×
Ad

ಪಾಕ್ ತನಿಖಾ ತಂಡದ ಭೇಟಿಗೆ ಭಾರತದ ಸಮ್ಮತಿ

Update: 2016-02-22 23:48 IST

ಇಸ್ಮಾಮಾಬಾದ್, ಫೆ.22: ಪಠಾಣ್‌ಕೋಟ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿ ವಿಶೇಷ ತನಿಖಾ ತಂಡವೊಂದನ್ನು (ಸಿಟ್) ಕಳುಹಿಸುವುದಕ್ಕೆ ಇಸ್ಮಾಮಾಬಾದ್‌ಗೆ ಭಾರತದ ಅಧಿಕಾರಿಗಳಿಂದ ಹಸಿರು ನಿಶಾನೆ ದೊರೆತಿದೆಯೆಂದು ಪಾಕಿಸ್ತಾನದ ಆಂತರಿಕ ಸಚಿವ ಚೌಧರಿ ನಿಸಾರ್ ಅಲಿಖಾನ್ ರವಿವಾರ ತಿಳಿಸಿದ್ದಾರೆ. ಇದಕ್ಕಾಗಿ ಪಾಕಿಸ್ತಾನವು ಭಾರತದ ಅನುಮತಿ ಕೋರಿತ್ತು.
ಪಠಾಣ್‌ಕೋಟ್ ವಾಯು ನೆಲೆಯ ಮೇಲಿನ ದಾಳಿಯಲ್ಲಿ ಒಳಗೊಂಡಿದ್ದ ಅನಾಮಧೇಯ ಶಂಕಿತರ ವಿರುದ್ಧ ಪಾಕಿಸ್ತಾನದ ಭಯೋತ್ಪಾದನೆ ತಡೆ ಇಲಾಖೆಯು ಎಫ್‌ಐಆರ್ ಒಂದನ್ನು ದಾಖಲಿಸಿದೆ. ಆದರೆ, ಈ ಕ್ರಮಕ್ಕೆ ದೇಶದ ಭದ್ರತಾ ವಿಶ್ಲೇಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಸಿಟ್‌ನ ಭೇಟಿಯ ಬಗ್ಗೆ 5 ದಿನಗಳ ಮೊದಲು ಅಧಿಸೂಚಿಸಬೇಕೆಂದು ಭಾರತ ತಿಳಿಸಿದೆ.
ಪ್ರಾಥಮಿಕ ತನಿಖೆಯ ವೇಳೆ ಹೊರ ಬಂದಿರುವ ಕೆಲವು ಪ್ರಶ್ನೆಗಳು ಹಾಗೂ ತಪ್ಪಿರುವ ಕೊಂಡಿಗಳಿವೆ. ತಮ್ಮ ವಿಶೇಷ ತನಿಖಾ ತಂಡ ಭಾರತಕ್ಕೆ ಈ ಎಲ್ಲ ಮಾಹಿತಿಗಳೊಂದಿಗೆ ಹೋಗಲಿದೆ. ಈಗ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆ ಪೂರ್ಣಗೊಂಡಿದೆ. ಮುಂದಿನ ಕೆಲವು ದಿನ ಮಾತುಕತೆಯ ವಿನಿಮಯ ನಡೆಯಲಿದೆ. 5 ದಿನಗಳ ಬಳಿಕ ಸಿಟ್ ಭಾರತಕ್ಕೆ ಹೋಗಲಿದೆಯೆಂದು ಖಾನ್ ಹೇಳಿದ್ದಾರೆ.
ಎಫ್‌ಐಆರ್‌ನ ಕುರಿತು ಗಡಿಯ ಎರಡೂ ಕಡೆಗಳ ಎಲ್ಲ ವ್ಯಂಗ್ಯ ಸೂಚನೆಗಳು ‘ಚಹಾದ ಕಪ್ಪಿನಲ್ಲಿನ ಬಿರುಗಾಳಿಯಾಗಿದೆ’. ಭಾರತವು ಪಾಕಿಸ್ತಾನಕ್ಕೆ ನೀಡಿರುವ ಕೆಲವು ದೂರವಾಣಿ ಸಂಖ್ಯೆಗಳನ್ನಾಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಸಂಖ್ಯೆಗಳನ್ನು ಯಾರು ನೋಂದಣಿ ಮಾಡಿಸಿಕೊಂಡಿದ್ದಾರೆಂಬ ಕುರಿತು ಸಿಟ್ ತನಿಖೆ ನಡೆಸುತ್ತಿದ್ದು, ಕೆಲವು ಬಂಧನಗಳನ್ನೂ ಮಾಡಲಾಗಿದೆಯೆಂದು ಅವರು ತಿಳಿಸಿದ್ದಾರೆ.
