×
Ad

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ ಕೊನೆ ಕ್ಷಣದಲ್ಲಿ ಮುಂದೂಡಿಕೆ; ಸರಕಾರದ ಒತ್ತಡಕ್ಕೆ ಮಣಿಯಿತೇ?

Update: 2025-12-19 21:40 IST

ಸಾಹಿತ್ಯ ಅಕಾಡೆಮಿ ಪ್ರಶಸ್ತಿ | Photo Credit : PTI  

ಹೊಸದಿಲ್ಲಿ, ಡಿ. 19: ಕೇಂದ್ರ ಸಂಸ್ಕೃತಿ ಸಚಿವಾಲಯದ ಸೂಚನೆಯಂತೆ ಪ್ರತಿಷ್ಠಿತ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳ ಘೋಷಣೆಯನ್ನು ಗುರುವಾರ ದಿಢಿರನೆ ಮುಂದೂಡಲಾಗಿದೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಸ್ವಾಯತ್ತ ಸಂಸ್ಥೆಯ ವ್ಯವಹಾರದಲ್ಲಿ ಸರಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಆರೊಪಿಸಿವೆ.

ಕೇಂದ್ರ ಸಾಹಿತ್ಯ ಅಕಾಡೆಮಿಯು ಕೇಂದ್ರ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಯಾಗಿದೆ.

ಸಚಿವಾಲಯವು ಆಯ್ಕೆ ಪ್ರಕ್ರಿಯೆ ಬಗ್ಗೆ ಅತೃಪ್ತಿ ಹೊಂದಿದೆ ಎನ್ನಲಾಗಿದೆ. ಅದರ ಸೂಚನೆಯಂತೆ ಪ್ರಶಸ್ತಿ ವಿಜೇತರ ಹೆಸರುಗಳ ಪ್ರಕಟನೆಯನ್ನು ತಡೆಹಿಡಿಯಲಾಗಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರಶಸ್ತಿ ವಿಜೇತರ ಹೆಸರುಗಳ ಘೋಷಣೆಗೆ ಗುರುವಾರ ಪತ್ರಿಕಾಗೋಷ್ಠಿಯನ್ನು ಕರೆದಿತ್ತು. ಅದರ ಕಾರ್ಯಕಾರಿ ಮಂಡಳಿಯ ಸಭೆಯ ಬಳಿಕ ಪತ್ರಿಕಾಗೋಷ್ಠಿಯು ಅಪರಾಹ್ನ 3 ಗಂಟೆಗೆ ನಡೆಯಬೇಕಾಗಿತ್ತು. ಕಾರ್ಯಕಾರಿ ಮಂಡಳಿಯು ಪ್ರಶಸ್ತಿ ವಿಜೇತರ ಪಟ್ಟಿಗೆ ಅನುಮೋದನೆ ನೀಡಿತ್ತು.

ಆದರೆ, ಪತ್ರಿಕಾಗೋಷ್ಠಿ ಆರಂಭವಾಗಬೇಕಾಗಿದ್ದ ನಿಮಿಷಗಳ ಮೊದಲು, ಪ್ರಶಸ್ತಿ ವಿಜೇತರ ಪಟ್ಟಿಯನ್ನು ಘೋಷಿಸದಂತೆ ಸರಕಾರದ ಪ್ರತಿನಿಧಿಗಳು ಸಾಹಿತ್ಯ ಅಕಾಡೆಮಿ ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ಪತ್ರಿಕಾಗೋಷ್ಠಿ ನಡೆಸದಂತೆ ತಾಕೀತು ಮಾಡಿದರು.

ಆದರೆ, ಸರಕಾರದ ಈ ಕ್ರಮಕ್ಕೆ ಮಂಡಳಿಯು ಅತೃಪ್ತಿ ವ್ಯಕ್ತಪಡಿಸಿತು.

‘‘ಕಾರ್ಯಕಾರಿ ಮಂಡಳಿಯು ಪ್ರಶಸ್ತಿ ವಿಜೇತರ ಪಟ್ಟಿಗೆ ಅನುಮೋದನೆ ನೀಡಿದ ಬಳಿಕ, ಘೋಷಣೆಯನ್ನು ತಡೆಹಿಡಿಯುವಂತೆ ಸರಕಾರದ ಪ್ರತಿನಿಧಿಗಳು ಸೂಚಿಸಿದರು. ಪ್ರಶಸ್ತಿ ವಿಜೇತರನ್ನು ಪರಿಶೀಲಿಸಬೇಕಾಗಿದೆ ಎಂದು ಅವರು ಹೇಳಿದರು. ಏನಾದರೂ ವಿವಾದಗಳಿದ್ದರೆ ಅವುಗಳನ್ನು ಸಾಬೀತುಪಡಿಸಲು ಪುರಾವೆಗಳು ಬೇಕು ಎಂದು ಕಾರ್ಯಕಾರಿ ಮಂಡಳಿ ಹೇಳಿತು. ಪ್ರಶಸ್ತಿ ವಿಜೇತರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಹಾಗೂ ಈಗ ಹೆಸರುಗಳನ್ನು ಪ್ರಕಟಿಸಲು ಅನುಮತಿಯಷ್ಟೇ ಬೇಕು ಎಂಬುದಾಗಿಯೂ ಸರಕಾರದ ಪ್ರತಿನಿಧಿಗಳಿಗೆ ತಿಳಿಸಲಾಯಿತು’’ ಎಂದು ಅನಾಮಧೇಯರಾಗಿ ಉಳಿಯಲು ಬಯಸಿದ ಅಕಾಡೆಮಿಯ ಸದಸ್ಯರು ಹೇಳಿದ್ದಾರೆ.

