ಮುಕ್ತ ಮನಸ್ಸಿನಿಂದ ಗುರಿ ಸಾಧಿಸಿ ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಹೊಸದಿಲ್ಲಿ, ಫೆ.28: ‘ಮನ್‌ಕೀ ಬಾತ್’ನ 17ನೆ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ತನ್ನ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ. ಪರೀಕ್ಷೆಗಳ ಸಮಯದಲ್ಲಿ ಅವರು, ‘ಮುಂದಿನ ವರ್ಷಗಳಲ್ಲಿ ದೇಶವನ್ನು ಹೊಸ ಎತ್ತರಕ್ಕೆ ಒಯ್ಯಲಿರುವ’ ಭಾರತೀಯ ಯುವ ಸಮುದಾಯಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡುಲ್ಕರ್ ಹಾಗೂ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಸಹ ಪ್ರಧಾನಿಯ ಜೊತೆ ಸೇರಿದ್ದರು.
ಮೋದಿಯವರ ಮಾಸಿಕ ರೇಡಿಯೊ ಭಾಷಣದ ಮುಖ್ಯಾಂಶ ಇಲ್ಲಿದೆ:
1. ಪರೀಕ್ಷೆಗಳನ್ನು ಅಂಕೆಗಳ ಆಟವೆಂದು ತಿಳಿಯಬೇಡಿ. ನಿಮ್ಮ ಜೀವನವು ಬಹಳ ದೊಡ್ಡ ಉದ್ದೇಶಕ್ಕೆ ಜೋಡಿಸಲ್ಪಡಬೇಕು.
2. ನಿಮ್ಮ ಗುರಿ ನಿಗದಿಪಡಿಸಿ, ಅದನ್ನು ಒತ್ತಡವಿಲ್ಲದೆ, ಮುಕ್ತ ಮನಸ್ಸಿನಿಂದ ಬೆಂಬತ್ತಿರಿ. ನಿಮ್ಮಿಂದಿಗೇ ಸ್ಪರ್ಧಿಸಿ, ಬೇರೆಯವರೊಂದಿಗಲ್ಲ.
3. ಯಶಸ್ವಿ ಜೀವನದ ಅಡಿಗಲ್ಲು ಭದ್ರಪಡಿಸಲು ಶಿಸ್ತು ಅಗತ್ಯ.
4. ನಿಮ್ಮ ಮನಸ್ಸು ಶಾಂತಿಯಿಂದಿದ್ದರೆ, ಜ್ಞಾನದ ಭಂಡಾರ ಹುಡುಕಲು ಸಾಧ್ಯ. ಪರೀಕ್ಷೆಗಳು ನಿಮಗೆ ಹೆಚ್ಚು ಸುಲಭವಾಗುತ್ತವೆ.
5. ಕೆಲವೊಮ್ಮೆ ನಿಮ್ಮ ಮನಸ್ಸು ಮುಗಿದು ಹೋದ ಪರೀಕ್ಷೆಗಳ ಸುತ್ತವೇ ಸುತ್ತುತ್ತಿರುತ್ತವೆ. ಆದರೆ, ಹಾಗೆ ಮಾಡಬೇಡಿ, ಕಳೆದುದು ಕಳೆದು ಹೋಯಿತು.
6. ಈ ಸಮಯ, ಜನರು ಯಾವೆಲ್ಲ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಂಡರೋ, ಅನೇಕರು ಯೋಗ ಮತ್ತು ಧ್ಯಾನದ ಬಗ್ಗೆ ಉಲ್ಲೇಖಿಸಿದ್ದಾರೆ.
7. ತೆಂಡುಲ್ಕರ್: ನಿಮ್ಮ ಯೋಚನೆ ಧನಾತ್ಮಕವಾಗಿರಲಿ. ಧನಾತ್ಮಕ ಫಲಿತಾಂಶ ಖಂಡಿತ ಲಭಿಸುತ್ತದೆ. ನಿಮ್ಮದೇ ಗುರಿಯೊಂದನ್ನು ನಿಗದಿಪಡಿಸಿ ಹಾಗೂ ಅದರ ಸಾಧನೆಗೆ ಪ್ರಯತ್ನಿಸಿ.
