×
Ad

ಪತ್ರಕರ್ತ

Update: 2016-03-05 23:40 IST

ಇರಾನಿ ಟಾಸ್: ಹೆಡ್ ಅಥವಾ ಟೇಲ್
ಜೆಎನ್‌ಯು ವಿವಾದದಿಂದಾಗಿ ಸ್ಮತಿ ಇರಾನಿ ಬಗ್ಗೆ ನಿರ್ಧಾರ ಕೈಗೊಳ್ಳಲೇಬೇಕಾದ ಪರಿಸ್ಥಿತಿ ಬಂದಿದೆ. ಕಳೆದ ಕೆಲ ತಿಂಗಳಿಂದ ಅವರು ಪಕ್ಷದಲ್ಲಿ ಅವರ ಮಹತ್ವ ಮಬ್ಬಾಗುತ್ತಿರುವ ಸ್ಪಷ್ಟ ಸೂಚನೆ ಕಾಣುತ್ತಿತ್ತು. ಅನಿವಾರ್ಯವಾದ ಸಂಪುಟ ಪುನರ್‌ರಚನೆಯಲ್ಲಿ ಅವರ ಕುರ್ಚಿಗೂ ಸಂಚಕಾರ ಬರುವ ಸಾಧ್ಯತೆ ಕಾಣುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರೇ ತಮ್ಮ ವೈಯಕ್ತಿಕ ಟ್ವಿಟರ್ ಖಾತೆ ಮೂಲಕ ಉದ್ರೇಕಕಾರಿ ಭಾಷಣಕ್ಕೆ ಶಹಬ್ಬಾಸ್ ಹೇಳಿರುವುದನ್ನು ನೋಡಿದರೆ, ಸದ್ಯಕ್ಕೆ ಅವರ ತಲೆ ಹಾಗೂ ಕುರ್ಚಿ ಎರಡೂ ಭದ್ರ ಎಂಬಂತೆ ಕಾಣುತ್ತಿದೆ. ಉತ್ತರ ಪ್ರದೇಶಕ್ಕೆ ಅವರನ್ನು ಮುಖ್ಯಮಂತ್ರಿಯಾಗಿ ಬಿಂಬಿಸುವ ಸಾಧ್ಯತೆ ಬಗ್ಗೆಯೂ ಸುದ್ದಿಗಳು ಹರಿದಾಡುತ್ತಿವೆ. 2014ರ ಲೋಕಸಭಾ ಚುನಾವಣೆಯಲ್ಲಿ ಇರಾನಿ, ರಾಹುಲ್‌ಗಾಂಧಿ ವಿರುದ್ಧ ಅಮೇಥಿ ಕ್ಷೇತ್ರದಲ್ಲಿ ಸೆಣಸಿದ ಅನುಭವ ಹೊಂದಿದ್ದಾರೆ. ಈ ಕಾರಣದಿಂದ ಅವರ ಆಕ್ರಮಣಕಾರಿ ವ್ಯಕ್ತಿತ್ವ ಸಾಬೀತಾಗಿದೆ. ಆದರೆ ಉತ್ತರಪ್ರದೇಶದ ಗದ್ದುಗೆಯನ್ನು ಇರಾನಿ ಸ್ವೀಕರಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಅನುಮಾನಗಳಿವೆ. ಪಕ್ಷದ ಒಳಗಿನವರು ಹೇಳುವಂತೆ ಗಾಳಿ ಯಾವ ಕಡೆ ಬೀಸುತ್ತದೆ ಎನ್ನುವುದನ್ನು ಅಳೆಯಬೇಕಾದರೆ, ಇರಾನಿಯನ್ನು ಕ್ಯಾಬಿನೆಟ್‌ನಲ್ಲಿ ಉಳಿಸಿಕೊಳ್ಳುತ್ತಾರೆಯೇ ಅಥವಾ ಪಕ್ಷದ ಕೆಲಸಕ್ಕೆ ನಿಯೋಜಿಸುತ್ತಾರೆಯೋ ಕಾದು ನೋಡಬೇಕು.

