×
Ad

ಪಾಕಿಸ್ತಾನ ಸೂಪರ್ ಲೀಗ್: ಇಸ್ಲಾಮಾಬಾದ್ ಯುನೈಟೆಡ್ ಚಾಂಪಿಯನ್

Update: 2016-02-24 23:47 IST

 ದುಬೈ, ಫೆ.24: ಡ್ವೇಯ್ನಾ ಸ್ಮಿತ್(73 ರನ್, 51 ಎಸೆತ) ಹಾಗೂ ನಾಯಕ ಬ್ರಾಡ್ ಹಡಿನ್(61 ರನ್, 39 ಎಸೆತ) ಅರ್ಧಶತಕದ ಕೊಡುಗೆಯ ನೆರವಿನಿಂದ ಕ್ವೆಟ್ಟಾ ಗ್ಲಾಡಿಯೇಟರ್ಸ್‌ ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿದ ಇಸ್ಲಾಮಾಬಾದ್ ಯುನೈಟೆಡ್ ತಂಡ ಮೊದಲ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಚಾಂಪಿಯನ್ ಪಟ್ಟಕ್ಕೆ ಏರಿದೆ.

ಮಂಗಳವಾರ ನಡೆದ ಪಿಎಸ್‌ಎಲ್ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕ್ವೆಟ್ಟಾ ತಂಡ ಪಾಕ್‌ನ ಆಲ್‌ರೌಂಡರ್ ಅಹ್ಮದ್ ಶೆಹಝಾದ್(64 ರನ್, 39 ಎಸೆತ) ಹಾಗೂ ಶ್ರೀಲಂಕಾದ ಹಿರಿಯ ದಾಂಡಿಗ ಕುಮಾರ ಸಂಗಕ್ಕರ(55 ರನ್, 32 ಎಸೆತ) 3ನೆ ವಿಕೆಟ್‌ಗೆ ಸೇರಿಸಿದ 87 ರನ್ ಜೊತೆಯಾಟದ ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 174 ರನ್ ಗಳಿಸಿತು.

  ಗೆಲ್ಲಲು ಕಠಿಣ ಸವಾಲು ಪಡೆದ ಇಸ್ಲಾಮಾಬಾದ್‌ಗೆ ಸ್ಮಿತ್ ಹಾಗೂ ಶಾರ್ಜೀಲ್ ಖಾನ್(12) 5.4 ಓವರ್‌ಗಳಲ್ಲಿ 54 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಶಾರ್ಜೀಲ್ ಔಟಾದ ನಂತರ ನಾಯಕ ಹಡಿನ್ ಜೊತೆ ಕೈ ಜೋಡಿಸಿದ ಸ್ಮಿತ್ 2ನೆ ವಿಕೆಟ್‌ಗೆ 85 ರನ್ ಜೊತೆಯಾಟ ನಡೆಸಿ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು.

ಇಸ್ಲಾಮಾಬಾದ್ ತಂಡದ ಬೌಲಿಂಗ್‌ನಲ್ಲಿ ಆ್ಯಂಡ್ರೆ ರಸ್ಸಲ್ ಹಾಗೂ ಸ್ಯಾಮುಯೆಲ್ ಬದ್ರೀ ತಲಾ 3 ಹಾಗೂ 1 ವಿಕೆಟ್‌ಗಳನ್ನು ಉರುಳಿಸಿದರು. ಕ್ವೆಟ್ಟಾ ತಂಡದ ಪರ ಅನ್ವರ್ ಅಲಿ, ನಥನ್ ಮೆಕಲಮ್, ಅಝೀಝ್ ಚೀಮಾ ಹಾಗೂ ಝುಲ್ಫೀಕರ್ ಬಾಬರ್ ತಲಾ ಒಂದು ವಿಕೆಟ್‌ನ್ನು ಉಡಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News