ಕಸಾಪ: ನೂತನ ಅಧ್ಯಕ್ಷರು ಹೊಸ ಸವಾಲುಗಳು
ಕಳೆದ ವರ್ಷವಷ್ಟೇ ಶತಮಾನೋತ್ಸವ ಆಚರಿಸಿಕೊಂಡ ಕನ್ನಡ ಸಾಹಿತ್ಯ ಪರಿಷತ್ತು ಈ ವರ್ಷದ ಶುರುವಿಗೆ ಅತ್ಯಧಿಕ ಮತಗಳಿಂದ ಜಯ ಸಾಧಿಸಿರುವ ನೂತನ ಆಧ್ಯಕ್ಷ ಮನು ಬಳಿಗಾರ್ ಅವರನ್ನು ಬರಮಾಡಿಕೊಂಡ ಸಂಭ್ರಮದಲ್ಲಿದೆ. ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಇವತ್ತಿನ ಕನ್ನಡ ನಾಡು, ನೆಲಜಲ, ಭಾಷೆ, ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿ ಹಲವಾರು ಸಂಕಷ್ಟಗಳ ಸುಳಿಯಲ್ಲಿ ಸಿಲುಕಿರುವ ಈ ಸಂದರ್ಭದಲ್ಲಿ ಕಸಾಪ ಅತ್ಯಂತ ಗುರುತರವಾದ ಜವಾಬ್ದಾರಿಯನ್ನು ಹೊಂದಿದೆ. ಹೊಸ ಅಧ್ಯಕ್ಷರು ಈ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬಹುದು?
ಕರ್ನಾಟಕ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವವರ ಪ್ರೋತ್ಸಾಹಕ್ಕಾಗಿ ಸ್ವತಂತ್ರಾಧಿಕಾರವುಳ್ಳ ಪರಿಷತ್ತೊಂದು ಇರಬೇಕು ಎಂದ ಮೈಸೂರು ಎಕನಾಮಿಕ್ಸ್ ಕಾನ್ಫರೆನ್ಸ್‌ನ (1914) ನಿರೂಪದಂತೆ 1915ರ ಮೇ ತಿಂಗಳಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂತು.
ಆ ಕಾಲಕ್ಕೆ ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳನ್ನೂ ಏಕಛತ್ರದಡಿಯಲ್ಲಿ ತರುವುದು ಹಾಗೂ ‘ಕರ್ನಾಟಕ ಭಾಷಾ ಸಂಸ್ಕರಣ’, ಅಂದರೆ, ಭೌಗೋಳಿಕವಾಗಿ, ಬೌದ್ಧಿಕವಾಗಿ ಕನ್ನಡಿಗರನ್ನು ಒಂದುಗೂಡಿಸುವುದೇ ಅದರ ಮುಖ್ಯ ಉದ್ದೇಶವಾಗಿತ್ತು. ಮುಂದೆ, 1938ರ ಸುಮಾರಿನಲ್ಲಿ, ಸಾಹಿತ್ಯ ಪರಿಷತ್ತಿನ ಗುರಿ-ಗಮ್ಯತೆಗಳು ಸ್ಪಷ್ಟವಾಗಿ ಹರಳುಗಟ್ಟಿರುವುದನ್ನು ನಾವು ಕಾಣುತ್ತೇವೆ. ಪರಿಷತ್ತಿನ ಕಟ್ಟಾಳುಗಳಲ್ಲಿ ಅತಿಮುಖ್ಯರಾದ ಕನ್ನಡದ ಕಣ್ವ ಬಿ.ಎಂ.ಶ್ರೀ ಅವರ ಮಾತುಗಳಲ್ಲೇ ಅದು ಹೀಗಿದೆ:
ಪರಿಷತ್ತಿನ ಗುರಿಗಳು:
1.ಕನ್ನಡವನ್ನು ಬೆಳೆಸಿ, ಕನ್ನಡ ನಾಡಿನಲ್ಲೆಲ್ಲ್ಲ ಒಂದು ರೂಪಕ್ಕೆ ತಂದು, ಅದರ ಮೂಲಕ ಕನ್ನಡಿಗರನ್ನೆಲ್ಲ ಒಂದುಗೂಡಿಸುವುದು.