ಆ ದೂರವಾಣಿ ಸಂಖ್ಯೆಗಳನ್ನು ಔಪಚಾರಿಕವಾಗಿ ಎಫ್‌ಐಆರ್‌ನ ಭಾಗವಾಗಿಸಲಾಗಿದೆ. ಆ ಸಂಖ್ಯೆಗಳ ಮೇಲೆ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಆದರೆ, ಸೇವಾ ಪೂರೈಕೆದಾರರಿಂದ ಆ ಸಂಖ್ಯೆಗಳ ಬಗ್ಗೆ ಸೂಕ್ತ ದೂರವಾಣಿ ದಾಖಲೆ ತಮಗೆ ದೊರಕಿದ ಬಳಿಕವಷ್ಟೇ ನಿಜವಾದ ತನಿಖೆ ನಡೆಸಲು ಸಾಧ್ಯ. ಈ ಮಾಹಿತಿಯನ್ನು ತನಿಖಾ ತಂಡಕ್ಕೆ ಒದಗಿಸಬೇಕು. ಎರಡನೆಯದಾಗಿ ಭಾರತವು ಅನೌಪಚಾರಿಕವಾಗಿ ತಮಗೆ ನೀಡಿರುವ ಕೆಲವು ಹೆಸರುಗಳು, ಅವುಗಳಿಗೂ ಈ ದೂರವಾಣಿ ಸಂಖ್ಯೆಗಳಿಗೂ ಏನು ಸಂಬಂಧವೆಂಬುದನ್ನು ಪರಿಶೀಲಿಸಲಾಗುವುದು. ಸಿಟ್‌ನ ಭೇಟಿಗೆ ಸಂಬಂಧಿಸಿದ ನಿರ್ಧಾರವೊಂದನ್ನು ಮುಂದಿನ ಕೆಲವೇ ದಿನಗಳಲ್ಲಿ ಕೈಗೊಳ್ಳಲಾಗುವುದೆಂದು ಖಾನ್ ಹೇಳಿದ್ದಾರೆ.
 ಜ.15ರಂದು ನಿಗದಿಯಾಗಿದ್ದ ಭಾರತ-ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಪಠಾಣ್‌ಕೋಟ್ ದಾಳಿಯ ಕಾರಣ ಸ್ಥಗಿತಗೊಳಿಸಲಾಗಿರುವ ಹಿನ್ನೆಲೆಯಲ್ಲಿ ದಾಳಿಯ ಕುರಿತು ಪಾಕಿಸ್ತಾನ ನಡೆಸುವ ತನಿಖೆ ಮಹತ್ವ ಪಡೆದಿದೆ. ಎರಡು ದಿನಗಳಿಗೂ ಹೆಚ್ಚು ಕಾಲ ನಡೆದಿದ್ದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ 7 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಪಾಕಿಸ್ತಾನ ಮೂಲದ ಭಯೋತ್ಪಾದಕರೇ ಈ ದಾಳಿ ನಡೆಸಿದ್ದರೆಂಬುದು ಭಾರತದ ಖಚಿತ ನಿಲುವಾಗಿದೆ. ಮುಂದಿನ ತಿಂಗಳು ವಾಶಿಂಗ್ಟನ್‌ನಲ್ಲಿ ನಡೆಯಲಿರುವ ಅಣು ಸಮ್ಮೇಳನದ ವೇಳೆ ಇಬ್ಬರು ಪ್ರಧಾನಿಗಳಾದ ನರೇಂದ್ರ ಮೋದಿ ಹಾಗೂ ನವಾಝ್ ಶರೀಫ್ ಭೇಟಿಯಾಗುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News