ದೀದಿ ಬಿಗ್ ಡೀಲ್!
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಭಾಷಣ ಮಾಡುವ ಮುನ್ನ ತೃಣಮೂಲ ಕಾಂಗ್ರೆಸ್ ಸದಸ್ಯರಿಗೆ ಮಮತಾ ಬ್ಯಾನರ್ಜಿಯಿಂದ ಸ್ಪಷ್ಟ ನಿದೇರ್ಶನ ಬಂದಿತ್ತು. ಅದೇನೆಂದರೆ ನಿಷ್ಠಾವಂತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿ ಎನ್ನುವುದು. ಕೆಲ ಮೂಲಗಳ ಪ್ರಕಾರ, ಈ ಸಂದೇಶ, ಮೋದಿ ಭಾಷಣದ ವೇಳೆೆ ಧರಣಿ, ಸಭಾತ್ಯಾಗವನ್ನು ನಿಲ್ಲಿಸಿತು. ಮೋದಿ ಭಾಷಣಕ್ಕೆ ಮುನ್ನ ತೃಣಮೂಲ ಸದಸ್ಯರು ಪರಸ್ಪರ ಪಿಸುಗುಟ್ಟುತ್ತಿದ್ದರು. ಈ ಸೂಚನೆ ಬಂದದ್ದು, ಚುನಾವಣಾ ಆಯೋಗ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಘೋಷಿಸುವ ಒಂದು ದಿನ ಮೊದಲು. ಸಹಜವಾಗಿಯೇ ತೃಣಮೂಲ ಸಂಸದರು, ತಮ್ಮ ನಾಯಕಿ ಬಿಜೆಪಿ ಜತೆ ಗುಪ್ತ ಒಪ್ಪಂದ ಮಾಡಿಕೊಂಡಿದ್ದಾರೆಯೇ ಎಂಬ ಅನುಮಾನಪಡಲು ಕಾರಣವಾಯಿತು. ಆ ಸಂದೇಶದ ಪರಿಣಾಮ ಸ್ಪಷ್ಟ. ಮೋದಿ ಭಾಷಣ ಮಾಡುತ್ತಿದ್ದಾಗ, ತೃಣಮೂಲ ಸದಸ್ಯರು ಆಲಿಸಿದರು. ಕನಿಷ್ಠ ಶಿಸ್ತಿನ ವಿದ್ಯಾರ್ಥಿಗಳಂತೆ ಆಲಿಸುವವರಂತೆ ತೋರಿಸಿಕೊಂಡರು. ಪಕ್ಕದ ನಾಯಕರನ್ನು ಮೋದಿ ಮಾತಿನಿಂದ ತಿವಿದರೂ ಯಾರೂ ತುಟಿ ಬಿಚ್ಚಲಿಲ್ಲ. ದೀದಿ ಡೀಲ್ ಮಾಡಿಕೊಂಡರೇ ಇಲ್ಲವೇ ಎನ್ನುವ ಪ್ರಶ್ನೆ ಎಲ್ಲರ ತುಟಿಯಂಚಿನಲ್ಲಿತ್ತು.