2.ಈ ಹೊಸಕಾಲದಲ್ಲಿ ಕನ್ನಡಿಗರಿಗೆ ಬೇಕಾದ ತಿಳುವಳಿಕೆಯನ್ನೆಲ್ಲಾ ಕನ್ನಡದಲ್ಲಿ ಕೊಟ್ಟು, ಕನ್ನಡ ನಾಡಿನ ಮುನ್ನಡೆಗಾಗಿ ಕೆಲಸ ಮಾಡುವುದು.
3.ಹಳೆಯ ಸಾಹಿತ್ಯದ ಪ್ರಚಾರ, ಹೊಸ ಸಾಹಿತ್ಯದ ಪೋಷಣೆ, ವ್ಯಾಸಂಗ ಗೋಷ್ಠಿ, ಪರೀಕ್ಷೆ, ವಿಮರ್ಶೆ, ಪರಿಶೋಧನೆ.
4.ಸಮ್ಮೇಳನ, ವಸಂತೋತ್ಸವ, ಉಪನ್ಯಾಸ, ನಾಟಕ, ಗಮಕ ಕಲೆ, ಜನಸಂಸ್ಕೃತಿ, ವಿನೋದ, ಸ್ಪರ್ಧೆ, ಮಕ್ಕಳ ನಲಿವು.
5.ಕನ್ನಡ ಸಂಘಗಳ ಒಕ್ಕೂಟ ಮತ್ತು ಕೈವಾಡದಿಂದ ಊರೂರು ಹಳ್ಳಿಹಳ್ಳಿಗಳಲ್ಲಿ ಬೆಳಕು, ಹುರುಪು, ಹೊಸಬಾಳು, ಹಬ್ಬ;
ಒಂದು ಮಾತಿನಲ್ಲಿ ಕನ್ನಡಿಗರ ಪುನುರುಜ್ಜೀವನ.
ಒಟ್ಟಿನಲ್ಲಿ ಪರಿಷತ್ತು ಕನ್ನಡಿಗರ ಸಾರ್ವಜನಿಕ ವಿದ್ಯಾಪೀಠ.
ಬಲು ದೊಡ್ಡ ಆದರ್ಶ. ಈ ನೂರು ವರ್ಷಗಳಲ್ಲಿ ಇದು ಎಷ್ಟರಮಟ್ಟಿಗೆ ಕನ್ನಡಿಗರ ಕೈಗೆಟುಕಿದೆ? ಏನೂ ಇಲ್ಲ ಎಂಬುದು ಸಿನಿಕತನವಾದೀತು. ಸಂಪೂರ್ಣವಾಗಿ ಸಾಧಿಸಲಾಗಿದೆ ಎಂಬುದು ಹುಸಿ ಸಂತೃಪ್ತಿಯಾದೀತು.
ಮೂಲ ಕನ್ನಡಿಗರನ್ನೆಲ್ಲ ಒಂದುಗೂಡಿಸುವುದು ಏಕೀಕರಣದಿಂದ ಬಹುಮಟ್ಟಿಗೆ ಅಗಿದೆ. ಆದರೂ ಕಾಸರಗೋಡು ಮೊದಲಾದ ಪ್ರದೇಶಗಳು ಹೊರಗೇ ಉಳಿದಿದ್ದು ಕೈಯಾರರ ಆತ್ಮಕ್ಕೆ ಶಾಂತಿ ದೊರೆತಿಲ್ಲ. ಕನ್ನಡಿಗರಿಗೆ ಬೇಕಾದ ತಿಳುವಳಿಕೆಯನ್ನೆಲ್ಲ ಕನ್ನಡದಲ್ಲಿ ಕೊಡುವ ಕೆಲಸವಂತೂ ಗಗನ ಕುಸುಮವೇ ಆಗಿದೆ. ವಿಜ್ಞಾನವನ್ನು ಕನ್ನಡಕ್ಕೆ ತರುವ ಕೆಲಸ ಆಮೆ ನಡಿಗೆಯಲ್ಲಿರುವಾಗಲೇ ತಂತ್ರಜ್ಞಾನ ದಾಪುಗಾಲು ಹಾಕಿ ಬಂದು ಕನ್ನಡಿಗರನ್ನು ಕಕ್ಕಾಕಬಿಕ್ಕಿಯಾಗಿಸಿದೆ. ಕನ್ನಡಕ್ಕೆ ಹೊಂದಿಕೊಳ್ಳುವ ತಂತ್ರಾಂಶ, ಡಿಜಿಟಲೀಕರಣಗಳು ಗೊಂದಲದ ಗೂಡುಗಳಾಗಿವೆ. ಈ ಗೊಂದಲಗಳಲ್ಲಿ ಪ್ರಗತಿಕಾರ್ಯ ಸ್ಥಗಿತಗೊಂಡಿದೆ. ಸಾಹಿತ್ಯ ಸಮ್ಮೇಳನ, ಉತ್ಸವ, ಹಬ್ಬಗಳ ಆಚರಣೆಗಳಲ್ಲಿ ಉತ್ಸಾಹವೊಂದೇ ಮೇರೆಮೀರಿ ಹರಿದಿರುವುದು. ಇದು ವಾರ್ಷಿಕ ಆಚರಣೆಗಳಲ್ಲಿ ಸುವ್ಯಕ್ತ. ಇನ್ನು ಕನ್ನಡಿಗರ ಪುನುರುಜ್ಜೀವನ. ಈ ಬಗ್ಗೆ ಮತನಾಡದಿರುವುದೇ ಕ್ಷೇಮ. ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕಗಳವರ ಸಿಟ್ಟು-ಆಕ್ರೋಶಗಳು ಬೇರೆಯಾಗುವ ತುರಿಯಾವಸ್ಥೆಯನ್ನು ಮುಟ್ಟಿವೆ. ಹಳೆ ಮೈಸೂರಿನಲ್ಲೂ ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರಗಳಂತಹ ಕೆಲವು ಜಿಲ್ಲೆಗಳಲ್ಲಿ ಅಭಿವೃದ್ಧಿಯ ಅಸಮತೋಲನದಿಂದಾಗಿ ಪರಿಸ್ಥಿತಿ ಸ್ಫೋಟಕ ಹಂತ ತಲುಪಿದೆ. ಇದು ಆಡಳಿತಾತ್ಮಕ ವಿಷಯ. ಸರಕಾರದ ಭಾಗವಲ್ಲದ ಪರಿಷತ್ತು ಏನುಮಾಡಲು ಸಾಧ್ಯ ಎಂಬ ಪ್ರಶ್ನೆ ಸಹಜ. ಆದರೂ, ಕನ್ನಡಿಗರ ಪುನುರುಜ್ಜೀವನಕ್ಕೆ ಕಂಕಣಬದ್ಧವಾದ ಪರಿಷತ್ತು ತನ್ನ ಕರ್ತವ್ಯವನ್ನು ಮರೆಯುವಂತಿಲ್ಲ. ಸರಕಾರದ ಭಾಗವಲ್ಲವಾದರೂ ನಾಡುನುಡಿ, ನಾಡಿಗರ ಬದುಕಿನ ಪ್ರಶ್ನೆ ಉದ್ಭವಿಸಿದಾಗ ಅದು ಮಾಡಬೇಕಾದ ಕರ್ತವ್ಯವಿದೆ. ಇಂತಹ ಉತ್ಕಟ ಸಂದರ್ಭಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಳುವ ಮಂದಿಗೆ ನರ್ಮ ಸಚಿವನಂತೆ ಬುದ್ಧಿಹೇಳುವ, ಸರಿಯಾದ ಮಾರ್ಗದರ್ಶನ ಮಾಡಿಸುವ ಕೆಲಸ ಮಾಡಬೇಕಿತ್ತು. ಇದರಲ್ಲಿ ಕಸಾಪ ವಿಫಲವಾಗಿದೆ ಎಂದು ಹೇಳದೆ ಅನ್ಯಮಾರ್ಗವಿಲ್ಲ. ಸರಕಾರದ ಮುಂದೆ ಅದು ಧನಸಹಾಯಕ್ಕಾಗಿ ಭಿಕ್ಷಾಪಾತ್ರೆ ಹಿಡಿದು ನಿಂತ ಯಾಚಕನಂತೆ ವರ್ತಿಸಿತೇ ವಿನಾಃ ಕಿವಿಹಿಂಡಿ ಬುದ್ಧಿಹೇಳುವ ನರ್ಮ ಸಚಿವನ ಕರ್ತವ್ಯ ನಿರ್ವಹಿಸಲಿಲ್ಲ.
