ಮುಂಬೈ: ಡಂಪಿಂಗ್‌ಯಾರ್ಡ್‌ನಲ್ಲಿ ಅಗ್ನಿಕಾಂಡ
ಹೊಸದಿಲ್ಲಿ,ಮಾ.22: ಮುಂಬೈಯ ದಿಯೊನಾರ್‌ನ ತ್ಯಾಜ್ಯ ವಿಸರ್ಜನೆ ಪ್ರದೇಶದಲ್ಲಿ ಸಂಭವಿಸಿದ ಅಗ್ನಿಆಕಸ್ಮಿಕವು ಅತ್ಯಂತ ಗಂಭೀರ ವಿಷಯವೆಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಕಳವಳ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ತನಿಖೆಗಾಗಿ ವಿಶೇಷ ದ್ವಿಸದಸ್ಯ ತಂಡವೊಂದನ್ನು ಕಳುಹಿಸಿಕೊಡುವುದಾಗಿ ಅವರು ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು ಅಗ್ನಿ ಅನಾಹುತದ ಬಗ್ಗೆ ಮುಂಬೈ ಪೊಲೀಸ್ ಆಯುಕ್ತರ ಜೊತೆ ದೂರವಾಣಿ ಸಂಭಾಷಣೆ ನಡೆಸಿರುವುದಾಗಿ ತಿಳಿಸಿದರು. ಡಂಪ್‌ಯಾರ್ಡ್‌ನ ನಿರ್ವಹಣೆಯ ಉಸ್ತುವಾರಿ ಹೊತ್ತಿರುವ ಗುತ್ತಿಗೆದಾರರ ಅಜಾಗರೂಕತೆಯೇ ಅಗ್ನಿಅನಾಹುತಕ್ಕೆ ಕಾರಣವೆಂದು ಅವರು ಹೇಳಿದ್ದಾರೆ.
ಒಂದು ವೇಳೆ ಅಗ್ನಿಆಕಸ್ಮಿಕವು ವಿಧ್ವಂಸಕ ಕೃತ್ಯವಾಗಿರುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಅವರು ತನಿಖಾ ತಂಡವು ತನ್ನ ವರದಿಯನ್ನು ಸಲ್ಲಿಸಿದ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟವಾದ ನಿರ್ಧಾರಕ್ಕೆ ಬರಬಹುದೆಂದು ಅವರು ತಿಳಿಸಿದರು.
ವರದಿ ಸಿದ್ಧವಾದ ಬಳಿಕ ಮುಂಬೈ ಪೊಲೀಸ್ ಆಯುಕ್ತ ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜೊತೆಗೆ ಚರ್ಚಿಸಲಿರುವುದಾಗಿ ಅವರು ಹೇಳಿದರು.
ದಿಯೋನಾರ್ ಡಂಪಿಂಗ್ ಯಾರ್ಡ್‌ನಲ್ಲಿ ಭುಗಿಲೆದ್ದಿರುವ ಬೆಂಕಿಯನ್ನು ಶಮನಗೊಳಿಸಲು ಅಗ್ನಿಶಾಮಕದಳದ ಸಿಬ್ಬಂದಿ ಹರಸಾಹಸ ಪಡುತ್ತಿರುವಂತೆಯೇ ಸಮೀಪದ ಗೋವಂಡಿಯ ಶಿವಾಜಿನಗರ್, ಮನ್‌ಖುರ್ಡ್, ಝಕೀರ್ ಹುಸೇನ್ ನಗರ್ ಹಾಗೂ ಬೈಗನ್‌ವಾಡಿ ಪ್ರದೇಶಗಳಲ್ಲಿ ವಿಷಪೂರಿತ ಹೊಗೆ ಆವರಿಸಿದ್ದು, ಅಲ್ಲಿನ ನಿವಾಸಿಗಳು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ.
ತ್ಯಾಜ್ಯಸಂಗ್ರಹದ ಸಮಸ್ಯೆಗಳನ್ನು ನಿವಾರಿಸಲು ತನ್ನ ಸಚಿವಾಲಯವು ನೂತನ ಘಟನ ತ್ಯಾಜ್ಯ ನಿರ್ವಹಣಾ ಕಾನೂನುಗಳನ್ನು ಜಾರಿಗೆ ತರಲಿದೆಯೆಂದು ಜಾವ್ಜೇಕರ್ ತಿಳಿಸಿದರು.