ಪಿಎಚ್‌ಡಿ ಥೀಸಿಸ್ ಅಪಹರಿಸಿ ಬಿಡುಗಡೆಗೆ ಬೇಡಿಕೆ ಇಟ್ಟ ಹ್ಯಾಕರ್!

Update: 2016-03-13 04:11 GMT

ಭೋಪಾಲ್: ಇಲ್ಲಿನ ಮೌಲಾನಾ ಆಜಾದ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರೊಬ್ಬರು ಸಂಶೋಧನಾ ಪ್ರಬಂಧಕ್ಕಾಗಿ ಹಲವು ವರ್ಷಗಳ ಶ್ರಮ ವಹಿಸಿ ಸಂಗ್ರಹಿಸಿದ ಮಾಹಿತಿಗಳೆಲ್ಲ ನೋಡನೋಡುತ್ತಿದ್ದಂತೆಯೇ ಮಾಯವಾಗಿದ್ದರಿಂದ ಸಂಶೋಧಕರು ಕಂಗಾಲಾಗಬೇಕಾಯಿತು. ಅವರ ಕಂಪ್ಯೂಟರ್‌ನ ಎಲ್ಲ ಮಾಹಿತಿಗಳನ್ನು ಹ್ಯಾಕ್ ಮಾಡಿದ ಹ್ಯಾಕರ್ ಒಬ್ಬ ಅದನ್ನು ವಾಪಾಸು ನೀಡಬೇಕಾದರೆ, ದೊಡ್ಡ ಮೊತ್ತದ ಹಣ ನೀಡುವಂತೆ ಬೇಡಿಕೆ ಇಟ್ಟ ವಿಲಕ್ಷಣ ಪ್ರಸಂಗ ಇದು.
ಸಂಶೋಧಕ ಚಂದ್ರಭೂಷಣ್ ತ್ರಿಪಾಠಿ ಫೆಬ್ರವರಿ 3ರಂದು ಇಂಟರ್‌ನೆಟ್‌ನಲ್ಲಿ ಮಾಹಿತಿಗಾಗಿ ಹುಡುಕಾಡುತ್ತಿದ್ದರು. ಎಲ್ಲ ಮಾಹಿತಿಗಳನ್ನು ಪಡೆಯುವುದು ಸಾಧ್ಯವಾಗದಿದ್ದಾಗ, ಎಲ್ಲ ಮಾಹಿತಿಯನ್ನು ಲ್ಯಾಪ್‌ಟಾಪ್‌ನಲ್ಲಿ ಸಂಗ್ರಹಿಸಿ ಇಟ್ಟುಕೊಂಡರು. ಆದರೆ ಬಳಿಕ ಅದನ್ನು ಹ್ಯಾಕರ್‌ಗಳು ಪ್ರಭಾವಿ ರ್ಯಾನ್ಸಮ್‌ವೇರ್ ಎಂಬ ಸಾಫ್ಟ್‌ವೇರ್ ಬಳಸಿ ಅಪಹರಿಸಿರುವುದು ಗೊತ್ತಾಯಿತು. ಇಂಥ ಘಟನೆ ರಾಜ್ಯದಲ್ಲಿ ವರದಿಯಾಗಿರುವುದು ಇದೇ ಮೊದಲು.
"ನನ್ನ ಲ್ಯಾಪ್‌ಟಾಪ್‌ನಲ್ಲಿ ಒಂದು ಲಿಂಗ್ ಫ್ಲ್ಯಾಶ್ ಆಯಿತು. ನಾನು ತಪ್ಪಿ ಅದನ್ನು ಕ್ಲಿಕ್ ಮಾಡಿದೆ. ಅದಾದ ಸ್ವಲ್ಪಹೊತ್ತಲ್ಲೇ ನನ್ನ ಲ್ಯಾಪ್‌ಟಾಪ್‌ನಲ್ಲಿದ್ದ ಎಲ್ಲ ಮಾಹಿತಿ ಮಾಯವಾಯಿತು. ಬದಲಾಗಿ ನಿಮ್ಮ ಮಾಹಿತಿ ವಾಪಾಸು ಬೇಕಿದ್ದರೆ, ನಿರ್ದಿಷ್ಟ ಮೊತ್ತವನ್ನು ನೀಡಬೇಕು ಎಂಬ ಮಾಹಿತಿ ಬಂತು. ನಾನು ವಿಳಂಬ ಮಾಡಿದಷ್ಟೂ ಬೇಡಿಕೆ ಹೆಚ್ಚುತ್ತದೆ ಎಂಬ ಮಾಹಿತಿ ಬಂತು, ಮತ್ತೆ ಯಾವ ಲಿಂಕ್ ಕ್ಲಿಕ್ ಮಾಡಲೂ ಹೋಗದೇ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾಗಿ ಎಂದು ತ್ರಿಪಾಠಿ ವಿವರಿಸಿದರು.
ಸುಮಾರು 50 ಗಿಗಾವ್ಯಾಟ್‌ನಷ್ಟು ಮಾಹಿತಿ ಇತ್ತು ಎಂದು ತ್ರಿಪಾಠಿ ಹೇಳಿದ್ದಾರೆ. ಮಧ್ಯಪ್ರದೇಶ ಸೈಬರ್ ಪೊಲೀಸರು ಫೆಬ್ರವರಿ 27ರಂದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂಥ ಅಪಾಯದಿಂದ ಪಾರಾಗಲು ಇರುವ ಏಕೈಕ ಉಪಾಯವೆಂದರೆ, ಇಂಟರ್‌ನೆಟ್ ಜಾಲದ ಬಳಕೆಯಲ್ಲಿ ಎಚ್ಚರಿಕೆ ವಹಿಸುವುದು ಎಂದು ಮಾಹಿತಿ ತಂತ್ರಜ್ಞಾನ ತಜ್ಞರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News