ಆರ್ ಟಿ ಐ ಮೂಲಕ ಪ್ರತಿಯೊಬ್ಬರೂ ಲೋಕಪಾಲ್ ಆಗಿ : ಮಂಗಳೂರಿನಲ್ಲಿ ಗೋಪಾಲಕೃಷ್ಣ ಗಾಂಧಿ

Update: 2016-03-17 15:51 GMT

ಮಂಗಳೂರು , ಮಾ. 17 : ಈಗ ಎಲ್ಲರೂ ಲೋಕಪಾಲ್ ಅನ್ನು ಮರೆತುಬಿಟ್ಟಿದ್ದಾರೆ. ಆರ್ ಟಿ ಐ ಕಾಯ್ದೆ ಯು ಪಿ ಎ ಸರಕಾರದ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಸ್ವಾತಂತ್ರ್ಯಾ ನಂತರದ ಅತ್ಯುತ್ತಮ ಕೊಡುಗೆ ಇದಾಗಿದೆ. ಇದನ್ನು ಬಳಸಿ ಸರಕಾರದ ಖರ್ಚನ್ನು , ಲೆಕ್ಕವನ್ನು ಕೇಳಬೇಕು. ಆ ಮೂಲಕ ನಾವು ಪ್ರತಿಯೊಬ್ಬರೂ ಲೋಕಪಾಲ್ ಆಗಬೇಕು ಎಂದು ಗಾಂಧೀಜಿಯ ಮೊಮ್ಮಗ, ಲೇಖಕ, ಚಿಂತಕ ಹಾಗು ಮಾಜಿ ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿ ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುವಾರ ಹೇಳಿದ್ದಾರೆ.

ಇಂದಿನ ಸ್ವಚ್ಛ ಭಾರತ ಅಭಿಯಾನದ ಪೋಸ್ಟರ್ ಗಳಲ್ಲಿ ಗಾಂಧೀಜಿ ಕನ್ನಡಕವಿದೆ. ಆದರೆ ಆ ಕನ್ನಡಕದ ಹಿಂದಿದ್ದ ಗಾಂಧೀಜಿ ಈ ದೇಶವನ್ನು, ಇದರ ಜನರನ್ನು ಹಾಗು ಅವರ ಸಮಸ್ಯೆಗಳನ್ನು ನೋಡುವ ಕಣ್ಣು ಹೊಂದಿದ್ದರು. ಅವರು ಜೀವನದಲ್ಲಿ , ರಾಜಕೀಯದಲ್ಲಿ, ನೈತಿಕತೆಯಲ್ಲಿ , ಧರ್ಮದಲ್ಲಿ ಹಾಗು ಎಲ್ಲ ರಂಗಗಳಲ್ಲಿ ಸ್ವಚ್ಚತೆ ಬಯಸಿದ್ದರು. ನಮಗೆ ಮಹಾತ್ಮರ ಆ ಕಣ್ಣುಗಳು ಈಗ ಬೇಕಾಗಿವೆ ಎಂದು ಎಂದು ಅವರು ಹೇಳಿದರು.

ಗಾಂಧೀಜಿ ಭಿನ್ನಮತೀಯರಾಗಿದ್ದರು. ಅವರು ಸದಾ ಸತ್ಯದ ಪರ ನಿಂತು ಅಧ್ಕಿಕಾರದಲ್ಲಿರುವವರಿಗೂ, ಸಾಮಾನ್ಯ ಜನರಿಗೂ ಸತ್ಯವನ್ನೇ ಹೇಳಿದರು. ಹಾಗೆ ನಾವು ಕೂಡ ಜವಾಬ್ದಾರಿಯುತ ಭಿನ್ನಮತ  ವ್ಯಕ್ತಪಡಿಸುವವರಾಗಬೇಕು ಎಂದು ಅವರು ಹೇಳಿದರು . 

ಸ್ವಚ್ಛ ಭಾರತ್ ಶ್ರೇಷ್ಠ ಐಡಿಯಾ. ಆದರೆ ನಾವು ಇನ್ನೂ ಅದರ ನರ್ಸರಿಯಲ್ಲಿದ್ದೇವೆ. ನಾವು ಸ್ನಾತಕೋತ್ತರ ಹಂತಕ್ಕೆ ತಲುಪಬೇಕಿದೆ. ನಗರಗಳ ತ್ಯಾಜ್ಯವನ್ನು ಗ್ರಾಮೀಣ ಪ್ರದೇಶಕ್ಕೆ ಹಾಕುವುದು ಸರಿಯಲ್ಲ. ಹಾಗೆಯೇ ಅಣು ತ್ಯಾಜ್ಯದ ಬಗ್ಗೆ ನಾವು ಜಾಗೃತರಾಗಬೇಕಿದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತಿಲ್ಲ. ಇತ್ತೀಚಿಗೆ ಗುಜರಾತ್ ನ ಅಣು ಸ್ಥಾವರದಲ್ಲಿ ಆದ ಸೋರಿಕೆ ಹಿನ್ನೆಲೆಯಲ್ಲಿ ದೇಶ ಹಾಗು ಜನರ ಹಿತದೃಷ್ಟಿಯಿಂದ ನಾವು ಈ ಕುರಿತ ವಾಸ್ತವಗಳನ್ನು ತಿಳಿಯಬೇಕಿದೆ 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News