ಲಕ್ಷ ಕೋಟಿ ರೂ. ಮೊತ್ತದ ಸಬ್ಸಿಡಿ ಶ್ರೀಮಂತರ ಪಾಲಾಗುತ್ತಿದೆ: ಸುಬ್ರಮಣಿಯನ್

Update: 2016-02-28 18:22 GMT

ಹೊಸದಿಲ್ಲಿ, ಫೆ.28: ವಿತ್ತಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ಮಂಡಿಸಲಿರುವ ಸಾಮಾನ್ಯ ಮುಂಗಡಪತ್ರವು ಕೆಲವು ಸಬ್ಸಿಡಿಗಳ ರದ್ದತಿಗೆ ಮತ್ತು ಬಡವರ ಹೆಸರಿನಲ್ಲಿ ಭಾರೀ ಶ್ರೀಮಂತರ ಜೇಬು ಸೇರುತ್ತಿರುವ ಕೆಲವು ಸಬ್ಸಿಡಿಗಳ ತೀವ್ರ ಪರಿಷ್ಕರಣೆಗೆ ಒತ್ತು ನೀಡಬಹುದು.

ಪ್ರಧಾನಿ ನರೇಂದ್ರ ಮೋದಿಯವರ ಬಳಿಕ ಇದೀಗ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅವರೂ ತೆರಿಗೆ ವಿನಾಯಿತಿಗಳು ಮತ್ತು ಸಬ್ಸಿಡಿಗಳ ಲಾಭ ಪಡೆದುಕೊಳ್ಳುತ್ತಿರುವವರು ಭಾರೀ ಶ್ರೀಮಂತರೇ ಹೊರತು ಮಧ್ಯಮ ವರ್ಗದವರಾಗಲೀ ಸಾಮಾನ್ಯ ಶ್ರೀಮಂತರಾಗಲೀ ಅಲ್ಲ ಎಂದು ಬೆಟ್ಟು ಮಾಡಿದ್ದಾರೆ.

ಬಡವರು ಹೆಚ್ಚಾಗಿ ಬಳಸುತ್ತಿರುವ ರಸಗೊಬ್ಬರವಾಗಿರುವ ಯೂರಿಯಾದ ಮೇಲಿನ ಸಬ್ಸಿಡಿಯನ್ನು ಶ್ರೀಮಂತ ರೈತರೇ ಕಬಳಿಸುತ್ತಿದ್ದಾರೆ. ಅವರು ಅಧಿಕಾರದಲ್ಲಿರುವ ರಾಜಕೀಯ ಪಕ್ಷದೊಂದಿಗೆ ಉತ್ತಮ ನಂಟು ಹೊಂದಿರುವುದು ಇದಕ್ಕೆ ಕಾರಣವಾಗಿದೆ ಎಂದು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆಯು ತಿಳಿಸಿದೆ. ಇದೇ ರೀತಿ ಸರಕಾರವು ಚಿನ್ನ, ಅಡುಗೆ ಅನಿಲ, ಸೀಮೆಎಣ್ಣೆ, ವಿದ್ಯುತ್, ವಿಮಾನ ಇಂಧನ ಮತ್ತು ರೈಲ್ವೆ ಪ್ರಯಾಣ ದರಗಳ ಮೇಲೆ ಬಡವರಿಗಾಗಿ ನೀಡುವ ರಿಯಾಯಿತಿಗಳ ಲಾಭವನ್ನು ಶ್ರೀಮಂತರೇ ಪಡೆದುಕೊಳ್ಳುತ್ತಿದ್ದಾರೆ ಎಂದು ಸುಬ್ರಮಣಿಯನ್ ಹೇಳಿದ್ದಾರೆ.

ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಈಶಾನ್ಯ ರಾಜ್ಯಗಳು ಮತ್ತು ನೇಪಾಳಕ್ಕೆ ಹೊಂದಿಕೊಂಡಿರುವ ಉತ್ತರ ಪ್ರದೇಶದಲ್ಲಿ ಗಡಿಯಾಚೆಯಿಂದ ಯೂರಿಯಾ ಕಳ್ಳ ಸಾಗಣೆಳ್ಳುವುದು ಹೋಗಲಿ, ಮಾರುಕಟ್ಟೆಯ ದರಗಳಿಗಿಂತ ಶೇ.60ರಷ್ಟು ಹೆಚ್ಚಿನ ದರ ತೆತ್ತು ಕಾಳಸಂತೆಯಲ್ಲಿ ಖರೀದಿಸಬೇಕಾದ ಸ್ಥಿತಿಯಿದೆ ಎಂದು ಸುಬ್ರಮಣಿಯನ್ ಆರ್ಥಿಕ ಸಮೀಕ್ಷೆ ವರದಿಯಲ್ಲಿ ತಿಳಿಸಿದ್ದಾರೆ. ಕೆಟ್ಟ ಸಬ್ಸಿಡಿಗಳನ್ನು ರದ್ದುಗೊಳಿಸಬೇಕಾದ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ರಸಗೊಬ್ಬರ ಸಬ್ಸಿಡಿಯನ್ನು ಜನಧನ-ಆಧಾರ್-ಮೊಬೈಲ್ ವೇದಿಕೆಯೊಂದಿಗೆ ಜೋಡಣೆ ಮಾಡಬೇಕೆಂದು ಅವರು ಪ್ರತಿಪಾದಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೂ ಇತ್ತೀಚಿಗೆ ಇಂತಹುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಕೆಲವು ಸಬ್ಸಿಡಿಗಳು ಬಡವರನ್ನು ರಕ್ಷಿಸಲು ಅಗತ್ಯವಾಗಿರಬಹುದು ಮತ್ತು ಅವು ಯಶಸ್ವಿಯಾಗಲು ನ್ಯಾಯಯುತವಾದ ಅವಕಾಶವನ್ನು ನೀಡಬೇಕಾಗುತ್ತದೆ. ಹೀಗಾಗಿ ಸಬ್ಸಿಡಿಗಳನ್ನು ನಿವಾರಿಸುವುದು ತನ್ನ ಗುರಿಯಲ್ಲ,ಆದರೆ ಅವುಗಳ ಪರಿಷ್ಕರಣೆಯಾಗಬೇಕು ಎಂದು ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News