ವಯಸ್ಕರ ಲೈಂಗಿಕ ಸಂಬಂಧ ಅತ್ಯಾಚಾರವಲ್ಲ; ಮುಂಬೈ ಹೈಕೋರ್ಟ್
ಮುಂಬೈ, ಮಾರ್ಚ್.11: ವಯಸ್ಕರಾದ ಇಬ್ಬರು ವ್ಯಕ್ತಿಗಳು ಪರಸ್ಪರ ಸಮ್ಮತದಿಂದ ಲೈಂಗಿಕ ಸಂಬಂಧ ಬೆಳೆಸಿದರೆ ಅದನ್ನು ಅತ್ಯಾಚಾರವೆಂದು ಹೇಳಲಾಗದು. ಹೀಗೆಂದು ಒಂದು ಅತ್ಯಾಚಾರ ಪ್ರಕರಣದ ವಿಚಾರಣೆ ವೇಳೆ ಮುಂಬೈ ಹೈಕೋರ್ಟ್ ಹೇಳಿದೆ.
ಸೋಲಾಪುರ್‌ನ ಯುವಕನಿಗೆ ಜಾಮೀನು ಪರಿಗಣಿಸುವಾಗ ಈ ವಿಷಯವನ್ನು ತಿಳಿಸಿದ ಮುಂಬೈ ಹೈಕೋರ್ಟ್ ಸುಶಿಕ್ಷಿತ ಮಹಿಳೆಗೆ ಸಂಗಾತಿಯೊಂದಿಗೆ ಶಾರೀರಿಕ ಸಂಬಂಧದಿಂದಾಗುವ ಪರಿಣಾಮಗಳ ಬಗ್ಗೆ ಗೊತ್ತಿರುತ್ತದೆ ಎಂದು ಹೈಕೋರ್ಟ್ ತನ್ನ ಭಾವನೆಯನ್ನು ವ್ಯಕ್ತಪಡಿಸಿದೆ.
ಸಂಬಂಧ ಕಡಿದು ಕೊಂಡ ಹಿನ್ನೆಲೆಯಲ್ಲಿ ಮುಂಬೈಯ ಇಪ್ಪತ್ತನಾಲ್ಕು ವಯಸ್ಸಿನ ಯುವತಿ ಇಪ್ಪತ್ತೈದು ವಯಸ್ಸಿನ ಸೋಲಾಪುರದ ಯುವಕನ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಿಸಿದ್ದಳು.
ಮದುವೆಯಾಗುವೆ ಎಂದು ಹೇಳಿ ವಂಚಿಸಿದ್ದಾನೆ ಮತ್ತು ಲೈಂಗಿಕ ಶೋಷಣೆ ನಡೆಸಿದ್ದಾನೆ ಎಂದು ಯುವತಿಯ ಆರೋಪವಾಗಿತ್ತು. ಗರ್ಭಿಣಿಯಾದಾಗ ಗರ್ಭಪಾತಕ್ಕೆ ಒತ್ತಾಯಿಸಿದ್ದಲ್ಲದೆ ಆನಂತರ ತನ್ನಿಂದ ದೂರವಾಗಿದ್ದಾನೆಂದು ಯುವತಿ ದೂರುನೀಡಿದ್ದಳು. ಪ್ರಕರಣದಲ್ಲಿ ಹೈಕೋರ್ಟ್ ಯುವಕನಿಗೆ ಜಾಮೀನು ನೀಡಿದೆ.