೆಟ್‌ನ್ನು ತನ್ನದೆಂದು ಹೇಳಿಕೊಂಡು ಪ್ರದರ್ಶಿಸುತ್ತಿದೆ ಎಂಬ ವಿವಾದದ ಕುರಿತಂತೆ ಛಡ್ಡಾ,ನಮ್ಮ ಮೊಬೈಲ್ ಫೋನ್ ಹೇಗೆ ಕಾಣಿಸಲಿದೆ ಎನ್ನುವುದನ್ನು ತೋರಿಸಲು ನಾವು ಬಯಸಿದ್ದೆವು. ಇದೇ ಅಂತಿಮ ಉತ್ಪನ್ನವಲ್ಲ ಎಂದು ಸಮಜಾಯಿಷಿ ನೀಡಿದರು.ಫ್ರೀಡಂ 251 ಫೋನ್‌ನ್ನು ಭಾರತೀಯ ಗುಣಮಟ್ಟ ಘಟಕ(ಬಿಐಎಸ್)ದ ಪ್ರಮಾಣಪತ್ರವಿಲ್ಲದೆ ಮಾರಾಟ ಮಾಡುತ್ತಿರುವ ಬಗ್ಗೆ ರಿಂಗಿಂಗ್ ಬೆಲ್ಸ್‌ನಿಂದ ಸ್ಪಷ್ಟನೆಯನ್ನು ಕೇಳಿರುವ ದೂರಸಂಪರ್ಕ ಸಚಿವಾಲಯವು, ಕಂಪನಿಯ ವಿಶ್ವಾಸಾರ್ಹತೆಯ ಬಗ್ಗೆ ತನಿಖೆ ನಡೆಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿದೆ.ಕಂಪನಿಯು ಮೊದಲ ದಿನ 3.70 ಕೋಟಿ ಮತ್ತು ಎರಡನೆಯ ದಿನವಾದ ಶನಿವಾರ 2.47 ಕೋಟಿ ಬೇಡಿಕೆಗಳನ್ನು ಸ್ವೀಕರಿಸಿದೆ.