ಪದಕ, ಟ್ರೋಫಿ ಹರಾಜಿಗೆ ಪೀಲೆ ನಿರ್ಧಾರ

Update: 2016-03-12 18:37 GMT

ರಿಯೊ ಡಿ ಜನೈರೊ, ಮಾ.12: ‘ಫುಟ್ಬಾಲ್ ಕಿಂಗ್’ ಖ್ಯಾತಿಯ ಪೀಲೆ ವೃತ್ತಿಜೀವನದಲ್ಲಿ ತಾನು ಜಯಿಸಿರುವ ಎಲ್ಲ ಪದಕಗಳು, ಟ್ರೋಫಿಗಳು ಹಾಗೂ 1000ನೆ ಗೋಲು ಬಾರಿಸಿದಾಗ ಸ್ವೀಕರಿಸಿದ ಕಿರೀಟವನ್ನೂ ಹರಾಜು ಮಾಡುತ್ತೇನೆ ಎಂದು ಗುರುವಾರ ಘೋಷಿಸಿದ್ದಾರೆ.

 1958, 1962 ಹಾಗೂ 1970ರಲ್ಲಿ ಬ್ರೆಝಿಲ್ ತಂಡ ವಿಶ್ವಕಪ್ ಜಯಿಸಿದಾಗ ತನಗೆ ಲಭಿಸಿರುವ ಚಿನ್ನದ ಪದಕ ಸೇರಿದಂತೆ ಸುಮಾರು 2000 ವಸ್ತುಗಳನ್ನು ಹರಾಜಿಗಿಡಲು ಫುಟ್ಬಾಲ್ ದಂತಕತೆ ನಿರ್ಧರಿಸಿದ್ದಾರೆ.

ಜೂ.7 ರಿಂದ 9ರ ತನಕ ಲಂಡನ್‌ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜಿನ ಮೂಲಕ ಸಂಗ್ರಹವಾಗುವ ಹಣವನ್ನು 75ರ ಹರೆಯದ ಪೀಲೆ ಅವರ ಸಂಬಂಧಿಕರಿಗೆ ನೀಡಲಾಗುತ್ತದೆ. ಹರಾಜಿನಿಂದ ಬರುವ ಸ್ವಲ್ಪ ಹಣವನ್ನು ಬ್ರೆಝಿಲ್‌ನ ಮಕ್ಕಳ ಆಸ್ಪತ್ರೆಗೆ ದಾನವಾಗಿ ನೀಡಲಾಗುತ್ತದೆ ಎಂದು ಪೀಲೆ ಸಲಹೆಗಾರ ಜೋಸ್ ರೊಡ್ರಿಗಸ್ ತಿಳಿಸಿದ್ದಾರೆ.

ಪೀಲೆ 1000ನೆ ಗೋಲು ಬಾರಿಸಿದಾಗ ಬಳಸಿದ ಚೆಂಡು 40,000 ದಿಂದ 60,000 ಯುಎಸ್ ಡಾಲರ್‌ಗೆ ಮಾರಾಟವಾಗುವ ಸಾಧ್ಯತೆಯಿದೆ. ವಿಶ್ವಕಪ್‌ನಲ್ಲಿ ಜಯಿಸಿದ್ದ ಪದಕಗಳು 100,000 ಯುಎಸ್ ಡಾಲರ್ ಹಾಗೂ 200,000 ಡಾಲರ್‌ಗೆ ಮಾರಾಟವಾಗುವ ನಿರೀಕ್ಷೆಯಿದೆ ಎಂದು ಹರಾಜು ಪ್ರಕ್ರಿಯೆ ಉಸ್ತುವಾರಿ ವಹಿಸಿರುವ ಲಾಸ್ ಏಂಜಲಿಸ್ ಮೂಲದ ಜುಲಿಯೆನ್ಸ್ ಸಂಸ್ಥೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News