ಇದಕ್ಕೆ ಸಚಿವಾಲಯದಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರಶಸ್ತಿಗಳನ್ನು ಪುನರ‌್ರಚಿಸಬೇಕು ಮತ್ತು ಹೊಸ ನಿಯಮಗಳ ಅಡಿಯಲ್ಲಿ ಪ್ರಶಸ್ತಿ ವಿಜೇತರನ್ನು ಆರಿಸಬೇಕು ಎಂಬುದಾಗಿ ಸರಕಾರ ಬಯಸಿದೆ ಎನ್ನಲಾಗಿದೆ.

*ಪ್ರತಿಪಕ್ಷಗಳ ವಾಗ್ದಾಳಿ

ಕೇಂದ್ರ ಸಾಹಿತ್ಯ ಅಕಾಡೆಮಿಯು ತನ್ನ ವಾರ್ಷಿಕ ಪ್ರಶಸ್ತಿಗಳ ಪಟ್ಟಿ ಘೋಷಣೆಯನ್ನು ಕೊನೆ ಕ್ಷಣದಲ್ಲಿ ತಡೆಹಿಡಿದಿರುವುದಕ್ಕೆ ಸಂಬಂಧಿಸಿ ಪ್ರತಿಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ.

‘‘ಕೇಂದ್ರ ಸಾಹಿತ್ಯ ಅಕಾಡೆಮಿಯು ತನ್ನ ವಾರ್ಷಿಕ ಪ್ರಶಸ್ತಿಗಳ ಪಟ್ಟಿಯನ್ನು ಅನುಮೋದನೆಗಾಗಿ ಕೇಂದ್ರ ಸರಕಾರಕ್ಕೆ ಕಳುಹಿಸಿರುವುದು ಅತ್ಯಂತ ಖಂಡನಾರ್ಹವಾಗಿದೆ. ಸಾಹಿತ್ಯ ಅಕಾಡೆಮಿಯಂಥ ಸ್ವಾಯತ್ತ ಸಂಸ್ಥೆಯೊಂದು ಸರಕಾರದ ಶಕ್ತಿಗಳಿಗೆ ತಲೆ ಬಾಗಿಸಿ ಅದರ ಅನುಮತಿ ಕೋರುವುದು ಅಕಾಡೆಮಿಯ ಇತಿಹಾಸಲ್ಲೇ ಮೊದಲ ಬಾರಿಯಾಗಿದೆ’’ ಎಂದು ಸಿಪಿಎಮ್ ಮುಖ್ಯಸ್ಥ ಎಮ್.ಎ. ಬೇಬಿ ‘ಎಕ್ಸ್’ನಲ್ಲಿ ಬರೆದಿದ್ದಾರೆ.

ಅಕಾಡೆಮಿಯ ಆಡಳಿತಾತ್ಮಕ ವೈಫಲ್ಯದ ಬಗ್ಗೆಯೂ ಅವರು ಕಿಡಿಗಾರಿದ್ದಾರೆ. ಅಕಾಡೆಮಿಯಲ್ಲಿ ಅಕ್ಟೋಬರ್‌ ನಿಂದ ಖಾಯಾಂ ಕಾರ್ಯದರ್ಶಿ ಇಲ್ಲ ಎಂದು ಅವರು ಹೇಳಿದ್ದಾರೆ. ‘‘ಕಾರ್ಯದರ್ಶಿ ಇಲ್ಲದೆ ಕೆಲಸ ಮಾಡುತ್ತಿರುವ ಅಕಾಡೆಮಿಯು ತನ್ನ ಪ್ರಶಸ್ತಿ ವಿಜೇತರ ಪಟ್ಟಿಯ ಅನುಮೋದನೆಗಾಗಿ ಸರಕಾರದ ಮುಂದೆ ಮಂಡಿಯೂರಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇದು ಅಕಾಡೆಮಿಯ ಹೆಸರಾಂತ ಸ್ಥಾಪಕರ ಕಲ್ಪನೆಯನ್ನೇ ಬುಡಮೇಲುಗೊಳಿಸಿದೆ’’ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News