×
Ad

ಆಚಾರವಿಲ್ಲದ ಉವೈಸಿಯ ವಕ್ರ ನಾಲಿಗೆ

Update: 2016-03-18 21:38 IST

ಉವೈಸಿ ಎಂಬ ಹೈದರಾಬಾದಿನ ಪುಢಾರಿ ಖಾಕಿ ಚೆಡ್ಡಿ ಧರಿಸಿ ಏನಾದರೂ ಒದರಿದ್ದರೆ ಚಿಂತಿಸಬೇಕಾಗಿರಲಿಲ್ಲ. ಏಕೆಂದರೆ ಗಣ ವೇಷಧಾರಿಗಳ ಸಕಲ ವೇಷಗಳೂ ಇಲ್ಲಿನ ನೊಣ ಸೊಳ್ಳೆಗಳಷ್ಟೇ ಭಾರತೀಯರಿಗೆ ಸಾಕಷ್ಟು ಪರಿಚಿತವಾಗಿವೆ. ಆದರೆ ಆತ ಮುಸ್ಲಿಂ ಸಮಾಜದವರ ಸಂಕೇತಗಳೆಂದು ನಂಬಲಾಗುವ ಗಡ್ಡ, ಟೋಪಿ, ಶೇರ್ವಾನಿ ಇತ್ಯಾದಿ ಧರಿಸಿಕೊಂಡು ತಿರುಗಾಡುತ್ತಾರೆ. ಕೇವಲ ಈ ಕಾರಣಕ್ಕಾಗಿ ಅವರ ಕಪಿ ಚೇಷ್ಟೆಗಳೆಲ್ಲಾ ಮುಸ್ಲಿಂ ಸಮಾಜದ ಜೋಳಿಗೆಗೆ ಬಂದು ಬೀಳುತ್ತವೆ. ಉವೈಸಿ ಥರದವರು ಆಗಾಗ ಉತ್ಪಾದಿಸುವ ಕಸ ಕಲ್ಮಶಗಳನ್ನು ದಯವಿಟ್ಟು ನಮ್ಮ ಜೋಳಿಗೆಗೆ ಎಸೆಯಬೇಡಿ ಎಂದು ಮುಸ್ಲಿಂ ಸಮುದಾಯದವರು ಎಷ್ಟು ಗೋಗರೆದರೂ ಅದನ್ನೆಲ್ಲ ಹೊತ್ತು ತಂದು ಮುಸ್ಲಿಮರ ಮೇಲೆ ಎಸೆಯುವುದನ್ನೇ ಕಾಯಕವಾಗಿಸಿಕೊಂಡಿರುವ ಹಲವರಿದ್ದಾರೆ. ಅಂಥವರು ಇದೀಗ ಅಪಾರ ಸಂಭ್ರಮದಲ್ಲಿದ್ದಾರೆ. ಉವೈಸಿ ಮೇಲ್ನೋಟಕ್ಕೆ ಸಭ್ಯರಂತೆ ಕಾಣಿಸುತ್ತಾರೆ.

ಉರ್ದು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸರಾಗವಾಗಿ ಭಾಷಣ ಮಾಡುತ್ತಾರೆ. ಕಾನೂನಿನ ಜ್ಞಾನ ಉಳ್ಳವನೆಂದು ತೋರಿಸಿಕೊಳ್ಳುತ್ತಾರೆ. ಆದರೆ ಅವರು ನಡೆಸುತ್ತಿರುವುದು ತೀರಾ ಅಗ್ಗದ ಬೀದಿ ರಾಜಕೀಯ. ತನ್ನ ಕುಟುಂಬ ಪ್ರಧಾನ ಪಕ್ಷಕ್ಕೆ ಒಂದು ನಿರ್ದಿಷ್ಟ ಧಾರ್ಮಿಕ ಸಮುದಾಯದ ಹೆಸರಿಟ್ಟುಕೊಂಡು ಅಲೆಯುವ ಮೂಲಕ ಈ ಪುಢಾರಿ ಪ್ರಜಾಸತಾತ್ಮಕ ಮೌಲ್ಯಗಳ ಬಗ್ಗೆ ತನಗಿರುವ ಕಾಳಜಿ ಎಷ್ಟು ಸೀಮಿತ ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ. ಇದೀಗ ಅವರು ಭಾರತ್ ಮಾತಾಕಿ ಜೈ ಎಂಬ ಘೋಷಣೆ ಕುರಿತು ತನ್ನ ಆಚಾರವಿಲ್ಲದ ವಕ್ರ ನಾಲಿಗೆಯನ್ನು ಹರಿಯ ಬಿಡುವ ಮೂಲಕ ತನ್ನ ವಿಕೃತ ಮಾನಸಿಕತೆಯನ್ನು ಚರ್ಚೆಗೆ ತಂದಿದ್ದಾರೆ.

