4ನೇ ಟಿ20ಯಲ್ಲಿ ಪಾಕಿಸ್ತಾನಕ್ಕೆ 4 ರನ್ ಸೋಲು | ನ್ಯೂಝಿಲ್ಯಾಂಡ್ 2-1ರಿಂದ ಮುನ್ನಡೆ

Update: 2024-04-26 17:34 GMT

PC :@ICC 

ಲಾಹೋರ್: ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಗುರುವಾರ ಆತಿಥೇಯ ಪಾಕಿಸ್ತಾನವನ್ನು ಅಪೂರ್ಣ ಸಾಮರ್ಥ್ಯದ ನ್ಯೂಝಿಲ್ಯಾಂಡ್ ತಂಡವು ನಾಲ್ಕು ರನ್‍ಗಳಿಂದ ಸೋಲಿಸಿದೆ.

ಲಾಹೋರ್ ನ ಗದ್ದಾಫಿ ಸ್ಟೇಡಿಯಮ್‍ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಅನುಭವಿಸಿದ ಸೋಲು ಅದರ ಸತತ ಎರಡನೇ ಸೋಲಾಗಿದೆ. ಎರಡನೇ ಪಂದ್ಯವನ್ನು ಪಾಕಿಸ್ತಾನ ಗೆದ್ದಿತ್ತು. ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಕೊನೆಯ ಪಂದ್ಯವೂ ಲಾಹೋರ್ ನಲ್ಲಿ ಶನಿವಾರ ನಡೆಯಲಿದೆ.

ಪ್ರವಾಸಿ ನ್ಯೂಝಿಲ್ಯಾಂಡ್ ಈಗ ಸರಣಿಯಲ್ಲಿ 2-1ರಿಂದ ಮುಂದಿದೆ.

ಗೆಲುವಿಗೆ 179 ರನ್‍ಗಳ ಗುರಿಯನ್ನು ಬೆಂಬತ್ತಿದ ಪಾಕಿಸ್ತಾನಕ್ಕೆ ಕೊನೆಯ ಓವರ್ ನಲ್ಲಿ 18 ರನ್‍ಗಳನ್ನು ಮಾಡಬೇಕಾದ ಅನಿವಾರ್ಯತೆ ಉಂಟಾಯಿತು. ಕೊನೆಯ ಓವರ್ ಎಸೆದ ನ್ಯೂಝಿಲ್ಯಾಂಡ್ ಆಲ್‍ರೌಂಡರ್ ಜೇಮ್ಸ್ ನೀಶಮ್ ಮೊದಲ ಎಸೆತದಲ್ಲಿ ಬೌಂಡರಿ ಬಿಟ್ಟುಕೊಟ್ಟರೂ, ನಂತರದ ಎಸೆತಗಳಲ್ಲಿ ನಿಯಂತ್ರಣ ಸಾಧಿಸಿದರು.

ಪಾಕಿಸ್ತಾನವು ಕೊನೆಯ ಎಸೆತದಲ್ಲಿ ಆರು ರನ್‍ಗಳನ್ನು ಮಾಡಬೇಕಾಗಿತ್ತು. ಆದರೆ, ಚಾಣಾಕ್ಷತನದ ಬೌಲಿಂಗ್ ನಡೆಸಿದ ಅವರು ರನ್‍ಗಳನ್ನು ನಿರಾಕರಿಸಿದರು. ಪಾಕಿಸ್ತಾನಕ್ಕೆ 8 ವಿಕೆಟ್‍ಗಳ ನಷ್ಟಕ್ಕೆ 174 ರನ್ ಗಳನ್ನಷ್ಟೇ ಮಾಡಲು ಸಾಧ್ಯವಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಝಿಲ್ಯಾಂಡ್ ಪರವಾಗಿ ಆರಂಭಿಕ ಟಿಮ್ ರಾಬಿನ್ಸನ್ ಚೊಚ್ಚಲ ಅರ್ಧ ಶತಕವನ್ನು ಸಿಡಿಸಿದರು. ನ್ಯೂಝಿಲ್ಯಾಂಡ್ 20 ಓವರ್‌ ಗಳಲ್ಲಿ 7 ವಿಕೆಟ್‍ಗಳ ನಷ್ಟಕ್ಕೆ 178 ರನ್‍ಗಳನ್ನು ಗಳಿಸಿತು.