ನೆಲ-ಜಲ-ಭಾಷೆಗಳಿಗೆ ಸಂಬಂಧಿಸಿದ ತೊಡಕುಗಳ ನಿವಾರಣೆಯಾಗದೆ ಕನ್ನಡಿಗರ ಪುನುರುಜ್ಜೀವನ ಸಾಧ್ಯವಿಲ್ಲ. ಗಡಿ ವಿಷಯದಲ್ಲಿ ಮರಾಠಿಗರ ತಂಟೆ ಇದ್ದೇ ಇದೆ. ಜಲದ ವಿಷಯದಲ್ಲಿ ತಮಿಳುನಾಡು ತೊಡರುಗಾಲು ಹಾಕುತ್ತಲೇ ಇದೆ. ಭಾಷೆಯ ವಿಷಯದಲ್ಲಿ ಒಳಗೂ ಹೊರಗೂ ಕನ್ನಡಕ್ಕೆ ಶತ್ರುಗಳಿದ್ದಾರೆ. ಶಿಕ್ಷಣ ಮಾಧ್ಯಮದ ವಿಷಯದಲ್ಲಿ ಸರ್ವೋಚ್ಚ ನ್ಯಾಯಲಯದ ತೀರ್ಪಿನಿಂದಾಗಿ ನಮ್ಮ ಕೈ-ಬಾಯಿ ಕಟ್ಟಿ ಹೋಗಿದೆ. ಕಲಿಕಾ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೆ ಬಿಡಬೇಕು ಎನ್ನುವ ತೀರ್ಪಿನಿಂದಾಗಿ ಹಣದ ಥೈಲಿಗಳ ಎದುರು ಭಾಷೆ ಮೂಕವಾಗಿದೆ. ಹಿಂದಿ ಎಂದಿಗಿಂತ ಹೆಚ್ಚು ಆಕ್ರಮಣಶೀಲವಾಗಿ ಕನ್ನಡದ ಕ್ಷೇತ್ರಗಳನ್ನು ಹಿಂಬಾಗಿಲಿನಿಂದ ಆಕ್ರಮಿಸುತ್ತಿದೆ. ಮಾಧ್ಯಮಗಳ ಜಾಹೀರಾತುಗಳಲ್ಲಿ, ರಾಜ್ಯಪಾಲರ ಕಚೇರಿಯಲ್ಲಿ ಹಿಂದಿಯದೇ ದರ್ಬಾರು. ಹಿಂದಿನ ಕನ್ನಡೇತರ ರಾಜ್ಯಪಾಲರು, ಸೌಜನ್ಯಕ್ಕಾದರೂ ಒಂದೆರಡು ಕನ್ನಡ ಮಾತುಗಳನ್ನಾಡುತ್ತಿದ್ದರು. ಇಂದು ಅದೂ ಕಾಣಿಸುತ್ತಿಲ್ಲ. ವಿಧಾನ ಮಂಡಲವನ್ನುದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣವನ್ನು ಸದಸ್ಯರಿಗೆ ಹಿಂದಿಯಲ್ಲೇ ಒದಗಿಸಿದ್ದು ನಮ್ಮ ಇಂದಿನ ಸರಕಾರದ ಕನ್ನಡ ಪ್ರೀತಿಯ ಹೆಗ್ಗುರುತು. ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಮೊದಲ ಹಾಗೂ ಕೊನೆಯ ಕನ್ನಡಿಗ ಎಂಬ ಕೀರ್ತಿಗೆ ಜೆ.ಎಚ್. ಪಾಟೀಲರೊಬ್ಬರೇ ಭಾಜನರು.