ಒಮರ್-ಮೋದಿ ಸ್ನೇಹಹಸ್ತ?
ಕಾಶ್ಮೀರದಲ್ಲಿ ಮೆಹಬೂಬ ಮುಫ್ತಿ ಕಬ್ಬಿಣದ ಕಡಲೆ ಎನ್ನುವುದು ಸ್ಪಷ್ಟವಾಗುತ್ತಿದ್ದಂತೆ, ಹತಾಶ ಬಿಜೆಪಿ ಒಮರ್ ಅಬ್ದುಲ್ಲಾ ಬಳಿಗೆ ಸಂದೇಶವಾಹಕರನ್ನು ಛೂಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಒಮರ್ ಅಬ್ದುಲ್ಲಾಗೆ ಮುಖ್ಯಮಂತ್ರಿ ಗಾದಿ ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಪೋಷಕ ಫಾರೂಕ್ ಅಬ್ದುಲ್ಲಾ ಅವರಿಗೂ ಒಂದು ಸ್ಥಾನದ ಆಮಿಷ. ಅದಾಗ್ಯೂ ನ್ಯಾಶನಲ್ ಕಾನ್ಫರೆನ್ಸ್‌ನ ಹಿರಿಯ ಮುಖಂಡರು ಒಮರ್ ಅಬ್ದುಲ್ಲಾ ಅವರಿಗೆ ಕೇಸರಿ ಪಕ್ಷದ ಜತೆ ಯಾವುದೇ ಮೈತ್ರಿ ಮಾಡಿಕೊಳ್ಳದಂತೆ ಎಚ್ಚರಿಸಿದ್ದಾರೆ ಎನ್ನಲಾಗಿದೆ. ಕಾಶ್ಮೀರದಲ್ಲಿ ಬಿಜೆಪಿ ವಿರೋಧಿ ಅಲೆ ಪ್ರಬಲವಾಗಿರುವ ಹಿನ್ನೆಲೆಯಲ್ಲಿ, ಆ ಪಕ್ಷದ ಜತೆ ಕೈಜೋಡಿಸುವುದು ಪಕ್ಷದ ಆತ್ಮಹತ್ಯೆಗೆ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ರಾಜ್ಯಕ್ಕೆ ರಾಮಮಾಧವರ್ ಅವರ ಭೇಟಿ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಮುಖಂಡರು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಜತೆಗಿನ ಮೈತ್ರಿ ಕಡಿದುಕೊಳ್ಳುವ ಬದಲು ಅದಕ್ಕೆ ಬದ್ಧವಾಗಿರುವುದೇ ಸೂಕ್ತ ಎಂಬ ಅಭಿಪ್ರಾಯ ಹೊಂದಿದ್ದಾರೆ. ಅನಿವಾರ್ಯವಾಗಿಯೇ ಬಜೆಟ್ ನಿರ್ಣಾಯಕ ಅಂಶ. ಉಭಯ ಪಕ್ಷಗಳು ರಾಜ್ಯಕ್ಕೆ ಒಂದಷ್ಟು ನಿರೀಕ್ಷೆಯಲ್ಲಿದ್ದವು. ಅವರೇ ಹೇಳುವಂತೆ ಪರಿಸ್ಥಿತಿ ತೀರಾ ಗೊಂದಲಕಾರಿ!

ಕಾಂಗ್ರೆಸ್‌ಗೆ ಪ್ರಶಾಂತ್ ಆಸರೆ?
ವುುಳುಗುತ್ತಿರುವವನಿಗೆ ಹುಲ್ಲುಕಡ್ಡಿ ಆಸರೆ ಎಂಬಂಥ ಸ್ಥಿತಿ ಉತ್ತರ ಪ್ರದೇಶ ಕಾಂಗ್ರೆಸ್‌ನದ್ದು. ಅದಾಗ್ಯೂ ಉತ್ತರ ರಾಜಕೀಯ ಅಚ್ಚರಿಯ ತಿರುವುಗಳಿಗೆ ಕಾರಣವಾಗುತ್ತಿದೆ. ಇದಕ್ಕೆ ಕಾರಣವೆಂದರೆ, ಪ್ರಧಾನಿ ನರೇಂದ್ರ ಮೋದಿ, ಬಿಹಾರದಲ್ಲಿ ನಿತೀಶ್ ಗೆಲುವಿನ ರೂವಾರಿ ಪ್ರಶಾಂತ್ ಕಿಶೋರ್ ಕೃಪೆ ಈ ಬಾರಿ ಕಾಂಗ್ರೆಸ್‌ನತ್ತ ಹರಿದಿದೆ. ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿಯರವನ್ನು ಭೇಟಿ ಮಾಡಿದಾಗ ಪ್ರಶಾಂತ್ ಕಿಶೋರ್ ಕೂಡಾ ಜತೆಗಿದ್ದರು. ಸಹಜವಾಗಿಯೇ ಯಾರ್ಯಾರು ಏನೇನು ಹೇಳುತ್ತಾರೆ ಎನ್ನುವುದನ್ನು ಕೇಳಿಸಿಕೊಂಡು ವೌನವಾಗಿದ್ದರು. ಉತ್ತರ ಪ್ರದೇಶ ಚುನಾವಣಾ ಪ್ರಚಾರದಲ್ಲಿ ಅವರು ಯಾವ ಪಾತ್ರ ವಹಿಸುತ್ತಾರೆ ಎನ್ನುವುದೂ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಆದರೆ ಕೆಲ ಮಂದಿ ಮಾತ್ರ ಈ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬಿಜೆಪಿ, ಎಸ್ಪಿ, ಬಿಎಸ್ಪಿ ಹಣಾಹಣಿಯಲ್ಲಿ ಕಾಂಗ್ರೆಸ್ ರಾಜ್ಯ ರಾಜಕೀಯದಲ್ಲಿ ಹೈರಾಣವಾಗಿದೆ. ಕಿಶೋರ್ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಹೆಸರಾದವರು. ಕಾಂಗ್ರೆಸ್ ಇತ್ತೀಚಿನ ವರ್ಷದಲ್ಲಿ ಸಾಧಿಸಲಾಗದ್ದನ್ನು ಸಾಧಿಸಿ ತೋರಿಸುವ ಛಲದಿಂದ ಇದ್ದಾರೆ. ಆದರೆ ಕೆಲ ಹಿರಿಯ ಮುಖಂಡರ ಹೊಟ್ಟೆಯುರಿಗೂ ಅವರು ಕಾರಣರಾಗಿದ್ದಾರೆ. ಇದಕ್ಕೆ ಕಾರಣ ರಾಹುಲ್‌ಗಾಂಧಿ ಜತೆಗಿನ ಅವರ ನಿಕಟ ಸಂಪರ್ಕ ಹಾಗೂ ಕಠಿಣ ಕಾರ್ಯಶೈಲಿ. ಒಂದಂತೂ ನಿಜ; ಉತ್ತರ ಪ್ರದೇಶದ ಚುನಾವಣೆ ಕುತೂಹಲಕಾರಿಯಾಗಿರುತ್ತದೆ.

