ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೋರಿ ಕಾಂಗ್ರೆಸ್‌ನಿಂದ ರಾಷ್ಟ್ರಪತಿ-ಪ್ರಧಾನಿಗೆ ಮನವಿ

Update: 2016-03-06 18:45 GMT

ವಿಶಾಖಪಟ್ಟಣ: ಆಂಧ್ರಪ್ರದೇಶಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡುವಂತೆ ಕೋರಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಒಂದು ಕೋಟಿ ಸಹಿಗಳುಳ್ಳ ಮನವಿಯೊಂದನ್ನು ರಾಜ್ಯದ ಕಾಂಗ್ರೆಸ್ ನಾಯಕರು ಸಲ್ಲಿಸಲಿದ್ದಾರೆಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ರಾಜ್ಯಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡಲು ಬಿಜೆಪಿ ನೇತೃತ್ವದ ಸರಕಾರದ ಮೇಲೆ ಒತ್ತಡ ಹೇರುವ ಸಲುವಾಗಿ, ಸುಮಾರು ಒಂದು ವರ್ಷದ ಹಿಂದೆಯೇ ಕಾಂಗ್ರೆಸ್‌ನ ಆಂಧ್ರಪ್ರದೇಶ ಘಟಕವು ಒಂದು ಕೋಟಿ ಸಹಿ ಸಂಗ್ರಹಿಸುವ ಅಭಿಯಾನವನ್ನು ಆರಂಭಿಸಿತ್ತೆಂದು ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಟಿ.ಸುಬ್ಬರಾಮಿ ರೆಡ್ಡಿ ಹೇಳಿದ್ದಾರೆ.
ಎಪಿ ಕಾಂಗ್ರೆಸ್ ಮಾ.12ರಂದು ‘ಚಲೋ ದಿಲ್ಲಿ’ಯನ್ನು ಸಂಘಟಿಸಲಿದೆ. ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎನ್.ರಘುವೀರ ರೆಡ್ಡಿಯವರಂತಹ ಉನ್ನತ ನಾಯಕರು ಹಾಗೂ ನೂರಾರು ಕಾರ್ಯಕರ್ತರು ದಿಲ್ಲಿಗೆ ತಲುಪಿ, ಮಾ.14ರಂದು ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಮನವಿಯನ್ನು ಸಲ್ಲಿಸಲಿದೆ. ಬಿಜೆಪಿಯು ಆಂಧ್ರಪ್ರದೇಶ ಮರು ಸಂಘಟನೆ ಕಾಯ್ದೆ (ಎಪಿಎಸ್‌ಆರ್)-2014ರನ್ವಯ ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸಲು ವಿಫಲವಾಗಿದೆಯೆಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News