ಸಿರಿಯದಲ್ಲಿ ಯುದ್ಧ ವಿರಾಮ
ಡಮಾಸ್ಕಸ್, ಫೆ. 27: ಸಿರಿಯದಲ್ಲಿ ವಿಶ್ವಸಂಸ್ಥೆ ಬೆಂಬಲಿತ ಮಹತ್ವದ ಯುದ್ಧವಿರಾಮ ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ.
ಐದು ವರ್ಷಗಳ ಆಂತರಿಕ ಯುದ್ಧದ ಅವಧಿಯ ಮೊದಲ ಪ್ರಮುಖ ರಾಜಿ ಪ್ರಕ್ರಿಯೆ ಇದಾಗಿದೆ. ಆಂತರಿಕ ಸಂಘರ್ಷದಲ್ಲಿ ಈಗಾಗಲೇ 2.7 ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಮಧ್ಯರಾತ್ರಿಯಲ್ಲಿ ಗಂಟೆ 12 ಬಾರಿಸುತ್ತಿದ್ದಂತೆಯೇ ರಾಜಧಾನಿ ಡಮಾಸ್ಕಸ್‌ನ ಉಪನಗರಗಳು ಮತ್ತು ಉತ್ತರದ ನಗರ ಅಲೆಪ್ಪೊದಲ್ಲಿ ಬಂದೂಕುಗಳು ವೌನವಾದವು ಎಂದು ಎಎಫ್‌ಪಿ ಸುದ್ದಿಸಂಸ್ಥೆಯ ಬಾತ್ಮೀದಾರರು ವರದಿ ಮಾಡಿದ್ದಾರೆ. ಅದಕ್ಕೂ ಮೊದಲು ಇಡೀ ದಿನ ದೇಶಾದ್ಯಂತವಿರುವ ಬಂಡುಕೋರರ ನೆಲೆಗಳ ಮೇಲೆ ರಶ್ಯ ಭೀಕರ ವಾಯು ದಾಳಿ ನಡೆಸಿತ್ತು.
ಯುದ್ಧವಿರಾಮ ಜಾರಿಗೆ ಬರುವುದಕ್ಕೂ ಮೊದಲು, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಸಿರಿಯ ಮತ್ತು ಅದರ ಪ್ರಮುಖ ಮಿತ್ರ ದೇಶ ರಶ್ಯಕ್ಕೆ, ‘‘ಜಗತ್ತು ನಿಮ್ಮನ್ನು ಗಮನಿಸುತ್ತಿದೆ’’ ಎಂಬುದಾಗಿ ಎಚ್ಚರಿಕೆ ನೀಡಿದ್ದರು.
ಯುದ್ಧವಿರಾಮ ಮುಂದುವರಿದರೆ ಹಾಗೂ ಹೆಚ್ಚಿನ ನೆರವು ಸಂಘರ್ಷಪೀಡಿತ ಪ್ರದೇಶಗಳನ್ನು ತಲುಪಿದರೆ, ಸಿರಿಯ ಶಾಂತಿ ಮಾತುಕತೆಗಳು ಮಾರ್ಚ್ 7ರಂದು ಮುಂದುವರಿಯುವುದು ಎಂದು ವಿಶ್ವಸಂಸ್ಥೆಯ ಪ್ರತಿನಿಧಿ ಸ್ಟಾಫನ್ ಡಿ ಮಿಸ್ಟುರ ಹೇಳಿದರು.
ಈ ತಿಂಗಳ ಆದಿ ಭಾಗದಲ್ಲಿ ಜಿನೇವದಲ್ಲಿ ನಡೆದ ಶಾಂತಿ ಮಾತುಕತೆ ಮುರಿದು ಬಿದ್ದಿರುವುದನ್ನು ಸ್ಮರಿಸಬಹುದಾಗಿದೆ. ಯುದ್ಧವಿರಾಮ ಜಾರಿಗೆ ಬರುವ ಮುಂಚಿನ ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ, ಅಮೆರಿಕ ಮತ್ತು ರಶ್ಯ ಸಿದ್ಧಪಡಿಸಿದ ಯುದ್ಧವಿರಾಮ ನಿರ್ಣಯಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅವಿರೋಧ ಬೆಂಬಲವನ್ನು ನೀಡಿತು.
ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸಾದ್ ಮತ್ತು ಪ್ರಧಾನ ಪ್ರತಿಪಕ್ಷ ಗುಂಪುಗಳೆರಡೂ ಯುದ್ಧವಿರಾಮಕ್ಕೆ ಅಂಗೀಕಾರ ಸೂಚಿಸಿವೆ. ಆದಾಗ್ಯೂ, ಇಸ್ಲಾಮಿಕ್ ಸ್ಟೇಟ್ ಮತ್ತು ಇತರ ಭಯೋತ್ಪಾದಕ ಗುಂಪುಗಳ ವಿರುದ್ಧ ದಾಳಿ ನಡೆಸಲು ಯುದ್ಧವಿರಾಮ ಒಪ್ಪಂದ ಅವಕಾಶ ನೀಡಿದೆ.
ಯುದ್ಧವಿರಾಮ ಮುಂದುವರಿದರೆ ಹಾಗೂ ಹೆಚ್ಚಿನ ನೆರವು ಸಂಘರ್ಷಪೀಡಿತ ಪ್ರದೇಶಗಳನ್ನು ತಲುಪಿದರೆ, ಸಿರಿಯ ಶಾಂತಿ ಮಾತುಕತೆಗಳು ಮಾರ್ಚ್ 7ರಂದು ಮುಂದುವರಿಯುವುದು.-ಸ್ಟಾಫನ್ ಡಿ ಮಿಸ್ಟುರ, ವಿಶ್ವಸಂಸ್ಥೆಯ ಪ್ರತಿನಿಧಿ
ದಾಳಿಗೆ ವಿರಾಮ: ರಶ್ಯ
ಮಾಸ್ಕೊ, ಫೆ. 27: ಯುದ್ಧವಿರಾಮದ ಶರತ್ತುಗಳಿಗೆ ಅನುಗುಣವಾಗಿ ರಶ್ಯದ ವಾಯು ಪಡೆ ಸಿರಿಯದಲ್ಲಿ ನಡೆಸುತ್ತಿರುವ ಬಾಂಬ್ ದಾಳಿಯನ್ನು ನಿಲ್ಲಿಸಿದೆ ಎಂದು ರಶ್ಯದ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಹೇಳಿದೆ.
‘‘ಯುದ್ಧವಿರಾಮ ಜಾರಿಯಲ್ಲಿರುವ ಹಸಿರು ವಲಯದಲ್ಲಿ ಹಾಗೂ ನಮಗೆ ಯುದ್ಧವಿರಾಮದ ಬೇಡಿಕೆ ಸಲ್ಲಿಸಿರುವ ಸಶಸ್ತ್ರ ಗುಂಪುಗಳಿರುವ ಪ್ರದೇಶಗಳಲ್ಲಿ ರಶ್ಯ ವಾಯು ಪಡೆ ಬಾಂಬ್ ದಾಳಿಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ’’ ಎಂದು ಜನರಲ್ ಸ್ಟಾಫ್‌ನ ಹಿರಿಯ ಪ್ರತಿನಿಧಿ ಸರ್ಗೀ ರುಡ್‌ಸ್ಕೋಯಿ ಸುದ್ದಿಗಾರರಿಗೆ ತಿಳಿಸಿದರು.