ಮುಸ್ಲಿಂ ಮತಗಳು ಸೆಕ್ಯುಲರ್ ಪಕ್ಷಗಳಿಗೆ ಸಿಗದೇ ಪ್ರತ್ಯೇಕವಾಗಿ ಉಳಿದು ಆ ಮೂಲಕ ವ್ಯರ್ಥವಾಗಿ ಬಿಡುವಂತೆ ನೋಡಿಕೊಳ್ಳಲು ಇವರ ಪಕ್ಷವು ಬಿಜೆಪಿಯವರಿಂದ ಲಂಚ ಪಡೆಯುತ್ತದೆ ಎಂಬ ಊಹಾಪೋಹಗಳು ಹಲವು ವರ್ಷಗಳಿಂದ ಚಲಾವಣೆಯಲ್ಲಿವೆ. ಆದರೆ ಉವೈಸಿಯವರ ಗಡ್ಡ ಟೋಪಿಗಳನ್ನು ಕಂಡವರು, ಧರ್ಮದ ಇಷ್ಟೆಲ್ಲಾ ಸಂಕೇತಗಳನ್ನು ಹೊತ್ತು ನಡೆಯುವವರು ಅಷ್ಟೊಂದು ಹೀನ ಕೆಲಸ ಮಾಡಲಿಕ್ಕಿಲ್ಲ ಎಂದು ನಂಬಿದ್ದರು. ಆದರೆ ಇವರ ಇತ್ತೀಚಿನ ಕೆಲವು ನಡೆಗಳು ಪ್ರಸ್ತುತ ಸಂಶಯಗಳನ್ನು ಮತ್ತೆ ಬಲಪಡಿಸಿವೆ. ದೇಶ ಭಕ್ತಿಯ ಗುತ್ತಿಗೆದಾರರು ದೇಶದೆಲ್ಲೆಡೆ ಜನರ ನಾಡಿ ಪರೀಕ್ಷಿಸಿ ಯಾರು ದೇಶ ಭಕ್ತರು ಹಾಗೂ ಯಾರು ದೇಶದ್ರೋಹಿಗಳು ಎಂಬುದನ್ನು ನಿರ್ಣಯಿಸಿ ಸರ್ಟಿಫಿಕೇಟು ಹಂಚುತ್ತಿರುವ ಸಮಯ ಇದು. ಬಹು ಕಾಲ ಮುಸ್ಲಿಮರಿಗೆಂದೇ ಮೀಸಲಾಗಿದ್ದ ದೇಶದ್ರೋಹಿ ಪಟ್ಟವನ್ನು ಕೇಸರಿ ವಾನರ ಪಡೆಯವರು ಉದಾರವಾಗಿ ದಲಿತರಿಗೆ ಹಾಗೂ ದೇಶದ ಎಲ್ಲ ಬುದ್ಧಿ ಜೀವಿಗಳಿಗೆ ವಿಸ್ತರಿಸಿರುವ ಈ ಹಂತದಲ್ಲಿ ಉವೈಸಿಯವರು ಸಂಪೂರ್ಣ ಮುಸ್ಲಿಂ ಸಮುದಾಯವನ್ನು ಮುಜುಗರಕ್ಕೀಡು ಮಾಡಲು ವಾನರ ಸೇನೆಗೆ ಅವಕಾಶ ನೀಡಿರುವುದನ್ನು ನೋಡಿದರೆ, ಅವರು ಯಾರ ಪರೋಕ್ಷ ಏಜೆಂಟ್ ಎಂಬುದು ಸ್ಪಷ್ಟವಾಗಿ ಬಿಡುತ್ತದೆ. ಉವೈಸಿ ಹೈದರಾಬಾದ್‌ನ ತನ್ನ ಅಭಿಮಾನಿಗಳ ಮುಂದೆ ಭಾಷಣಕ್ಕೆ ನಿಂತರೆಂದರೆ ಬೀದಿ ಬದಿಯ ದೊಂಬರಾಟದಲ್ಲಿ ವೀಕ್ಷಕ ಶಿಖಾಮಣಿಗಳು ಶಿಳ್ಳೆ ಹೊಡೆದು ಭೇಷ್ ಅಂದಾಗ ಪುಳಕ ಪಡೆದು ತಿಪ್ಪರಲಾಗ ಹಾಕುವ ಕೋತಿಯಂತೆ ವರ್ತಿಸಲಾರಂಭಿಸುತ್ತಾರೆ.