8. ವಿಶ್ವನಾಥನ್ ಆನಂದ್: ನಿಮ್ಗೆ ಉತ್ತಮ ವಿಶ್ರಾಂತಿ ಅಗತ್ಯ. ರಾತ್ರಿ ಚೆನ್ನಾಗಿ ನಿದ್ರಿಸಿ. ತುಂಬಿದ ಹೊಟ್ಟೆಯಲ್ಲಿ ಪರೀಕ್ಷೆಗೆ ಹಾಜರಾಗಿ. ಶಾಂತವಾಗಿರುವುದು ಅತ್ಯಂತ ಪ್ರಮುಖ ವಿಷಯವಾಗಿದೆ. ಶಾಂತವಾಗಿರಿ, ಅತಿಯಾದ ಆತ್ಮವಿಶ್ವಾಸ ಬೇಡ. ಆದರೆ, ನಿರಾಶಾವಾದಿಯೂ ಆಗಬೇಡಿ.
9. ಮೊರಾರಿ ಬಾಪು: ಒತ್ತಡ ರಹಿತವಾಗಿ ಪರೀಕ್ಷೆ ಬರೆಯಿರಿ. ಮನಸ್ಸು ಶಾಂತವಾಗಿರಲಿ. ಪ್ರತಿಯೊಬ್ಬ ಯಶಸ್ವಿಯಾಗಬೇಕೆಂದೇನಿಲ್ಲ. ವೈಫಲ್ಯಗಳೊಂದಿಗೆ ಜೀವಿಸಲು ಕಲಿಯಿರಿ.
10. ಸಿಎನ್‌ಆರ್ ರಾವ್: ಪರೀಕ್ಷೆಗಳು ಅತಂಕವನ್ನುಂಟು ಮಾಡುತ್ತವೆಂಬ ಪೂರ್ಣ ತಿಳುವಳಿಕೆ ನನಗಿದೆ. ಆದರೆ, ಚಿಂತಿಸಬೇಡಿ. ನಿಮ್ಮಿಂದಾದ ಪ್ರಯತ್ನ ಮಾಡಿ. ಈ ದೇಶದಲ್ಲಿ ಹಲವು ಅವಕಾಶಗಳಿವೆ. ಜೀವನದಲ್ಲಿ ಏನು ಮಾಡಲು ಬಯಸಿದ್ದೀರೆಂಬುದನ್ನು ನಿರ್ಧರಿಸಿ. ಅದನ್ನು ಕೈಬಿಡಬೇಡಿ. ನಿಮಗೆ ಒಳ್ಳೆಯದನ್ನು ಹಾರೈಸುತ್ತಿದ್ದೇನೆ. ಪ್ರಧಾನಿ ಮೋದಿ ನಾಳೆಯ ಕೇಂದ್ರ ಬಜೆಟ್‌ನ ಬಗ್ಗೆ ಮಾತನಾಡುತ್ತ ತನ್ನ ‘ಮನ್ ಕೀ ಬಾತ್’ ಮುಕ್ತಾಯಗೊಳಿಸಿದರು. ನನಗೆ ನಾಳೆ ಪರೀಕ್ಷೆಯೊಂದಿದೆ. ನಾಳೆ ಸಂಸತ್ತಿನಲ್ಲಿ ಬಜೆಟ್ ಮಂಡನೆಯಾಗಲಿದ್ದು, 125 ಕೋಟಿ ನಾಗರಿಕರು ನನ್ನ ಪರೀಕ್ಷೆ ನಡೆಸಲಿದ್ದಾರೆಂದು ಅವರು ಹೇಳಿದರು.