ಮೋದಿಗೆ ಅಕ್ಷರಗಳೊಂದಿಗೆ ಆಡುವ ‘ಗಂಭೀರ ಕಾಯಲೆ’: ಕಾಂಗ್ರೆಸ್
ನರೇಂದ್ರ ಮೋದಿ | Photo Credit : PTI
ಹೊಸದಿಲ್ಲಿ, ಡಿ. 19: ಪ್ರಧಾನಿ ನರೇಂದ್ರ ಮೋದಿ ‘‘ಅಕ್ಷರಗೊಳೊಂದಿಗೆ ಆಡಿ ಯೋಜನೆಗಳಿಗೆ ಗಮನ ಸೆಳೆಯುವ ಹೆಸರುಗಳನ್ನು ಇಡುವ ಗಂಭೀರ ಕಾಯಿಲೆ’’ಯಿಂದ ಬಳಲುತ್ತಿದ್ದಾರೆ ಎಂದು ‘ವಿಬಿ- ಜಿ ರಾಮ್ ಜಿ’ ಮಸೂದೆಯನ್ನು ಸಂಸತ್ ಅಂಗೀಕರಿಸಿದ ಒಂದು ದಿನದ ಬಳಿಕ ಶುಕ್ರವಾರ ಕಾಂಗ್ರೆಸ್ ಹೇಳಿದೆ.
ಇಪ್ಪತ್ತು ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಜಾಗಕ್ಕೆ ಕೇಂದ್ರ ಸರಕಾರ ತರಲು ಉದ್ದೇಶಿಸಿರುವ ‘ವಿಬಿ- ಜಿ ರಾಮ್ ಜಿ’ ಯೋಜನೆಯ ಮಸೂದೆಗೆ ಸಂಸತ್ ಗುರುವಾರ ಅಂಗೀಕಾರ ನೀಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವ್ಯಂಗ್ಯಚಿತ್ರವೊಂದನ್ನು ಹಾಕಿದರು.
ಆ ವ್ಯಂಗ್ಯಚಿತ್ರದಲ್ಲಿ ಹೀಗೆ ಬರೆದಿದೆ: ‘‘ಪದಗಳ ಮೊದಲ ಅಕ್ಷರಗಳನ್ನು ಜೋಡಿಸಿ ಹೊಸ ಪದಗಳನ್ನು ಸೃಷ್ಟಿಸುವ ಸಚಿವಾಲಯ. ಇಲ್ಲಿ ಹಳೆಯ ಯೋಜನೆಗಳಿಗೆ ಹೊಚ್ಚ ಹೊಸ ಹೆಸರುಗಳನ್ನು ಇಡಲಾಗುತ್ತದೆ. ಹೆಸರುಗಳು ಹೊಸದಾದರೂ ಅರ್ಥಹೀನ!’’.
‘‘ಪ್ರಧಾನಿಯವರು ಅಕ್ಷರಗೊಳೊಂದಿಗೆ ಆಡಿ ಯೋಜನೆಗಳಿಗೆ ಗಮನ ಸೆಳೆಯುವ ಹೆಸರುಗಳನ್ನು ಇಡುವ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ’’ ಎಂಬುದಾಗಿ ರಮೇಶ್ ವ್ಯಂಗ್ಯಚಿತ್ರದ ಸಮೀಪ ಬರೆದಿದ್ದಾರೆ.
ವಿಕಸಿತ ಭಾರತ ಗ್ಯಾರಂಟೀ ಫಾರ್ ರೋಜ್ಗಾರ್ ಆ್ಯಂಡ್ ಆಜೀವಿಕಾ ಮಿಶನ್ (ಗ್ರಾಮೀಣ್) (ವಿಬಿ- ಜಿ ರಾಮ್ ಜಿ) ಮತ್ತು ಸಸ್ಟೇನಬಲ್ ಹಾರ್ನೆಸಿಂಗ್ ಆ್ಯಂಡ್ ಅಡ್ವಾನ್ಸ್‌ಮೆಂಟ್ ಆಫ್ ನ್ಯೂಕ್ಲಿಯರ್ ಎನರ್ಜಿ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ (ಶಾಂತಿ)- ಈ ಎರಡು ಮಸೂದೆಗಳನ್ನು ಸಂಸತ್ ಅಂಗೀಕರಿಸಿದ ಬಳಿಕ ಜೈರಾಮ್ ಈ ರೀತಿಯಾಗಿ ಟೀಕಿಸಿದ್ದಾರೆ.