ಕನ್ನಡದಿಂದ ಹಿಂದಿಗೆ, ಇಂಗ್ಲಿಷಿಗೆ ಭಾಷಾಂತರ ಮಾಡುವ ಪ್ರತಿಭೆಯ ಕೊರತೆ ನಮ್ಮಲ್ಲಿ ಇಲ್ಲ. ಆದರೆ ಅದಕ್ಕಾಗಿ ಒತ್ತಾಯಿಸುವವರು ಯಾರೂ ಇಲ್ಲ. ಕನ್ನಡಪರ ಕೆಲಸಮಾಡುವ ಸಂಕಲ್ಪಶಕ್ತಿಯ ಕೊರತೆ. ಇವೆಲ್ಲ ಕನ್ನಡದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಲೇ ಇವೆ. ಇನ್ನು ಕನ್ನಡದ ಅಭಿವೃದ್ಧಿ. ನಿಘಂಟುಗಳ ಪರಿಷ್ಕರಣ, ಪಾರಿಭಾಷಿಕ ಕೋಶಗಳ ಪ್ರಕಟನೆೆ, ಸಂಶೋಧನೆ ಇತ್ಯಾದಿಗಳ ಬಗ್ಗೆ ಬಾಯಿಬಿಟ್ಟರೆ ಬಣ್ಣಗೇಡು ಎಂಬಂಥ ಸ್ಥಿತಿ. ಈಗಿನ ನಿಘಂಟು ಜಾನಪದ ಕ್ಷೇತ್ರವನ್ನು ಅಲಕ್ಷಿಸಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡ ನಿಘಂಟನ್ನು ಆಮೂಲಾಗ್ರವಾಗಿ ಪರಿಷ್ಕರಿಸಿ ಪುನರ್ ಮುದ್ರಿಸಬೇಕಾಗಿದೆ. ವಿಜ್ಞಾನ-ತಂತ್ರಜ್ಞಾನ ಪಾರಿಭಾಷಿಕ ಕೋಶಗಳ ಪ್ರಕಟನೆ ಇಂದು ಎಂದಿಗಿಂತ ಹೆಚ್ಚಾಗಿದೆ.
ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿ ನಾಲ್ಕೈದು ವರ್ಷಗಳೇ ಸಂದಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದಿಂದ ಮೈಸೂರಿನ ಭಾಷಾ ಸಂಸ್ಥೆಗೆ ಸಂದಾಯವಾದ ಧನ ಸಹಾಯವನ್ನು ಕನ್ನಡದ ಅಭಿವೃದ್ಧಿಗಾಗಿ ಬಳಸದೇ ಹಿಂದಿರುಗಿಸುವಂತಹ ಪರಿಸ್ಥಿತಿ ಉದ್ಭವಿಸಿದೆ. ಈ ಸಂಬಂಧ ಬೆಂಗಳೂರಿನಲ್ಲೇ ಸಂಶೋಧನೆ, ಪ್ರಕಟನೆ ಇತ್ಯಾದಿ ಕನ್ನಡ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಇನ್ನೂ ತೀರ್ಮಾನವಾದಂತಿಲ್ಲ. ಶಾಸ್ತ್ರೀಯ ಭಾಷೆಗಾಗಿ ಕೇಂದ್ರ ಸರಕಾರ ಕೊಡುವ ವಾರ್ಷಿಕ ಹಣದಲ್ಲಿ ಒಂದು ಪಾಲು ಪಡೆದಾದರೂ ಕಸಾಪ ನಿಘಂಟು ಪರಿಷ್ಕರಣೆ, ಪಾರಿಭಾಷಿಕ ಕೋಶಗಳ ಪ್ರಕಟನೆೆ, ಸಂಶೋಧನೆ ಇತ್ಯಾದಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ಇಪ್ಪತ್ತೊಂದನೆಯ ಶತಮಾನದ ಅಗತ್ಯ ಮತ್ತು ಬೇಡಿಕೆಗಳಿಗೆ ಅನುಗುಣವಾಗಿ ಕನ್ನಡವನ್ನು ಶೈಕ್ಷಣಿಕವಾಗಿ, ಬವದ್ಧಿಕವಾಗಿ ಅಭಿವೃದ್ಧಿ ಪಡಿಸುವ ಈ ಕಾರ್ಯ ಕಸಾಪದ ಆದ್ಯತೆಯಾಗಬೇಕು.