ತಯಾರಾಗಿ ಬನಿ್ನ...
ಹೊಣೆಗಾರಿಕೆ ಬಹುಶಃ ಯಾವ ಸರಕಾರಕ್ಕೂ ಜನಪ್ರಿಯ ಶಬ್ದವಲ್ಲ. ಅದಾಗ್ಯೂ ನರೇಂದ್ರ ಮೋದಿ ಈ ಹೊಣೆಗಾರಿಕೆ ಬಗ್ಗೆ ದೃಷ್ಟಿ ಕೇಂದ್ರೀಕರಿಸಿರುವುದರಿಂದ ಒಂದಷ್ಟು ಫಲಿತಾಂಶ ಕಾಣುತ್ತಿದೆ. ಸಂಪುಟ ಸಭೆಗೆ ಕೇಂದ್ರ ಸಚಿವರು ಒಂದಷ್ಟು ಪೂರ್ವ ತಯಾರಿಯೊಂದಿಗೆ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತು ನಿರ್ದಿಷ್ಟ ಕಾರ್ಯಗಳ ಪ್ರಸ್ತಾವದೊಂದಿಗೆ ಹಾಜರಾಗುತ್ತಿದ್ದಾರೆ. ಸಭೆಯಲ್ಲಿ ತೂಕಡಿಸುತ್ತಾ ಸಿಕ್ಕಿಹಾಕಿಕೊಳ್ಳುವುದು ರಾಜ್ಯ ಸಚಿವರು ಮತ್ತು ಪ್ರಮುಖ ಅಧಿಕಾರಿಗಳ ಎದುರು ಮುಜುಗರಕ್ಕೀಡಾಗುವುದು ಯಾರಿಗೂ ಬೇಕಾಗಿಲ್ಲ. ಮೋದಿ ಸರಕಾರ ಒಂದಲ್ಲ ಒಂದು ಸಮಸ್ಯೆಗಳಲ್ಲಿ ಎಡವುತ್ತಿದೆ ಎನ್ನುವ ಅಭಿಪ್ರಾಯ ಸಾಮಾನ್ಯವಾಗಿ ವ್ಯಕ್ತವಾಗುತ್ತಿದ್ದರೂ, ಸಂಪುಟ ಸಭೆಗಳಲ್ಲಿ ಮಾತ್ರ ಸಚಿವರು ಎಚ್ಚರದಿಂದ ಇರುವಂತೆ ಮೋದಿ ತಮ್ಮ ಅಧಿಕಾರ ಚಲಾಯಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News