ಮುಝಫ್ಫರ್ ನಗರ ಗಲಭೆ ಪ್ರಕರಣದ ತೀರ್ಪು ಹೈಕೋರ್ಟ್‌ನಲ್ಲಿ ಮೇಲ್ಮನವಿಗೆ ಉ.ಪ್ರ. ನಿರ್ಧಾರ
ಮೀರತ್, ಫೆ.22: ಕಳೆದ 2013ರ ಮುಝಫ್ಫರ್‌ನಗರ ದಂಗೆ ಪ್ರಕರಣಗಳಲ್ಲಿ ಇತ್ತೀಚೆಗೆ 39 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದ ಬಗ್ಗೆ ಆಕ್ರೋಶ ವ್ಯಕ್ತವಾಗಿರುವಂತೆಯೇ ಈ ತೀರ್ಪನ್ನು ತಾನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸುವೆನೆಂದು ಉತ್ತರ ಪ್ರದೇಶ ಸರಕಾರವು ಹೇಳಿದೆ.
ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ತಾವೀಗಾಗಲೇ ರಾಜ್ಯ ಸರಕಾರಕ್ಕೆ ಕಳುಹಿಸಿದ್ದೇವೆಂದು ಮುಝಫ್ಫರ್‌ನಗರ ಹಾಗೂ ಶಾಮ್ಲಿಯ ಜಿಲ್ಲಾ ದಂಡಾಧಿಕಾರಿಗಳು ಹೇಳಿದ್ದರೆ, ಬಾಘಪತ್ ಆಡಳಿತವು ಮುಂದಿನ 48 ತಾಸುಗಳೊಳಗೆ ಅಗತ್ಯ ದಾಖಲೆಗಳನ್ನು ಕಳುಹಿಸುವೆನೆಂದಿದೆ.
ಜಿಲ್ಲಾ ಸರಕಾರಿ ವಕೀಲರಿಂದ ತಾವು ಪಡೆದ ಕಾನೂನು ಸಲಹೆ ಹಾಗೂ ಪೊಲೀಸರ ಶಿಫಾರಸುಗಳ ಆಧಾರದಲ್ಲಿ ಅಲಹಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅಗತ್ಯವಿರುವ ಎಲ್ಲ ದಾಖಲೆಗಳನ್ನು ತಾವು ಸಂಗ್ರಹಿಸಿದ್ದು, ಕಾನೂನು ಇಲಾಖೆಗೆ ಕಳುಹಿಸಿದ್ದೇವೆ. ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆಯೆಂದು ಮುಝಫ್ಫರ್‌ನಗರದ ಜಿಲ್ಲಾ ದಂಡಾಧಿಕಾರಿ ನಿಖಿಲ್‌ಚಂದ್ರ ಶುಕ್ಲಾ ಟಿಒಐಗೆ ತಿಳಿಸಿದ್ದಾರೆ.
ಶಾಮ್ಲಿಯ ಆರೋಪಿಗಳ ಖುಲಾಸೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ರಾಜ್ಯ ಸರಕಾರಕ್ಕೆ ಕಳುಹಿಸಲಾಗಿದೆಯೆಂದು ಶಾಮ್ಲಿಯ ಜಿಲ್ಲಾ ದಂಡಾಧಿಕಾರಿ ಓಂಪ್ರಕಾಶ್ ಶರ್ಮಾ ಹೇಳಿದ್ದಾರೆ.
2013ರ ಮುಝಫ್ಫರ್‌ನಗರ ದಂಗೆಗೆ ಸಂಬಂಧಿಸಿದ ಎಲ್ಲ 5 ಪ್ರಕರಣಗಳ ತೀರ್ಪು ಕಳೆದೆರಡು ತಿಂಗಳುಗಳಲ್ಲಿ ಪ್ರಕಟವಾಗಿದೆ. ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 34 ಮಂದಿ ಆರೋಪಿಗಳನ್ನು ಮುಝಫ್ಫರ್‌ನಗರ ಹಾಗೂ ಶಾಮ್ಲಿಯ ನ್ಯಾಯಾಲಯಗಳು ಖುಲಾಸೆಗೊಳಿಸಿವೆ. ಬಾಘಪತ್‌ನ ಒಂದು ಪ್ರಕರಣ ಐವರು ಆರೋಪಿಗಳನ್ನೂ ಬಿಡುಗಡೆಗೊಳಿಸಲಾಗಿದೆ.
ಕೊಲೆ, ಸಾಮೂಹಿಕ ಅತ್ಯಾಚಾರ ಹಾಗೂ ಡಕಾಯಿತಿಗೆ ಸಂಬಂಧಿಸಿದ ಹೆಚ್ಚಿನ ಪ್ರಕರಣಗಳಲ್ಲಿ ಸಾಕ್ಷಿಗಳು ತಿರುಗಿ ಬಿದ್ದುದು 39 ಮಂದಿ ಆರೋಪಿಗಳ ಬಿಡುಗಡೆ ಕಾರಣವಾಗಿತ್ತು.