ಈ ಹಿಂದೆ ಇವರ ತಮ್ಮ, ಜನಸ್ತೋಮದ ಮುಂದೆ ಬೊಗಳೆ ಬಿಡುವ ಭರಾಟೆಯಲ್ಲಿ ಮಾನವೀಯ ಘನತೆ, ಸಜ್ಜನಿಕೆಗಳನ್ನೆಲ್ಲಾ ಮರೆತು ತೀರಾ ಅಗ್ಗದ ಭಾಷೆ ಬಳಸುತ್ತಾ ಅವರಿವರ ಮೇಲೆ ಹರಿಹಾಯ ತೊಡಗಿದಾಗಲೇ ಇವರ ಪಕ್ಷದ ಬಂಡವಾಳ ಬಯಲಾಗಿತ್ತು. ಆದರೆ ಆ ವೇಳೆ ಅಣ್ಣ ಉವೈಸಿ ತಮ್ಮ ಉವೈಸಿಯಷ್ಟು ದುರುಳನಲ್ಲ ಎಂದುಕೊಂಡು ಹಲವರು ಸಮಾಧಾನ ಪಟ್ಟಿದ್ದರು. ಇದೀಗ ಅವರು ಕೂಡ ಸಣ್ಣವನು ಒಂದು ಸೇರಾದರೆ ದೊಡ್ಡವನು ಒಂದೂವರೆ ಸೇರು ಎಂಬುದನ್ನು ಮನಗಂಡಿದ್ದಾರೆ. ಯಾವುದಾದರೂ ದೇಶದ ಕೆಲವು ನಾಗರಿಕರು ಪದೇ ಪದೇ ತಮ್ಮ ಎದೆಯನ್ನು ಹರಿದು ತಮ್ಮ ದೇಶ ಪ್ರೇಮವನ್ನು ಸಾಬೀತು ಪಡಿಸುತ್ತಿರಬೇಕೆಂದು ಅದೇ ದೇಶದ ಕೆಲವು ಅನಾಗರಿಕರು ಆಗ್ರಹಿಸುವುದು ಆ ದೇಶದ ಪಾಲಿಗೆ ಆರೋಗ್ಯದ ಲಕ್ಷಣವೇನೂ ಅಲ್ಲ.

