ಮೊಬೈಲ್ ಮೂಲಕ ಜ್ಞಾನ ಪ್ರಸಾರಕ್ಕೆ ಚಿಂತನೆ: ಭರತ್‌ಲಾಲ್ ಮೀನಾ
ಬೆಂಗಳೂರು, ಮಾ.4: ಶಿಕ್ಷಣ ಕ್ಷೇತ್ರದಲ್ಲಿ ಮಾಹಿತಿ ತಂತ್ರ ಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮೊಬೈಲ್ ಮೂಲಕವೇ ಜ್ಞಾನವನ್ನು ವಿನಿಮಯ ಮಾಡಿಕೊಳ್ಳುವಂತಹ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಭರತ್‌ಲಾಲ್ ಮೀನಾ ತಿಳಿಸಿದ್ದಾರೆ.
ಶುಕ್ರವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಗರದ ಕೇಂದ್ರೀಯ ಗೃಹ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ‘ಅಂತರ ಕಾಲೇಜು ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆ’ಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿಗೂ ದೇಶದಲ್ಲಿ ಪದವಿ ಶಿಕ್ಷಣ ಪಡೆಯುವವರ ಸಂಖ್ಯೆ ತೀರ ವಿರಳವಾಗಿದೆ. ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ ಗಳಿಗೂ ಉತ್ತಮ ಶಿಕ್ಷಕರಿಲ್ಲದೆ ಜ್ಞಾನದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸ ನೀಡುವಂತಹ ಶಿಕ್ಷಕರ ಪಾಠ, ಪ್ರವಚನಗಳನ್ನು ಮೊಬೈಲ್‌ಗಳಲ್ಲಿ ಅಳವಡಿ ಸಲಾಗುವುದು. ಇದರಿಂದ ಪ್ರತಿಯೊಬ್ಬರಿಗೂ ಉತ್ತಮ ಜ್ಞಾನ ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಅಶಿಕ್ಷಿತರು ಮಾತ್ರವೇ ಮೂಢನಂಬಿಕೆಯನ್ನು ಪಾಲಿಸುವ ವರು ಎಂದು ನಂಬಲಾಗಿದೆ. ಆದರೆ, ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿರುವವರು ಹೆಚ್ಚಿನ ಪ್ರಮಾಣದಲ್ಲಿ ಮೂಢನಂಬಿಕೆ ಯನ್ನು ಪಾಲಿಸುವವರಾಗಿದ್ದಾರೆ. ಇದರಿಂದಾಗಿಯೆ ಸಮಾಜ ವೈಜ್ಞಾನಿಕತೆಯತ್ತ ಸಾಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಶಿಕ್ಷಣ ಪಡೆದವರು ಜಾತಿಯನ್ನು ಬಿಟ್ಟು ವಿಶ್ವ ಮಾನವರಾ ಗುತ್ತಾರೆ. ಭ್ರಷ್ಟಾಚಾರಕ್ಕೆ ಕೈ ಚಾಚುವುದಿಲ್ಲ. ಪರಿಸರ ಪರವಾದ ಚಿಂತನೆಯನ್ನು ಹೊಂದಿರುತ್ತಾರೆ ಎಂದು ಊಹಿಸಲಾಗಿತ್ತು. ಆದರೆ, ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಎಲ್ಲ ಅನಿಷ್ಟಗಳಿಗೆ ವಿದ್ಯಾವಂತರೇ ಕಾರಣರಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.
ನಮ್ಮ ಸುತ್ತಮುತ್ತನಲ್ಲಿರುವ ಪ್ರತಿಯೊಂದೂ ವಸ್ತುವಿನಲ್ಲೂ ವೈಜ್ಞಾನಿಕತೆಯಿದೆ. ಅದನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸ ಬೇಕು. ಇದರಿಂದ ವಿದ್ಯಾರ್ಥಿಗಳು ಪರಿಸರವನ್ನು ಅತ್ಯಂತ ಕುತೂ ಹಲದಿಂದ ಗಮನಿಸಲು ಪ್ರಾರಂಭಿಸುತ್ತಾರೆ. ಮುಂದೊಂದು ದಿನ ಹೊಸ ಆವಿಷ್ಕಾರಕ್ಕೆ ಕಾರಣವಾಗುತ್ತದೆ ಎಂದು ಅವರು ಅಭಿಪ್ರಾಯಿಸಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ಸರಕಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ಗೆ 6 ಲಕ್ಷ ರೂ.ನೀಡುತ್ತಿದೆ. ಇದರಿಂದ ವರ್ಷಪೂರ್ತಿ ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸುಮಾರು 30ಲಕ್ಷ ರೂ.ಗೂ ಹೆಚ್ಚಿನ ಅನುದಾನ ನೀಡಬೇಕೆಂದು ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶಕ ಭರತ್‌ಲಾಲ್ ಮೀನಾರವರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅಂತರ ಕಾಲೇಜು ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು. ಈ ವೇಳೆ ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಸಿ.ರಾಮಣ್ಣ, ಕರಾವಿಪ ಕಾರ್ಯದರ್ಶಿ ಆರ್.ನಾಗೇಶ್ ಅರಳಕುಪ್ಪೆ, ಕರಾವಿಪದ ಜಿಲ್ಲಾ ಕಾರ್ಯದರ್ಶಿ ಈ.ಬಸವರಾಜು ಮತ್ತಿತರರು ಉಪಸ್ಥಿತರಿದ್ದರು