ಅಸಹಿಷ್ಣುತೆ ಹೆಚ್ಚುತ್ತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿರುವ ಇತ್ತೀಚಿನ ದಿನಗಳಲ್ಲಿ, ಸೃಜನಶೀಲ ಲೇಖಕರು, ಕಲಾವಿದರುಗಳು ಬಹಿಷ್ಕಾರ, ಕೃತಿಗಳ ನಿಷೇಧ, ಮುಟ್ಟುಗೋಲು ಇತ್ಯಾದಿ ಬೆದರಿಕೆಗಳ ನೆರಳಿನಲ್ಲೇ ಬದುಕುವಂತಾಗಿದೆ. ಇಂತಹ ಸಂದರ್ಭಗಳಲ್ಲಿ ಲೇಖಕರು ತಮ್ಮ ಪ್ರಾತಿನಿಧಿಕ ಸಂಸ್ಥೆಯಾದ ಕನ್ನದ ಸಾಹಿತ್ಯ ಪರಿಷತ್ತಿನಿಂದ ಬೆಂಬಲ ನಿರೀಕ್ಷಿಸುವುದು ತಪ್ಪಲ್ಲ. ಶತಮಾನೋತ್ಸವ ವರ್ಷದಲ್ಲಿ ಹಾಗೂ ಅದಕ್ಕೂ ಮೊದಲು ಕನ್ನಡ ಲೇಖಕರು ಇಂತಹ ಬೆದರಿಕೆಗಳನ್ನು ಎದುರಿಸಿದಾಗ, ಕನ್ನಡ ಕೃತಿಗಳನ್ನು ಸರಕಾರ ನಿಷೇಧಿಸಿದಾಗ ಸಾಹಿತ್ಯ ಪರಿಷತ್ತು ಈ ಲೇಖಕರಿಗೆ ಕನಿಷ್ಠ ನೈತಿಕ ಬೆಂಬಲವನ್ನೂ ವ್ಯಕ್ತಪಡಿಸಲಿಲ್ಲ. ಇಂತಹ ಧೋರಣೆಗಳ ವಿರುದ್ಧ ಸಭೆ ನಡೆಸುವುದು, ಠರಾವು ಮಾಡುವ ಮಾತಂತೂ ದೂರವೇ ಉಳಿಯಿತು. ಈ ವಿಷಯದಲ್ಲಿ ಕಸಾಪ ತನ್ನ ನಿಲುವು ಏನು ಎಂಬುದನ್ನಾದರೂ ಪ್ರಕಟಿಸಬೇಕು. ಸರಕಾರದ ಕೃಪಾಕಟಾಕ್ಷದಲ್ಲಿರುವ ಕಸಾಪ ಲೇಖಕರ ಬೆಂಬಲಕ್ಕೆ ನಿಲ್ಲಲಾಗದು ಎನ್ನವುದಾದಲ್ಲಿ ಅದು ಕನ್ನಡ ಸಾಹಿತಿಗಳ ಪ್ರಾತಿನಿಧಿಕ ಸಂಸ್ಥೆ ಹೇಗಾದೀತು?
ಇದಾವುದೂ ನಡೆಯದೆ, ಕೇವಲ ಸಮ್ಮೇಳನಗಳನ್ನು ನಡೆಸುವಷ್ಟರಿಂದಲೇ ಕಸಾಪ ಕನ್ನಡಿಗರ ವಿದ್ಯಾಪೀಠ ಆಗಲೆಂತು ಸಾಧ್ಯ? ಕನ್ನಡಿಗರ ಪುನುರುಜ್ಜೀವನ ಹೇಗೆ ಸಾಧ್ಯ?
