×
Ad

ಕನ್ಹಯ್ಯ ಧ್ವನಿಗೆ ಧ್ವನಿ ಸೇರಿಸಬೇಕಾದ ಅಗತ್ಯ

Update: 2016-03-06 23:41 IST

ದೇಶದ ರಾಜಕೀಯ ತಿರುವು ಪಡೆಯುವಲ್ಲಿ ದಿಲ್ಲಿ, ಜೆಎನ್‌ಯು ಮತ್ತು ಅಲ್ಲಿನ ವಿದ್ಯಾರ್ಥಿಗಳ ಕೊಡುಗೆ ಬಹುದೊಡ್ಡದಿದೆ. ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ, ಭ್ರಷ್ಟಾಚಾರದ ವಿರುದ್ಧ ಎದ್ದ ಚಳವಳಿಗಳಲ್ಲೂ ದಿಲ್ಲಿಯ ಯುವಕರು, ವಿದ್ಯಾರ್ಥಿಗಳ ಪಾತ್ರ ಬಹುದೊಡ್ಡದಿತ್ತು. ನರೇಂದ್ರ ಮೋದಿಯ ರಾಜಕಾರಣಕ್ಕೆ ಪರ್ಯಾಯವಾಗಿ ಕೇಜ್ರಿವಾಲ್ ಹುಟ್ಟಿದ್ದು ಇದೇ ದಿಲ್ಲಿಯಲ್ಲಿ. ನರೇಂದ್ರ ಮೋದಿ ಅಧಿಕಾರ ಹಿಡಿದ ಬಳಿಕ ನಡೆಯುತ್ತಿರುವ ಬೆಳವಣಿಗೆಗಳನ್ನು ದೇಶ ಅಸಹಾಯಕವಾಗಿ ನೋಡುತ್ತಿದ್ದಾಗ, ಅದಕ್ಕೆ ಸಮರ್ಥವಾಗಿ ದಿಲ್ಲಿ ಮತ್ತೆ ಪ್ರತಿಕ್ರಿಯಿಸಿದೆ. ಕೇಜ್ರಿವಾಲ್‌ರನ್ನು ಬಹುಮತದಿಂದ ಅಧಿಕಾರಕ್ಕೇರಿಸಿದ್ದು ದಿಲ್ಲಿಯ ಮೊದಲ ಪ್ರತಿಕ್ರಿಯೆ. ಕೇಜ್ರಿವಾಲ್‌ರಂತಹ ನಾಯಕನೂ ಮೋದಿಯ ಮುಂದೆ ಅಸಹಾಯಕನಾಗಿದ್ದ ಹೊತ್ತಿನಲ್ಲಿ, ದಿಲ್ಲಿಯಿಂದ ಇನ್ನೊಂದು ಧ್ವನಿ ಮೊಳಗಿದೆ. ಆ ಧ್ವನಿಯೇ ಕನ್ಹಯ್ಯೊ. ಮೇಲ್ನೋಟಕ್ಕೆ ಕನ್ಹಯ್ಯೆ ಏನೂ ಅಲ್ಲದ ಎಳೆಯ, ಇನ್ನೂ ಪ್ರಬುದ್ಧನಾಗಬೇಕಾಗಿರುವ ತರುಣನಾಗಿರಬಹುದು. ಆದರೆ ಇಲ್ಲಿ ಕನ್ಹಯ್ಯೆ ನೆಪ ಮಾತ್ರ. ಆ ಮೂಲಕ ಒಂದು ವಿಶ್ವವಿದ್ಯಾಲಯವೇ ಸರಕಾರದ ಜನ ವಿರೋಧಿ ನೀತಿಯ ವಿರುದ್ಧ ದಂಗೆ ಎತ್ತಿದೆ. ಬಿಡುಗಡೆಯ ಬಳಿಕ ಕನ್ಹಯ್ಯಿ ಆಡಿದ ಮಾತುಗಳು ಕೇವಲ ಅವನದೋ, ಅಥವಾ ಅವನು ಪ್ರತಿನಿಧಿಸುವ ಪಕ್ಷದ್ದೋ ಅಲ್ಲ. ಅದು ಇಡೀ ದೇಶದ ಜನರ ಧ್ವನಿಯಾಗಿದೆ. ಸರಕಾರ ಮಟ್ಟ ಹಾಕಲು ನೋಡಿರುವುದು ಈ ದೇಶದ ಜನರ ಧ್ವನಿಯನ್ನು.

