ಆಸ್ಟ್ರೇಲಿಯದ ಮಡಿಲಿಗೆ ಟೆಸ್ಟ್ ಟ್ರೋಫಿ
ವಿಶ್ವದ ನಂ.1 ಸ್ಥಾನಕ್ಕೆ ಮರಳಿದ ಕಾಂಗರೂ ಪಡೆ
ಕ್ರೈಸ್ಟ್‌ಚರ್ಚ್, ಫೆ.24: ನಿರೀಕ್ಷೆಯಂತೆಯೇ ನ್ಯೂಝಿಲೆಂಡ್ ವಿರುದ್ಧದ ಎರಡನೆ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಜಯಿಸಿದ ಆಸ್ಟ್ರೇಲಿಯ ತಂಡ ಎರಡು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವಿನ ಮೂಲಕ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಕಳೆದ ವಾರ ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇನಿಂಗ್ಸ್ ಹಾಗೂ 52 ರನ್‌ಗಳ ಅಂತರದಿಂದ ಗೆಲುವು ದಾಖಲಿಸಿದ್ದ ಸ್ಮಿತ್ ಪಡೆ ಬುಧವಾರ 2ನೆ ಟೆಸ್ಟ್‌ನ ಐದನೆ ಹಾಗೂ ಅಂತಿಮ ದಿನದಾಟದ ಲಂಚ್ ವಿರಾಮದ ವೇಳೆಗೆ ಕಿವೀಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಆಸ್ಟ್ರೇಲಿಯ ಸ್ಮಿತ್ ನಾಯಕತ್ವದಲ್ಲಿ ಆಡಿರುವ 11 ಪಂದ್ಯಗಳಲ್ಲಿ 7ನೆ ಗೆಲುವು ದಾಖಲಿಸಿತು. ಸ್ಮಿತ್ ಕಳೆದ ವರ್ಷ ಆಸ್ಟ್ರೇಲಿಯ ತಂಡ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಟೆಸ್ಟ್ ಸರಣಿ ಸೋತ ನಂತರ ಮೈಕಲ್ ಕ್ಲಾರ್ಕ್‌ರಿಂದ ನಾಯಕತ್ವವನ್ನು ವಹಿಸಿಕೊಂಡಿದ್ದರು.
ಆಸ್ಟ್ರೇಲಿಯ 2 ವಿಕೆಟ್‌ಗೆ 169 ರನ್‌ನಿಂದ ಎರಡನೆ ಇನಿಂಗ್ಸ್‌ನ್ನು ಮುಂದುವರಿಸಿತು. ಬ್ಯಾಟಿಂಗ್ ಮುಂದುವರಿಸಿದ ಜೋ ಬರ್ನ್ಸ್(65) ಹಾಗೂ ಉಸ್ಮಾನ್ ಖ್ವಾಜಾ(45)ಕ್ರಮವಾಗಿ ಟ್ರೆಂಟ್ ಬೌಲ್ಟ್ ಹಾಗೂ ವಾಗ್ನರ್‌ಗೆ ವಿಕೆಟ್ ಒಪ್ಪಿಸಿದರು.
16ನೆ ಅರ್ಧಶತಕ ಪೂರೈಸಿದ ಸ್ಮಿತ್ (ಔಟಾಗದೆ 53) ಹಾಗೂ ಆಡಮ್ ವೋಗ್ಸ್(ಔಟಾಗದೆ 10) ಆಸ್ಟ್ರೇಲಿಯ 54 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಲು ನೆರವಾದರು.
ಇದೇ ವೇಳೆ ನ್ಯೂಝಿಲೆಂಡ್‌ನ ಸ್ಪೋಟಕ ದಾಂಡಿಗ ಹಾಗೂ ನಾಯಕ ಬ್ರೆಂಡನ್ ಮೆಕಲಮ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದರು. ಆಸೀಸ್ ವಿರುದ್ಧ ಟ್ವೆಂಟಿ-20 ಪಂದ್ಯ ಆಡುವ ಮೂಲಕ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ.
ಸಂಕ್ಷಿಪ್ತ ಸ್ಕೋರ್
ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್: 370
ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 505
ನ್ಯೂಝಿಲೆಂಡ್ ದ್ವಿತೀಯ ಇನಿಂಗ್ಸ್: 335
ಆಸ್ಟ್ರೇಲಿಯ ದ್ವಿತೀಯ ಇನಿಂಗ್ಸ್: 201/3
(ಬರ್ನ್ಸ್ 65, ಸ್ಟೀವನ್ ಸ್ಮಿತ್ ಔಟಾಗದೆ 53, ಉಸ್ಮಾನ್ ಖ್ವಾಜಾ 45, ವಾಗ್ನರ್ 1-60, ಬೌಲ್ಟ್ 1-60)
ಪಂದ್ಯಶ್ರೇಷ್ಠ: ಜೋ ಬರ್ನ್ಸ್.