ಹೊಸ ಅಧ್ಯಕ್ಷರಾದ ಮನು ಬಳಿಗಾರರು ಸೃಜನಶೀಲ ಲೇಖಕರು. ನುರಿತವರು. ಆಡಳಿತಾನುಭವ ಉಳ್ಳ ನಿವೃತ್ತ ಅಧಿಕಾರಿಗಳು. ಸರಕಾರದಲ್ಲಿದ್ದಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಹಲವು ವರ್ಷಗಳ ಕಾಲ ನಿಭಾಯಿಸಿದವರು. ಇದರಿಂದಾಗಿ ಕನ್ನಡದ ಸಮಸ್ಯೆಗಳ ನಿಕಟ ಪರಿಚಯ ಅವರಿಗಿರಲೇಬೇಕು. ಸಾಮಾಜಿಕ ನ್ಯಾಯ ಒದಗಿಸುವ, ಪರಿಷತ್ತನ್ನು ಎಲ್ಲರ ಸಂಸ್ಥೆಯಾಗಿಸುವ ಉತ್ಸಾಹದ ಮಾತುಗಳನ್ನು ಬಳಿಗಾರರು ಆಡಿದ್ದಾರೆ. ವಿಶ್ವ ಕನ್ನಡ ಸಮ್ಮೇಳನ ನಡೆಸುವ, ಶತಮಾನೋತ್ಸವ ಭವನ ನಿರ್ಮಾಣ ಮುಗಿಸುವ ಮಾತುಗಳನ್ನೂ ಆಡಿದ್ದಾರೆ. ಇವೆಲ್ಲ ಸರಿಯೇ. ಆದರೆ ಮುಖ್ಯವಾಗಿ ಪರಿಷತ್ತು ಇವತ್ತಿನ ಸಂದರ್ಭದಲ್ಲಿ ಕನ್ನಡಿಗರ ವಿದ್ಯಾಪೀಠವಾಗಬೇಕಾದರೆ, ಅದಕ್ಕೆ ಹೊಸ ರಕ್ತದ ಪೂರಣವಾಗಬೇಕು. ಇದು ಅತ್ಯಗತ್ಯವಾದದ್ದು, ಅದರ ಗೊತ್ತು-ಗುರಿ, ಧ್ಯೇಯಗಳ ಪುನರ್‌ನಿಷ್ಕರ್ಷೆ, ಇದು ಆದ್ಯತೆಯ ಮೇಲೆ ಆಗಬೇಕಾದ ಕೆಲಸ. ಬಿಎಂಶ್ರೀ ಗೊತ್ತುಪಡಿಸಿರುವ ಗುರಿಗಳು ಇಂದೂ ಅಪೇಕ್ಷಣೀಯವೇ. ಆದರೆ ಇಂದಿನ ಕಾಲಮಾನದ ಅಗತ್ಯಗಳು, ಬೇಡಿಕೆಗಳು, ಜ್ಞಾನದಾಹಗಳು, ಸಂವೇದನೆಗಳು ಇವುಗಳ ಹಿನ್ನೆಲೆಯಲ್ಲಿ ಪರ್ಯಾಲೋಚಿಸಿ ಕಸಾಪ ತನ್ನ ಇಪ್ಪತ್ತೊಂದನೆ ಶತಮಾನದ ಗೊತ್ತು-ಗುರಿಗಳನ್ನು, ಕನಸುಗಳನ್ನು ರೂಪಿಸಿಕೊಳ್ಳಬೇಕಾಗಿದೆ. ಕಸಾಪ ನಿಜವಾದ ಅರ್ಥದಲ್ಲಿ ಕನ್ನಡಿಗರ ಹಾಗೂ ಕನ್ನಡ ಸಾಹಿತಿಗಳ ಪ್ರಾತಿನಿಧಿಕ ಸಂಸ್ಥೆಯಾಗಬೇಕಾದಲ್ಲಿ ಇಂತಹ ಒಂದು ಪುನರ್ನವ ಅತ್ಯಗತ್ಯ. ಮನು ಬಳಿಗಾರ್ ಮತ್ತು ಅವರ ನೂತನ ಕಾರ್ಯಪಡೆ ಈ ನಿಟ್ಟಿನಲ್ಲಿ ಕಾಯೋನ್ಮುಖವಾದರೆ ಅದರಿಂದ ಕನ್ನಡಕ್ಕೆ ಮತ್ತೊಂದು ನವೋದಯವಾದೀತು.
ಭರತ ವಾಕ್ಯ:
ಇದು ಹೊಸ ಕನಸುಗಳ ಕಾಣುವ ಕಾಲ
ಹೊಸ ಜ್ಞಾನ ದಿಗಂತಗಳಿಗೆ ಕೈಚಾಚುವ ಕಾಲ
ಹೊಸ ಸಾಮರಸ್ಯಗಳ ಬೆಸೆವ ಕಾಲ.