×
Ad

ಉದ್ಯೋಗ ಖಾತ್ರಿ; ಜೇಟ್ಲಿ ಪ್ರತಿಪಾದನೆ ಹಸಿ ಸುಳ್ಳು

Update: 2016-03-01 23:17 IST

’ಕಾಂಗ್ರೆಸ್ ವೈಫಲ್ಯದ ಸ್ಮಾರಕ’ಕ್ಕೆ ಗರಿಷ್ಠ ಅನುದಾನ

ಂಸತ್ತಿನಲ್ಲಿ ಸೋಮವಾರ ಮೂರನೆ ಬಜೆಟ್ ಮಂಡಿಸಿದ ಹಣಕಾಸು ಸಚಿವ ಅರುಣ್ ಜೇಟ್ಲ್ಲಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 38,500 ಕೋಟಿ ರೂ. ಅನುದಾನ ನಿಗದಿಪಡಿಸಿರುವುದಾಗಿ ಘೋಷಿಸಿದರು. ಕಾಂಗ್ರೆಸ್ ಸರಕಾರದ ವೈಫಲ್ಯಗಳ ಜೀವಂತ ಸ್ಮಾರಕ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಕಳೆದ ಫೆಬ್ರವರಿಯಲ್ಲಿ ಕರೆಸಿಕೊಂಡಿದ್ದ ಈ ಯೋಜನೆಗೆ ಸತತ ಎರಡನೆ ವರ್ಷ ಹಣಕಾಸು ಸಚಿವರು ಅನುದಾನ ಹೆಚ್ಚಿಸಿದ್ದಾರೆ.

ಈ 38,500 ಕೋಟಿ ರೂ. ವೆಚ್ಚವಾದರೆ, ಅದು ನರೇಗಾ ಯೋಜನೆಗೆ ಒಂದು ಹಣಕಾಸು ವರ್ಷದಲ್ಲಿ ಆಗುವ ಅತ್ಯಧಿಕ ವೆಚ್ಚವಾಗಲಿದೆ ಎಂದು ಜೇಟ್ಲ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು. ವಿಶೇಷವಾಗಿ ಈ ಹಣವನ್ನು ಸಾರ್ವಜನಿಕ ಕಾಮಗಾರಿಗಳನ್ನು ಕೈಗೊಳ್ಳಲು ವಿನಿಯೋಗಿಸಲಾಗುವುದು. ಮಳೆಯಾಶ್ರಿತ ಗ್ರಾಮೀಣ ಪ್ರದೇಶಗಳಲ್ಲಿ ಐದು ಲಕ್ಷ ಕೃಷಿ ಹೊಂಡಗಳ ನಿರ್ಮಾಣ ಹಾಗೂ ಬಾವಿ ತೋಡಲು ಈ ಹಣ ಬಳಕೆಯಾಗಲಿದೆ. ಜತೆಗೆ ಸಾವಯವ ಗೊಬ್ಬರ ಉತ್ಪಾದನೆ ಸಲುವಾಗಿ ಹತ್ತು ಲಕ್ಷ ಕಾಂಪೋಸ್ಟ್ ಹೊಂಡಗಳನ್ನು ಈ ಯೋಜನೆಯಡಿ ನಿರ್ಮಿಸಲಾಗುವುದು ಎಂದು ವಿವರಿಸಿದರು.
ಅದರೆ ಜೇಟ್ಲ್ಲಿಯವರು ಘೋಷಿಸಿದ ಅನುದಾನಕ್ಕಿಂತ ಹೆಚ್ಚು ಅನುದಾನ ಎರಡು ವರ್ಷ ಹಿಂದೆಯೇ ನಿಗದಿಪಡಿಸಲಾಗಿತ್ತು. ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, 2013-14ರಲ್ಲಿ ಅಂದರೆ ಯುಪಿಎ ಸರಕಾರದ ಕೊನೆಯ ವರ್ಷ ಸರಕಾರ ಈ ಯೋಜನೆಗೆ 38,552 ಕೋಟಿ ರೂ. ನಿಗದಿಪಡಿಸಿತ್ತು. ಇದು ಜೇಟ್ಲ್ಲಿ ಘೋಷಿಸಿದ ಅನುದಾನಕ್ಕಿಂತ ಅಧಿಕ. ನರೇಗಾ ಇತಿಹಾಸದಲ್ಲೇ ಅತ್ಯಧಿಕ ವೆಚ್ಚವಾದದ್ದು 2010-11ರಲ್ಲಿ, ಆ ಹಣಕಾಸು ವರ್ಷದಲ್ಲಿ ಯೋಜನೆಯಡಿ 39,377 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿತ್ತು. ಅದಾಗ್ಯೂ ಮೋದಿ ಸರಕಾರ ನಿಗದಿಪಡಿಸಿರುವ ಅತ್ಯಧಿಕ ಅನುದಾನ ಇದಾಗಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ಜೇಟ್ಲ್ಲಿ ಈ ಯೋಜನೆಗೆ 34,699 ಕೋಟಿ ರೂ. ನಿಗದಿಪಡಿಸಿದ್ದರು. ಅದಕ್ಕಿಂತ ಹಿಂದಿನ ವರ್ಷ ಅದು 34 ಸಾವಿರ ಕೋಟಿ ರೂ.ಆಗಿತ್ತು.


