ರಣಜಿ ಟ್ರೋಫಿ ಫೈನಲ್:ಕುಲಕರ್ಣಿ ದಾಳಿಗೆ ಸೌರಾಷ್ಟ್ರ ಪರದಾಟ

Update: 2016-02-24 18:22 GMT

ಪುಣೆ, ಫೆ.24: ವೇಗದ ಬೌಲರ್ ಧವಲ್ ಕುಲಕರ್ಣಿ(4-30) ಸಂಘಟಿಸಿದ ಕರಾರುವಾಕ್ ಬೌಲಿಂಗ್ ನೆರವಿನಿಂದ ಮುಂಬೈ ತಂಡ ಬುಧವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿ ಫೈನಲ್‌ನಲ್ಲಿ ಸೌರಾಷ್ಟ್ರ ತಂಡವನ್ನು ಆರಂಭದಲ್ಲೇ ಕಟ್ಟಿಹಾಕಿದೆ.

ಸೌರಾಷ್ಟ್ರ ಮೊದಲ ದಿನದಾಟದಂತ್ಯಕೆ 8 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿದೆ. ಚೊಚ್ಚಲ ಪಂದ್ಯ ಆಡಿದ ಪ್ರೇರಕ್ ಮಂಕಡ್(ಔಟಾಗದೆ 55) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಅಚ್ಚ ಹಸಿರು ಪಿಚ್‌ನಲ್ಲಿ ಟಾಸ್ ಜಯಿಸಿದ ಮುಂಬೈ ನಾಯಕ ಆದಿತ್ಯತಾರೆ ಸೌರಾಷ್ಟ್ರವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಸ್ನಾಯು ಸೆಳೆತದಿಂದಾಗಿ ಸೆಮಿ ಫೈನಲ್ ಪಂದ್ಯದಿಂದ ಹೊರಗುಳಿದಿದ್ದ ಕುಲಕರ್ಣಿ ಬಿಗಿ ದಾಳಿ ನಡೆಸಿ ಸೌರಾಷ್ಟ್ರಕ್ಕೆ ನಡುಕ ಹುಟ್ಟಿಸಿದ್ದಲ್ಲದೆ ನಾಯಕನ ನಿರ್ಧಾರವನ್ನು ಸಮರ್ಥಿಸಿದರು.

ಕುಲಕರ್ಣಿ ದಾಳಿಗೆ ಸೌರಾಷ್ಟ್ರದ ಅಗ್ರ ಕ್ರಮಾಂಕದ ಆಟಗಾರರಾದ ಅವಿ ಬಾರೊಟ್(14), ಚೇತೇಶ್ವರ ಪೂಜಾರ(4), ಅರ್ಪಿತ್ ವಸವಾಡ(77) ಹಾಗೂ ನಾಯಕ ಜೈದೇವ್ ಶಾ(13) ವಿಕೆಟ್‌ನ್ನು ಉಳಿಸಿದರು. ಕುಲಕರ್ಣಿಗೆ ಶಾದೂಲ್ ಠಾಕೂರ್(2-59), ಅಭಿಷೇಕ್ ನಾಯರ್(1-42) ಹಾಗೂ ಬಲ್ವಿಂದರ್ ಸಿಂಗ್ ಸಂದು(1-41) ಉತ್ತಮ ಸಾಥ್ ನೀಡಿದರು.

ಮೊದಲ ಸ್ಪೆಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕುಲಕರ್ಣಿ ಸೌರಾಷ್ಟ್ರ ತಂಡ ಒಂದು ಹಂತದಲ್ಲಿ 108 ರನ್‌ಗೆ 7 ವಿಕೆಟ್ ಕಳೆದುಕೊಳ್ಳಲು ಕಾರಣರಾದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ತಾಳ್ಮೆಯ ಇನಿಂಗ್ಸ್ ಆಡಿದ ವಸವಾಡ(77 ರನ್, 214ಎಸೆತ, 6 ಬೌಂಡರಿ) ಮಂಕಡ್(55 ರನ್, 119 ಎಸೆತ, 5 ಬೌಂಡರಿ) ಅವರೊಂದಿಗೆ 8ನೆ ವಿಕೆಟ್‌ಗೆ 84 ರನ್ ಜೊತೆಯಾಟ ನಡೆಸಿ ಸೌರಾಷ್ಟ್ರ ಗೌರವಾರ್ಹ ಮೊತ್ತ ತಲುಪಲು ಶ್ರಮಿಸಿದರು.

ಆದರೆ, ವಸವಾಡ 84.4ನೆ ಓವರ್‌ನಲ್ಲಿ ಕುಲಕರ್ಣಿಗೆ ವಿಕೆಟ್ ಒಪ್ಪಿಸಿದರು. ಈ ತನಕ ರಣಜಿಯಲ್ಲಿ 53 ಬಾರಿ ಮುಂಬೈಯನ್ನು ಎದುರಿಸಿರುವ ಸೌರಾಷ್ಟ್ರ ಗೆಲುವನ್ನೇ ದಾಖಲಿಸಿಲ್ಲ.

ಸಂಕ್ಷಿಪ್ತ ಸ್ಕೋರ್

ಸೌರಾಷ್ಟ್ರ ಪ್ರಥಮ ಇನಿಂಗ್ಸ್: 84.4 ಓವರ್‌ಗಳಲ್ಲಿ 192/8

(ಅರ್ಪಿತ್ ವಸವಾಡ 77, ಪ್ರೇರಕ್ ಮಂಕಡ್ ಔಟಾಗದೆ 55, ಕುಲಕರ್ಣಿ 4-30, ಶಾರ್ದೂಲ್ ಠಾಕೂರ್ 2-59)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News