ಮಾ.26ರಿಂದ 2026ರ ಆವೃತ್ತಿಯ ಐಪಿಎಲ್ ಆರಂಭ?
ಮುಂಬೈ, ಡಿ.16: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)2026ರ ಮಾರ್ಚ್ 26ರಿಂದ ಮೇ 31ರ ತನಕ ನಡೆಯಲು ಸಜ್ಜಾಗಿದೆ.
ಸೋಮವಾರ ರಾತ್ರಿ ಮಿನಿ ಹರಾಜು ಕಾರ್ಯಕ್ರಮಕ್ಕೂ ಮೊದಲು ಫ್ರಾಂಚೈಸಿಗಳಿಗೆ ಈ ವಿಚಾರವನ್ನು ತಿಳಿಸಲಾಗಿದೆ.
ಐಸಿಸಿ ಪುರುಷರ ಟಿ20 ವಿಶ್ವಕಪ್ ಮುಕ್ತಾಯದ ಅಂಶವನ್ನು ದೃಷ್ಟಿಯಲ್ಲಿಟ್ಟುಕೊಂಡು ಐಪಿಎಲ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ಐಪಿಎಲ್ ಅಧಿಕಾರಿಗಳು ಎಚ್ಚರಿಕೆಯಿಂದ ಅಂತಿಮಗೊಳಿಸಲಿದ್ದಾರೆ ಎಂದು ‘ಸ್ಪೋಟ್ಸ್ಸ್ಟಾರ್’ ವರದಿ ಮಾಡಿದೆ.
T20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವು ಅಹ್ಮದಾಬಾದ್ ನಲ್ಲಿ ಮಾರ್ಚ್ 8ರಂದು ನಡೆಯಲಿದೆ. ಐಪಿಎಲ್ ಗೆ ಸಜ್ಜಾಗಲು ಪ್ರಮುಖ ಅಂತರ್ರಾಷ್ಟ್ರೀಯ ಹಾಗೂ ಭಾರತೀಯ ಆಟಗಾರರಿಗೆ 15 ದಿನಗಳಿಗೂ ಹೆಚ್ಚು ಕಾಲಾವಕಾಶ ನೀಡಲಾಗಿದೆ.
ಪ್ರಮುಖ ಪಂದ್ಯಾವಳಿಗಿಂತ ಮೊದಲು ಆಟಗಾರರ ಕೆಲಸದ ಒತ್ತಡ ಹಾಗೂ ಸಾರಿಗೆ ವ್ಯವಸ್ಥೆಗಳನ್ನು ನಿರ್ವಹಿಸಲು ಈ ವಿರಾಮವು ತಂಡಗಳಿಗೆ ನೆರವಾಗುವ ನಿರೀಕ್ಷೆ ಇದೆ. ಸ್ಥಳಗಳು ಹಾಗೂ ವೇಳಾಪಟ್ಟಿಗಳು ಸಹಿತ ವಿವರವಾದ ಐಪಿಎಲ್ ವೇಳಾಪಟ್ಟಿಯು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ.
ಐಪಿಎಲ್ ವೇಳೆ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಆಟಗಾರರು ಮಾತ್ರ ದ್ವಿಪಕ್ಷೀಯ ಅಂತರ್ರಾಷ್ಟ್ರೀಯ ಬದ್ದತೆಯನ್ನು ಹೊಂದಿದ್ದಾರೆ. ಸಂಪೂರ್ಣ ಪಂದ್ಯಾವಳಿಗೆ ತಮ್ಮ ಆಟಗಾರರಿಗೆ ಆಡಲು ಅವಕಾಶ ನೀಡುವುದಾಗಿ ಉಭಯ ಕ್ರಿಕೆಟ್ ಮಂಡಳಿಗಳು ಬಿಸಿಸಿಐಗೆ ಭರವಸೆ ನೀಡಿವೆ.