ವಾಸ್ತವವಾಗಿ ಕಡಿತ
ಈ ಯೋಜನೆ 2006ರಲ್ಲಿ ಆರಂಭವಾದಾಗಿನಿಂದ ಅತ್ಯಧಿಕ ಅನುದಾನ ಮಂಜೂರಾದದ್ದು 2010-11ರಲ್ಲಿ. ಆಗ ಯೋಜನೆಗೆ 40,100 ಕೋಟಿ ರೂ. ನಿಗದಿಪಡಿಸಲಾಗಿತ್ತು. ಆದರೆ ವಾಸ್ತವ ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡರೆ, ಇತ್ತೀಚಿನ ವರ್ಷಗಳಲ್ಲಿ ವರ್ಷದಿಂದ ವರ್ಷಕ್ಕೆ ಈ ಯೋಜನೆಗೆ ನೀಡುತ್ತಿರುವ ಅನುದಾನ ಕಡಿಮೆಯಾಗುತ್ತಲೇ ಇದೆ. ಎಂಟು ಬರಪೀಡಿತ ರಾಜ್ಯಗಳು ಸೇರಿದಂತೆ 21 ರಾಜ್ಯಗಳಲ್ಲಿ ಈ ಗ್ರಾಮೀಣ ಯೋಜನೆಗೆ ಅನುದಾನದ ಕೊರತೆ ವ್ಯಾಪಕವಾಗಿ ಕಾಡುತ್ತಿದೆ.
ಈ ಬಾರಿ ನಿಗದಿಪಡಿಸಿರುವ ಅನುದಾನದ ದೊಡ್ಡ ಪಾಲು ಈಗಾಗಲೇ ಬಾಕಿ ಇರುವ ಬಿಲ್ ಮೊತ್ತವಾದ 6,359 ಕೋಟಿ ರೂ. ಪಾವತಿಗೆ ವೆಚ್ಚವಾಗಲಿದೆ. ಕಳೆದ ವರ್ಷ ಮಂಜೂರು ಮಾಡಿದ್ದ ಮೊತ್ತದ ಅನುಗುಣವಾಗಿ ಹಾಗೂ ಹಿಂದಿನ ವರ್ಷದ ಬಜೆಟ್ ಅನುದಾನದ ಮೊತ್ತಕ್ಕೆ ಅನುಗುಣವಾಗಿ ಹಣದುಬ್ಬರವನ್ನು ಪರಿಗಣಿಸಿ ಉದ್ಯೋಗ ನಿರ್ವಹಿಸಬೇಕಿದ್ದರೆ, ಕನಿಷ್ಠ 47,549 ಕೋಟಿ ನಿಗದಿಪಡಿಸಬೇಕಿತ್ತು ಎಂದು ಉದ್ಯೋಗ ಖಾತ್ರಿ ಕಾನೂನು ಅಂಗೀಕಾರಕ್ಕೆ ಒತ್ತಡ ತರುವ ನಿಟ್ಟಿನಲ್ಲಿ ಪ್ರಚಾರಾಂದೋಲನ ರೂಪಿಸಿದ್ದ ಪೀಪಲ್ಸ್ ಆ್ಯಕ್ಷನ್ ಫಾರ್ ಎಂಪ್ಲಾಯ್‌ಮೆಂಟ್ ಗ್ಯಾರಂಟಿ ಸಂಸ್ಥೆ ಅಭಿಪ್ರಾಯಪಟ್ಟಿದೆ.
ಈಗಾಗಲೇ ಆಗಿರುವ ಕೆಲಸದ ಅಂಕಿ ಅಂಶ ದಾಖಲಿಸುವಲ್ಲಿನ ವಿಳಂಬ ಹಾಗೂ 2016ರ ಮಾರ್ಚ್ ತಿಂಗಳಲ್ಲಿ ನಡೆಯುವ ಉದ್ಯೋಗವನ್ನು ಗಣನೆಗೆ ತೆಗೆದುಕೊಂಡರೆ, ಕನಿಷ್ಠ ಎಂದರೂ 50 ಸಾವಿರ ಕೋಟಿ ರೂ. ನಿಗದಿಪಡಿಸಬೇಕಿತ್ತು. ಈಗ ಇರುವ ಉದ್ಯೋಗದ ಪ್ರಮಾಣವನ್ನು ಪರಿಗಣಿಸಿದರೆ ಬಜೆಟ್‌ನಲ್ಲಿ ಅನುದಾನ ಕಡಿತಗೊಂಡಿದೆ ಎಂದೇ ಹೇಳಬೇಕಾಗುತ್ತದೆ ಎನ್ನುವುದು ಈ ಸಂಸ್ಥೆಯ ವಾದ.