ಕನ್ನಯ್ಯೋಒಂದು ನೆಪ ಮಾತ್ರ. ಈ ದೇಶ ರಕ್ಷಣಾ ಇಲಾಖೆಯ ಸಹಿತ ಎಲ್ಲವನ್ನೂ ಖಾಸಗಿಯವರಿಗೆ ಒತ್ತೆ ಇಟ್ಟಿದೆ. ಶಿಕ್ಷಣ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ವಿದೇಶಿ ವಿಶ್ವವಿದ್ಯಾನಿಲಯಗಳು ತಂಡೋಪತಂಡವಾಗಿ ಭಾರತಕ್ಕೆ ಕಾಲಿಡಲು ಇನ್ನು ಹೆಚ್ಚು ಸಮಯವಿಲ್ಲ. ಇದೇ ಸಂದರ್ಭದಲ್ಲಿ ನಮ್ಮ ಸರಕಾರ ವಿದೇಶಿಯರಿಗೆ ಅನುಕೂಲ ಮಾಡುವ ಉದ್ದೇಶದಿಂದ ದೇಶದ ವಿಶ್ವವಿದ್ಯಾನಿಲಯಗಳ ರೆಕ್ಕೆಗಳನ್ನು ಕತ್ತರಿಸುವ ಹುನ್ನಾರದಲ್ಲಿದೆ. ಬಡ, ಶೋಷಿತರಿಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಅನುದಾನಗಳನ್ನು ಒದಗಿಸುವುದು, ಸಂಶೋಧನೆಗಳಿಗಾಗಿ ಅವರಿಗೆ ನೆರವುಗಳನ್ನು ನೀಡುವುದು ಸರಕಾರದ ದೃಷ್ಟಿಯಿಂದ ದುಂದುವೆಚ್ಚವಾಗಿದೆ. ಆದುದರಿಂದ ಅವುಗಳಿಗೆ ಒಂದೊಂದಾಗಿ ಕತ್ತರಿ ಬೀಳುತ್ತಿವೆ. ಸರಕಾರದ ನೀತಿಯ ಪರಿಣಾಮವನ್ನು ಈಗಾಗಲೇ ನೂರಾರು ದಲಿತರು, ಶೋಷಿತ ವರ್ಗದ ವಿದ್ಯಾರ್ಥಿಗಳು ಅನುಭವಿಸುತ್ತಿದ್ದಾರೆ. ತನ್ನ ಹಕ್ಕಿಗಾಗಿ ಹೋರಾಡಿದ ಪ್ರತಿಭಾವಂತ ವಿದ್ಯಾರ್ಥಿ ರೋಹಿತ್ ವೇಮುಲಾ ಅಂತಿಮವಾಗಿ ಆತ್ಮಹತ್ಯೆ ಮಾಡಬೇಕಾದಂತಹ ಸ್ಥಿತಿ ನಿರ್ಮಾಣವಾಯಿತು.

ರೋಹಿತ್ ಆತ್ಮಹತ್ಯೆ ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಹುಟ್ಟಿಸಿದ್ದು ಸತ್ಯ. ರೋಹಿತ್‌ನ ಸಾವನ್ನು ಮುಂದಿಟ್ಟುಕೊಂಡು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧ ಪಟ್ಟಂತೆ ಒಂದು ಚಳವಳಿ ಹುಟ್ಟುತ್ತಿರುವುದು ಮತ್ತು ದಿಲ್ಲಿಯ ಜೆಎನ್‌ಯು ಅದರ ಕೇಂದ್ರವಾಗುತ್ತಿರುವುದು ಸರಕಾರದ ಗಮನಕ್ಕೆ ಬಂದ ಕಾರಣದಿಂದಲೇ, ಕನ್ಹಯ್ಯೆ ಮತ್ತು ಉಳಿದ ವಿದ್ಯಾರ್ಥಿಗಳ ದೇಶಭಕ್ತಿಯ ಕುರಿತಂತೆಯೇ ಸಂಶಯ ಹುಟ್ಟಿಸುವಂತೆ ದೇಶದ್ರೋಹದ ಆರೋಪದಲ್ಲಿ ಬಂಧಿಸಿತು. ಇದಕ್ಕಾಗಿ ಎಷ್ಟು ಪೂರ್ವ ಸಿದ್ಧತೆ ಮಾಡಿತ್ತು ಎಂದರೆ, ನಕಲಿ ವೀಡಿಯೋ, ಉಗ್ರನ ನಕಲಿ ಟ್ವಿಟರ್ ಇವುಗಳನ್ನೆಲ್ಲ ಸರಕಾರ ಯಾವುದೇ ಮುಜುಗರವಿಲ್ಲದೆ ಬಳಸಿಕೊಂಡಿತು. ಕನ್ನಯ್ಯೆಬಂಧನ ಉಳಿದ ವಿದ್ಯಾರ್ಥಿಗಳಿಗೆ ಒಂದು ಬೆದರಿಕೆಯಾಗಬಹುದು ಎಂದೂ ಭಾವಿಸಿತ್ತು. ಆದರೆ ಕನ್ಹಯ್ಯಾನ ಬಂಧನಕ್ಕೆ ಮುಂದಾದ ನರೇಂದ್ರ ಮೋದಿಯ ಸ್ಥಿತಿ, ಬಾಲಕೃಷ್ಣನನ್ನು ಬಂಧಿಸಲು ಹೊರಟು ವಿಫಲನಾದ ಕಂಸನಂತಾಗಿದೆ. ಬಂಧಿಸುವಾಗ ಪುಟ್ಟದಾಗಿದ್ದ ಈ ಕನ್ಹಯ್ಯಿ ಇದೀಗ ದೇಶಾದ್ಯಂತ ತನ್ನ ಎತ್ತರ, ಅಗಲಗಳನ್ನು ವಿಸ್ತರಿಸಿದ್ದಾರೆ. ಕೃಷ್ಣನನ್ನು ದಮನಿಸಲು ಕಂಸನಿಗೆ ಸಹಾಯಕರಾಗಿದ್ದ ಪೂತನಿ, ಅಕ್ರೂರಾದಿಗಳೆಲ್ಲ ವಿಫಲಾಗಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ ಬಂದು ಕನ್ಹಯ್ಯಾ ಮಾಡಿರುವ ಭಾಷಣ ಸ್ವತಃ ಬಿಜೆಪಿ ನಾಯಕರೇ ತಲೆದೂಗುವಂತೆ ಮಾಡಿದೆ. ಶತ್ರುಘ್ನ ಸಿನ್ಹಾರಂತಹ ಹಿರಿಯ ಬಿಜೆಪಿ ನಾಯಕರು ಕನ್ಹಯ್ಯಾಮಾತುಗಳಿಗೆ ತಲೆದೂಗಿದ್ದಾರೆ. ಅದರಲ್ಲಿರುವ ಸತ್ಯಗಳನ್ನು ಒಪ್ಪಿಕೊಂಡಿದ್ದಾರೆ. ವಿಪರ್ಯಾಸವೆಂದರೆ, ಇಷ್ಟಾದರೂ ಸರಕಾರ ತನ್ನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದಿರುವುದು. ಕನ್ಹಯ್ಯಿರನ್ನೂ, ಜೆಎನ್‌ಯು ತಂಡವನ್ನು ಬಗ್ಗು ಬಡಿಯಲು ಮತ್ತೆ ಮತ್ತೆ ಪೊಲೀಸರು ಮತ್ತು ಸಂಘಪರಿವಾರದ ಗೂಂಡಾಗಳನ್ನು ಬಳಸಲು ಹೊರಟಿದೆ. ಜೆಎನ್‌ಯು ಸುತ್ತ, ಮಫ್ತಿ ಪೊಲೀಸರು, ಐಬಿ ಸಿಬ್ಬಂದಿಯೇ ತುಂಬಿಕೊಂಡಿದ್ದಾರೆ. ಕನ್ಹಯ್ಯಾ ಮತ್ತು ಅವನ ಗೆಳೆಯರ ಮೇಲೆ ಪೊಲೀಸರ ಕಣ್ಗಾವಲು ಮುಂದುವರಿದಿದೆ. ಎಲ್ಲಕ್ಕಿಂತ ಆತಂಕಕಾರಿ ಸಂಗತಿಯೆಂದರೆ, ಅವರಿಗೆ ಜೀವ ಬೆದರಿಕೆ ಬಂದಿರುವುದು. ಈಗಾಗಲೇ ಬಿಜೆಪಿಯ ನಾಯಕರೊಬ್ಬತು ಕನ್ಹಯ್ಯಿರ ನಾಲಗೆ ಕತ್ತರಿಸಿ ತರುವವರಿಗೆ ಬಹುಮಾನ ಘೋಷಿಸಿದ್ದಾರೆ. ದಿಲ್ಲಿಯ ಸಂಘಪರಿವಾರದ ಮುಖಂಡನೊಬ್ಬ ಕನ್ಹಯ್ಯಾನನ್ನು ಕೊಂದವರಿಗೆ ಬಹುಮಾನ ಘೋಷಿಸಿದ್ದಾನೆ. ಈ ಇಬ್ಬರ ಮೇಲೂ ತಕ್ಷಣ ಮೊಕದ್ದಮೆ ದಾಖಲಿಸಿ, ಬಂಧಿಸುವುದು ಸರಕಾರದ ಕರ್ತವ್ಯವಾಗಿತ್ತು. ಆದರೆ ಸರಕಾರ ವೌನವಾಗಿ ಅವರ ಕೃತ್ಯಗಳನ್ನು ಬೆಂಬಲಿಸಿದೆ. ಅಂದರೆ ಇವರ ಮೂಲಕ ಪರೋಕ್ಷವಾಗಿ ಸರಕಾರವೇ ವಿದ್ಯಾರ್ಥಿಗಳನ್ನು ಬೆದರಿಸುತ್ತಿದೆ. ಪೊಲೀಸರ ಮೂಲಕ ಬೆದರಿಸಿ ವೌನವಾಗಿಸಲು ವಿಫಲವಾಗಿರುವ ಸರಕಾರ ಇದೀಗ ಅನ್ಯ ದಾರಿ ಹಿಡಿದಿದೆಯೇ ಎಂದು ಪ್ರಶ್ನಿಸುವಂತಾಗಿದೆ.

ಕನ್ಹಯ್ಯಿ ಅವರ ಬಿಡುಗಡೆಯಾಗಿದೆಯಾದರೂ, ಇನ್ನೂ ಕೆಲವು ವಿದ್ಯಾರ್ಥಿಗಳು ಜೈಲಿನೊಳಗಿದ್ದಾರೆ. ಈ ದೇಶದ ಸಂವಿಧಾನದ ವ್ಯಾಪ್ತಿಯಲ್ಲಿ ಸರಕಾರದ ವಿರುದ್ಧ ಧ್ವನಿಯೆತ್ತಿದ ಒಂದೇ ಕಾರಣಕ್ಕಾಗಿ ವಿದ್ಯಾರ್ಥಿಗಳ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ. ಈ ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳನ್ನು ಈ ರೀತಿಯಲ್ಲಿ ಬಗ್ಗು ಬಡಿಯುತ್ತಿರುವುದು ಸರಕಾರ ಯಾವ ದಿಕ್ಕಿನತ್ತ ಹೆಜ್ಜೆಯಿಡುತ್ತಿದೆ ಎನ್ನುವುದರ ಸೂಚನೆಯಾಗಿದೆ. ಈ ನಿಟ್ಟಿನಲ್ಲಿ ದಿಲ್ಲಿಯ ವಿದ್ಯಾರ್ಥಿಗಳ ಜೊತೆಗೆ ಇಡೀ ದೇಶ ಒಂದಾಗಿ ನಿಲ್ಲಬೇಕಾಗಿದೆ. ದಿಲ್ಲಿಯ ವಿದ್ಯಾರ್ಥಿಗಳ ಬಿಡುಗಡೆ ಮಾತ್ರವಲ್ಲ, ಅವರ ಮೇಲಿನ ಮೊಕದ್ದಮೆಗಳನ್ನು ಹಿಂದೆಗೆಯುವುದು ಸರಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಅವರ ಪರವಾಗಿ ಧ್ವನಿಯೆತ್ತುವುದು, ಅವರ ಧ್ವನಿಗೆ ಧ್ವನಿ ಸೇರಿಸುವುದು ಪ್ರಜಾಸತ್ತೆಯ ಭವಿಷ್ಯದ ದೃಷ್ಟಿಯಿಂದ ನಮ್ಮೆಲ್ಲರ ಕರ್ತವ್ಯವಾಗಿದೆ. ಯಾವ ರೀತಿಯಲ್ಲೂ ರೋಹಿತ್ ವೇಮುಲಾಗೆ ಒದಗಿದ ಸ್ಥಿತಿ, ಈ ದೇಶದ ಯಾವ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗೂ ಒದಗಬಾರದು. ಆದುದರಿಂದ, ಬಡತನದಿಂದ ಆಝಾದಿ, ಭ್ರಷ್ಟಾಚಾರದಿಂದ ಆಝಾದಿ, ಮನುವಾದದಿಂದ ಆಝಾದಿ ಕೂಗು ಇಡೀ ದೇಶದ ಜನರ ಕೂಗಾಗಿ ಪರಿವರ್ತನೆಯಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News