ಬಳಿಕ, ನ್ಯೂಝಿಲ್ಯಾಂಡ್ ಪರವಾಗಿ ವೇಗಿ ವಿಲಿಯಮ್ ಓ’ರೂರ್ಕ್ 27 ರನ್‍ಗಳನ್ನು ನೀಡಿ 3 ವಿಕೆಟ್‍ಗಳನ್ನು ಗಳಿಸಿದರು.

ಒಂದು ಹಂತದಲ್ಲಿ, 79 ರನ್‍ಗಳನ್ನು ಗಳಿಸುವಷ್ಟರಲ್ಲಿ 4 ವಿಕೆಟ್‍ಗಳನ್ನು ಕಳೆದುಕೊಂಡಿದ್ದ ಪಾಕಿಸ್ತಾನಕ್ಕೆ ಫಖರ್ ಝಮನ್ (61) ಆಸರೆಯೊದಗಿಸಿದರು. ಅವರು ಇಫ್ತಿಖಾರ್ ಅಹ್ಮದ್ (23) ಜೊತೆಗೆ ಐದನೇ ವಿಕೆಟ್‍ಗೆ 59 ರನ್‍ಗಳನ್ನು ಸೇರಿಸಿದರು.

ಆದರೆ, ಓ’ರೂರ್ಕ್ ಮತ್ತು ಬೆನ್ ಸಿಯರ್ಸ್ ತಮ್ಮ ನಡುವೆ ಐದು ವಿಕೆಟ್‍ಗಳನ್ನು ಹಂಚಿಕೊಂಡರು.

ನ್ಯೂಝಿಲ್ಯಾಂಡ್ ತಂಡದ ಹಲವು ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಆಡುತ್ತಿದ್ದಾರೆ. ಹಾಗಾಗಿ, ಅಪೂರ್ಣ ಸಾಮರ್ಥ್ಯದ ನ್ಯೂಝಿಲ್ಯಾಂಡ್ ತಂಡವು ಈ ತಿಂಗಳ ಆದಿ ಭಾಗದಲ್ಲಿ ಪಾಕಿಸ್ತಾನಕ್ಕೆ ಬಂದಿದೆ.

ಬಿಕ್ಕಿ ಬಿಕ್ಕಿ ಅತ್ತ ಎಳೆಯ ಪಾಕ್ ಅಭಿಮಾನಿಗಳು!

ನಾಲ್ಕು ರನ್‍ಗಳಿಂದ ಪಾಕಿಸ್ತಾನ ಸೋತಿರುವುದನ್ನು ಅರಗಿಸಿಕೊಳ್ಳಲಾಗದೆ ಆ ತಂಡದ ಎಳೆಯ ಅಭಿಮಾನಿಗಳು ಸ್ಟೇಡಿಯಮ್‍ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ವೀಡಿಯೊ ವೈರಲ್ ಆಗಿದೆ.

ಕೊನೆಯ ಎಸೆತದಲ್ಲಿ ಆರು ರನ್ ಗಳಿಸಲು ಪಾಕಿಸ್ತಾನ ವಿಫಲವಾದ ಬಳಿಕ, ಬಾಲಕನೋರ್ವ ಕಣ್ಣೀರು ಸುರಿಸುತ್ತಿರುವುದನ್ನು ಟಿವಿ ಕ್ಯಾಮರಗಳು ಸೆರೆಹಿಡಿದಿವೆ.

ಸೋಲಿನ ಬಳಿಕ ಓರ್ವ ಬಾಲಕಿಯು ಬಿಕ್ಕಿ ಬಿಕ್ಕಿ ಅಳುತ್ತಿರುವ ಇನ್ನೊಂದು ವೀಡಿಯೊ ಕೂಡ ವೈರಲ್ ಆಗಿದೆ.

ಪೂರ್ಣ ಸಾಮರ್ಥ್ಯ ಹೊಂದಿರದ ನ್ಯೂಝಿಲ್ಯಾಂಡ್ ವಿರುದ್ಧ ತಮ್ಮ ಆಟಗಾರರು ಪರದಾಡುತ್ತಿರುವುದನ್ನು ನೋಡಿ ಪಾಕಿಸ್ತಾನದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News