ಕೃಷಿ ತಲ್ಲಣ
ಉದ್ಯೋಗ ಖಾತ್ರಿ ಯೋಜನೆಯ ಮೇಲೆ ಗಮನ ಕೇಂದ್ರೀಕರಿಸುವ ಸರಕಾರದ ನವೀಕೃತ ಪ್ರಯತ್ನಕ್ಕೆ ಮುಖ್ಯ ಕಾರಣವೆಂದರೆ, ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆಯನ್ನು ಉತ್ತೇಜಿಸುವುದು. ದೇಶದ ಮೂರನೆ ಒಂದರಷ್ಟು ಜಿಲ್ಲೆಗಳು ಬರಪೀಡಿತವಾಗಿದ್ದು, ಎಲ್ಲೆಡೆ ಕೃಷಿ ಕ್ಷೇತ್ರದಲ್ಲಿ ತಲ್ಲಣ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿಗೆ ಒತ್ತು ನೀಡುವುದು ಸರಕಾರದ ವಾಸ್ತವ ಉದ್ದೇಶ.
ಈ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸರಕಾರ ವಾರ್ಷಿಕ ಕನಿಷ್ಠ 100 ದಿನಗಳ ಕೂಲಿಯನ್ನು ಗ್ರಾಮಗಳಲ್ಲಿ ನೀಡುತ್ತದೆ. ಗ್ರಾಮಗಳಲ್ಲಿ ದೈಹಿಕ ಶ್ರಮ ಕೈಗೊಳ್ಳಲು ಇಚ್ಛಿಸುವ ಯಾರೇ ಹೆಸರು ನೋಂದಾಯಿಸಿದರೂ ಈ ಸೌಲಭ್ಯ ನೀಡಬೇಕಾಗುತ್ತದೆ.
ಕಳೆದ ವರ್ಷ ಬರಪೀಡಿತ ಎಂದು ಘೋಷಿಸಲ್ಪಟ್ಟ ಎಂಟು ರಾಜ್ಯಗಳಲ್ಲಿ ಹೆಚ್ಚುವರಿ 50 ದಿನಗಳ ಉದ್ಯೋಗವನ್ನು ಈ ಯೋಜನೆಯಡಿ ಕಲ್ಪಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯ ಅವಕಾಶ ಮಾಡಿ ಕೊಟ್ಟಿತ್ತು. ಈ ಪ್ರದೇಶಗಳಲ್ಲಿ ರೈತರ ಸಂಕಷ್ಟದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿತ್ತು.