ಇಂತಹ ವಾತಾವರಣದಲ್ಲಿ ದೇಶ ಪ್ರೇಮ ಎಂಬುದು ಕೇವಲ ಒಂದು ಘೋಷಣೆ ಕೂಗಿದರೆ ಸಾಬೀತಾಗಿ ಬಿಡುವ ಮತ್ತು ದೇಶ ದ್ರೋಹ ಎಂಬುದು ಕೇವಲ ಒಂದು ಘೋಷಣೆ ಕೂಗುವ ಮೂಲಕ ಮರೆಮಾಚಿ ಬಿಡಬಹುದಾದ ಪ್ರಕ್ರಿಯೆಯಾಗಿ ಬಿಡುತ್ತದೆ. ಅಮಾಯಕರ ಭಾವುಕತೆಯನ್ನೇ ಬಂಡವಾಳವಾಗಿ ಬಳಸುವ ವಾನರ ಸೇನೆಯ ಅನಂತಕುಮಾರರಿಗೆ ಮತ್ತು ದೊಂಬರಾಟ ಕಲಾವಿದ ಉವೈಸಿಯವರಿಗೆ ಬೇಕಾಗಿರುವುದು ಅಂತಹದೇ ಸಮಾಜ. ಇತ್ತೀಚೆಗೆ ಸ್ತ್ರೀ ಸ್ತ್ರೀ ರವಿಶಂಕರರು ಅರ್ಧ ನಾರೀಶ್ವರ ವೇಷ ತೊಟ್ಟು ನಾವು ಜೊತೆ ಜೊತೆಯಾಗಿ ಪಾಕಿಸ್ತಾನ ಜಿಂದಾಬಾದ್ ಮತ್ತು ಜೈ ಹಿಂದ್ ಘೋಷಣೆ ಕೂಗೋಣ ಎಂದು ಹೇಳಿದ್ದನ್ನು ಚರ್ಚೆಗರ್ಹವಲ್ಲದ ಮಾತೆಂದು ಕಡೆಗಣಿಸಿ ಬಿಡಲಾಯಿತು. ಆದರೆ ಇದೀಗ ಉವೈಸಿ ಮುಸ್ಲಿಂ ವೇಷಧಾರಿ ಎಂಬ ಕಾರಣಕ್ಕೆ, ಆತ ಭಾರತ್ ಮಾತಾ ಕಿ ಜೈ ಕುರಿತು ಒದರಿದ ಮಾತುಗಳು ರಾಷ್ಟ್ರೀಯ ಚರ್ಚಾ ವಿಷಯವಾಗಿ ಮಾರ್ಪಟ್ಟಿವೆ. ಉವೈಸಿಯ ಟೋಪಿಯೊಳಗೆ ಒಂದಿಷ್ಟು ಜೀವಂತ ಮಿದುಳು ಇದ್ದಿದ್ದರೆ ಅವರು ತಮ್ಮ ಕೋತಿ ಪಟಾಲಂ ಮುಂದೆ ನಿಂತು ತಮ್ಮ ಆಚಾರವಿಲ್ಲದ ನಾಲಿಗೆ ಬಳಸಿ ಡೈಲಾಗ್ ಹೊಡೆಯುವಾಗ ಅವರಿಗೆ ಈ ಬೆಳವಣಿಗೆಗಳ ಪರಿಜ್ಞಾನ ಇರಬೇಕಿತ್ತು. ಇದೀಗ ತನ್ನೊಳಗೆ ಅಂತಹ ಯಾವ ಪರಿಜ್ಞಾನವೂ ಇಲ್ಲ ಮಾತ್ರವಲ್ಲ ಸಾಮಾಜಿಕ ಸಂವೇದನೆ ಕೂಡ ತನ್ನಲ್ಲಿ ಲವಲೇಶವೂ ಇಲ್ಲ ಎಂಬುದನ್ನು ಉವೈಸಿ ಸಾಬೀತು ಪಡಿಸಿದ್ದಾರೆ.

ಇದು ಒಂದು ರೀತಿಯಲ್ಲಿ ಅವರು ಸಮಾಜಕ್ಕೆ ಮಾಡಿರುವ ಉಪಕಾರ. ಅವರ ಈ ನಿಜ ರೂಪ ಬಹಿರಂಗವಾದ ಬಳಿಕವಾದರೂ ಅವರ ಬೆಂಬಲಿಗರು ಅವರ ಬಗ್ಗೆ ತಾವು ಇಟ್ಟು ಕೊಂಡಿರುವ ನಿರೀಕ್ಷೆಗಳನ್ನು ಕಳಚಿಕೊಳ್ಳಬೇಕು. ಉವೈಸಿ ಯಾವುದಾದರೂ ಘೋಷಣೆ ಕೂಗಲಿ, ಖಾಸಗಿಯಾಗಿ ಮೈ ಪರಚಿ ಕೊಳ್ಳಲಿ. ಆದರೆ ಆತ ಯಾವುದೇ ಸಮಾಜದ ಪ್ರತಿನಿಧಿಯಲ್ಲ ಮತ್ತು ಆತನ ಯಾವುದೇ ಕಪಿ ಚೇಷ್ಟೆಗೆ ಯಾವುದೇ ಸಮುದಾಯ ಸ್ಪಷ್ಟೀಕರಣ ಕೊಡಬೇಕಾಗಿಲ್ಲ ಎಂಬುದು ಸಮಾಜಕ್ಕೆ ಮನವರಿಕೆಯಾದರೆ ಸಾಕು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News