ಲೋಕಸಭೆಯ ಮಾಜಿ ಸ್ವೀಕರ್ ಪಿ.ಎ. ಸಂಗ್ಮಾ ವಿಧಿವಶ
ಹೊಸದಿಲ್ಲಿ, ಮಾ.4: ಲೋಕಸಭೆಯ ಮಾಜಿ ಸ್ವೀಕರ್ ಪಿ.ಎ. ಸಂಗ್ಮಾ ಶುಕ್ರವಾರ ಹೃದಯಾಘಾತದಿಂದ ನಿಧನರಾದರು.
ಅವರಿಗೆ 68 ವರ್ಷ ವಯಸ್ಸಾಗಿತ್ತು.
ಮಾಜಿ ಸ್ವೀಕರ‍್ ಸಂಗ್ಮಾ ನಿಧನಕ್ಕೆ ಸಂತಾಪ ಸೂಚಿಸಿ ಲೋಕಸಭೆಯ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
1947, ಸೆಪ್ಟಂಬರ್ 1ರಂದು ಮೇಘಾಲಯದ ಚಪಾಥಿ ಗ್ರಾಮದಲ್ಲಿ ಜನಿಸಿದ ಪಿ.ಎ ಸಂಗ್ಮಾ 1977ರಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ಟುರಾ ಕ್ಷೇತ್ರದಿಂದ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ್ದರು. ಬಳಿಕ ಅದೇ ಕ್ಷೇತ್ರದಿಂದ ಎಂಟು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. 1996ರಿಂದ 1998ರ ತನಕ ಲೋಕಸಭಾ ಸ್ವೀಕರ್, 1988ರಿಂದ 1990ರ ತನಕ ಮೇಘಾಲಯದ ಮುಖ್ಯ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಕೇಂದ್ರ ಸರಕಾರದಲ್ಲಿ ಕೈಗಾರಿಕೆ, ವಾಣಿಜ್ಯ, ಗೃಹ ವ್ಯವಹಾರ ,ಕಾರ್ಮಿಕ , ವಾರ್ತಾ ಮತ್ತು ಪ್ರಸಾರ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1999ರಲ್ಲಿ ಸೋನಿಯಾ ಗಾಂಧಿ ವಿದೇಶಿ ಮೂಲದ ಬಗ್ಗೆ ತಕರಾರು ಎತ್ತಿ ಕಾಂಗ್ರೆಸ್‌ನಿಂದ ಶರದ್ ಪವಾರ್ ಮತ್ತು ತಾರಿಕ್ ಅನ್ವರ್ ಜೊತೆ ಹೊರಬಂದು ಎನ್‌ಸಿಪಿ ಸ್ಥಾಪಿಸಿದ್ದರು. 2004ರಲ್ಲ ಎನ್‌ಸಿಪಿ ತೊರೆದು ಪ್ರಾದೇಶಿಕ ಪಕ್ಷ ಕಟ್ಟಿದ್ದರು. ಬಳಿಕ ತ್ರಿಣಮೂಲ ಕಾಂಗ್ರೆಸ್ ಜೊತೆ ತನ್ನ ಪಕ್ಷವನ್ನು ವಿಲೀನಗೊಳಿಸಿದ್ದರು. ಮತ್ತೆ ಎನ್‌ಸಿಪಿಗೆ ವಾಪಸಾಗಿದ್ದ ಸಂಗ್ಮಾ ಅವರು ಪ್ರಣವ್ ಮುಖರ್ಜಿ ವಿರುದ್ಧ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
ಸಗ್ಮಾ ಪುತ್ರಿ ಅಗಥಾ ಸಂಗ್ಮಾ ಅವರು 14 ಮತ್ತು 15ನೆ ಲೋಕಸಭೆಗೆ ಆಯ್ಕೆಯಾಗಿದ್ದರು. ಯುಪಿಎ ಸರಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸಂಗ್ಮಾ ಪುತ್ರ ಕಾನಾರ್ಡ್ ಸಂಗ್ಮಾ ಮೇಘಾಲಯದ ವಿಧಾನ ಸಭೆಯ ವಿಪಕ್ಷ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.