ಕನ್ಹಯ್ಯ ಪ್ರಕರಣ: ವೀಡಿಯೊ ತಿರುಚಿದ್ದು ಸ್ಮತಿ ಮಾಜಿ ಸಹಚರ

Update: 2016-03-02 03:23 GMT

ಹೊಸದಿಲ್ಲಿ, ಮಾ.2: ದೇಶಾದ್ಯಂತ ವಿವಾದದ ಬಿರುಗಾಳಿ ಎಬ್ಬಿಸಿದ್ದ ಕನ್ಹಯ್ಯಿ ಪ್ರಕರಣದಲ್ಲಿ  ವೀಡಿಯೊ ತಿರುಚಿರುವುದನ್ನು ವಿಧಿವಿಜ್ಞಾನ ಪ್ರಯೋಗಾಲಯ ದೃಢಪಡಿಸಿದ್ದು, ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮತಿ ಇರಾನಿ ಸಹಚರ ಎನ್ನುವುದನ್ನೂ ಬಹಿರಂಗಪಡಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಎರಡು ಫೈಲ್‌ಗಳು ಸಮಸ್ಯಾತ್ಮಕವಾಗಿದೆ ಎಂದು ವಿಧಿ ವಿಜ್ಞಾನ ಆಡಿಯೊ  ವೀಡಿಯೊ ದೃಢೀಕರಣ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಮೊದಲ ವಿಡಿಯೊವನ್ನು ಕ್ಯೂ1 ಎಂದು ಹೆಸರಿಸಲಾಗಿದ್ದು, "ಭಾರತ ವಿರೋಧಿ ಘೋಷಣೆ ಕೂಗಿದ ಕನ್ಹಯ್ಯಾ ಸಿಕ್ಕಿಹಾಕಿಕೊಂಡಿದ್ದಾನೆ" ಎಂಬ ಶೀರ್ಷಿಕೆ ಇದೆ. ಈ  ವೀಡಿಯೊ ತುಣುಕನ್ನು ಯೂ ಟ್ಯೂಬ್‌ನಿಂದ ಪಡೆಯಲಾಗಿದ್ದು, ಬಳಿಕ ಹಲವು ಸುದ್ದಿವಾಹಿನಿಗಳು ಇದನ್ನು ಪ್ರಸಾರ ಮಾಡಿದ್ದವು. ಇದು ಕನ್ಹಯ್ಯಾ ದೇಶವಿರೋಧಿ ಘೋಷಣೆ ಕೂಗಿರುವುದಕ್ಕೆ ಪ್ರಬಲ ಸಾಕ್ಷ್ಯ ಎಂದು ಹೇಳಿಕೊಂಡಿದ್ದವು.


ಕ್ಯೂ2 ಎಂದು ಹೆಸರಿಸಿರುವ ಎರಡನೇ  ವೀಡಿಯೊವನ್ನು hilpitewari  ಯುಆರ್‌ಎಲ್ ಅಡ್ರೆಸ್‌ನಿಂದ ಪಡೆಯಲಾಗಿದೆ. ಶಿಲ್ಪಿ ತಿವಾರಿ ಸಕ್ರಿಯ ಟ್ವಿಟ್ಟರ್ ಬಳಕೆದಾರರಾಗಿದ್ದು, ಸಂಘ ಪರಿವಾರದ ಸಿದ್ಧಾಂತದ ಪ್ರಬಲ ಪ್ರತಿಪಾದಕಿ. ಪ್ರಧಾನಿ ವಿರುದ್ಧ ಯಾರೇ ಟೀಕಿಸಿದರೂ ಟ್ವಿಟ್ಟರ್ ಎದಿರೇಟು ನೀಡುವ ಅಂಧಾಭಿಮಾನಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ಸ್ಮತಿ ಇರಾನಿ ಅವರ ಪ್ರಚಾರ ವ್ಯವಸ್ಥಾಪಕಿಯಾಗಿ ಕಾರ್ಯ ನಿರ್ವಹಿಸಿದ್ದರು. ಈ ಘಟನೆ ಬಳಿಕ ಟ್ವಿಟ್ಟರ್ ಖಾತೆಯನ್ನು ರದ್ದು ಮಾಡಿ ಭೂಗತರಾಗಿದ್ದರು.


ತಿವಾರಿ ಇರಾನಿ ಜತೆ ಎಷ್ಟು ನಿಕಟ ಸಂಪರ್ಕ ಹೊಂದಿದ್ದಾರೆ ಎಂದರೆ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಿಯಮಾವಳಿಯನ್ನು ಸಡಿಲಿಸಿ, ತಿವಾರಿಯನ್ನು ಮಾಸಿಕ 35 ಸಾವಿರ ರೂಪಾಯಿ ಶುಲ್ಕ ನೀಡಿ ಸಲಹೆಗಾರರಾಗಿ ನೇಮಕ ಮಾಡಿಕೊಂಡಿದೆ.
 ವೀಡಿಯೊ ತುಣುಕುಗಳ ಪಿಚ್ ಹಾಗೂ ಇಂಟೆನ್ಸಿಟಿ ಕಂಟೋರ್ಸ್‌ಗಳಲ್ಲಿ ಎರ್ರಾಬಿರ್ರಿ ಬದಲಾವಣೆ ಇದ್ದು, ದೃಶ್ಯಾವಳಿ ದಾಖಲಾತಿ ಅಧಿಕೃತವಲ್ಲ ಎಂದು ಸ್ಪಷ್ಟಪಡಿಸಿದೆ.


ದೇಶವಿರೋಧಿ ಘೋಷಣೆ ಕೂಗಿದ್ದಾರೆ ಎನ್ನಲಾದ ಏಳು  ವೀಡಿಯೊ ತುಣುಕುಗಳನ್ನು ದಿಲ್ಲಿ ಸರ್ಕಾರ ಪರೀಕ್ಷೆಗೆ ಗುರಿಪಡಿಸಿದಾಗ ಈ ಪೈಕಿ ಮೂರನ್ನು ತಿದ್ದಿರುವುದು ಸ್ಪಷ್ಟವಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ. ದಿಲ್ಲಿ ಸರ್ಕಾರ ಹೈದ್ರಾಬಾದ್‌ನ ಸತ್ಯ ಪ್ರಯೋಗಾಲಯಕ್ಕೆ ಇದನ್ನು ಕಳುಹಿಸಿಕೊಟ್ಟಿತ್ತು. ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ದೆಹಲಿ ಸರ್ಕಾರ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News