ಆದರೆ ಈ ಯೋಜನೆಯ ಬೇಡಿಕೆ ಆಧಾರಿತ ಸ್ವರೂಪವನ್ನು ಸರಕಾರ ಕೀಳಂದಾಜು ಮಾಡುತ್ತಿದೆ ಎಂದು ಬಹುತೇಕ ಸಾಮಾಜಿಕ ಕಾರ್ಯಕರ್ತರು ಮತ್ತು ಅಭಿವೃದ್ಧಿ ಅರ್ಥ ಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಮುಕ್ತ, ಬೇಡಿಕೆ ಆಧಾರಿತ ಅವಕಾಶಗಳನ್ನು ಕಲ್ಪಿಸುವ ಬದಲು ಸರಕಾರ, ರಾಜ್ಯಗಳಿಗೆ ಕೋಟಾ ಆಧಾರಿತ ಕಾರ್ಮಿಕ ಬಜೆಟ್‌ಗೆ ಬದ್ಧವಾಗಿರುವಂತೆ ಸೂಚಿಸುತ್ತಿದೆ. ಅದಕ್ಕಿಂತ ಹೆಚ್ಚಾಗಿ ನಿಗದಿತ ಗುರಿಯನ್ನು ಮೀರಿ ಯಾವ ರಾಜ್ಯಗಳೂ ಸಾಧನೆ ಮಾಡುವಂತಿಲ್ಲ ಎಂದು ಪೀಪಲ್ಸ್ ಆ್ಯಕ್ಷನ್ ಫಾರ್ ಎಂಪ್ಲಾಯ್‌ಮೆಂಟ್ ಗ್ಯಾರಂಟಿ ಸಂಸ್ಥೆಯ ಪ್ರಕಟಣೆ ಆಕ್ಷೇಪಿಸಿದೆ. ಕಳೆದ ವರ್ಷದ ಬಜೆಟ್‌ನಲ್ಲಿ 34,699 ಕೋಟಿ ರೂ. ಹಂಚಿಕೆ ಮಾಡಿದ್ದ ಜೇಟ್ಲ್ಲಿಯವರು, ಅಗತ್ಯ ಬಿದ್ದರೆ ವರ್ಷಾಂತ್ಯದಲ್ಲಿ ಹೆಚ್ಚುವರಿ 5,000 ಕೋಟಿ ರೂ.ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಕಾರ್ಯಗತಗೊಳ್ಳಲೇ ಇಲ್ಲ.
ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆ ಕಾರ್ಯಕರ್ತರು ಕಳೆದ ಜನವರಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಸಲ್ಲಿಸಿದ ಅರ್ಜಿಗೆ ಸಿಕ್ಕಿದ ಮಾಹಿತಿಯಂತೆ, ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಬೀರೇಂದ್ರ ಸಿಂಗ್ ಚೌಧರಿ, ಹಣಕಾಸು ಸಚಿವರಿಗೆ ಡಿಸೆಂಬರ್ 31ರಂದು ಪತ್ರ ಬರೆದು, ರೈತರು ಸಂಕಷ್ಟದಲ್ಲಿರುವ ಈ ವರ್ಷ ಯೋಜನೆಗೆ ಹಣದ ಕೊರತೆ ತೀವ್ರವಾಗಿದೆ ಎಂದು ವಿವರಿಸಿದ್ದರು. 12 ರಾಜ್ಯಗಳಿಗೆ ನಿಗದಿಯಾಗಿದ್ದ ಅನುದಾನ ಡಿಸೆಂಬರ್ ತಿಂಗಳೊಳಗೆಯೇ ಮುಗಿದ ಹಿನ್ನೆಲೆಯಲ್ಲಿ, ಹಿಂದಿನ ಬಜೆಟ್‌ನಲ್ಲಿ ನೀಡಿದ ಭರವಸೆಯಂತೆ 5,000 ಕೋಟಿ ರೂ. ಹೆಚ್ಚಿಗೆ ಮಂಜೂರು ಮಾಡುವಂತೆ ಕೋರಿದ್ದರು.
ಈ ಮೊತ್ತದಲ್ಲಿ ಹಣಕಾಸು ಸಚಿವರು 2,000 ಕೋಟಿ ರೂ.ಮಾತ್ರ ಸಚಿವಾಲಯಕ್ಕೆ ವಿತರಿಸಿದ್ದಾರೆ ಎಂದು ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯ ಕಾರ್ಯಕರ್ತ ನಿಖಿಲ್ ಡೇ ಹೇಳುತ್ತಾರೆ. ಹಲವು ರಾಜ್ಯಗಳು ಅನುದಾನದ ಕೊರತೆಯಿಂದ ಬಳಲುತ್ತಿವೆ ಎನ್ನುವುದು ಮಾಹಿತಿ ಹಕ್ಕು ಕಾಯ್ದೆ ಅನ್ವಯ ಪಡೆದ ದಾಖಲೆಗಳಿಂದ ದೃಢಪಟ್ಟಿದೆ. ಈ ಪ್ರವೃತ್ತಿ ಈ ವರ್ಷವೂ ಮುಂದುವರಿಯಲಿದೆ. ಈ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಗಳಿಗೆ ಸಮಯಕ್ಕೆ ಸರಿಯಾಗಿ ಉದ್ಯೋಗವೂ ಸಿಗುವು ದಿಲ್ಲ; ವೇತನವೂ ಸಿಗುವುದಿಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ.
(ಕೃಪೆ: ಸ್ಕ್ರಾಲ್.ಇನ್)

Writer - ಅನುಮೇಹ ಯಾದವ್

contributor

Editor - ಅನುಮೇಹ ಯಾದವ್

contributor

Similar News