ಅಲಿಗಢ್ ಮುಸ್ಲಿಂ ವಿವಿಯ ಸ್ಥಾಪಕ ಸಯ್ಯದ್ ಅಹ್ಮದ್ ಖಾನ್ ಅಲ್ಲ!

Update: 2016-03-22 03:21 GMT

ಲಕ್ನೋ, ಮಾ.22: ಸರ್ ಸಯ್ಯದ್ ಅಹ್ಮದ್ ಖಾನ್ ಅಲೀಗಢ ಮುಸ್ಲಿಂ ಯುನಿವರ್ಸಿಟಿಯ ಸ್ಥಾಪಕ ಎನ್ನುವುದು ತಪ್ಪುಕಲ್ಪನೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹೊಸ ಕ್ಯಾತೆ ತೆಗೆದಿದೆ.

ಸಂಘಟನೆಯ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ "ಸಯ್ಯದ್ ಅಹ್ಮದ್ ಖಾನ್, ಅಲೀಗಢ ವಿಶ್ವವಿದ್ಯಾನಿಲಯ ಸ್ಥಾಪಕರು ಎನ್ನುವುದು ಸರಿಯಾದ ವಿಶ್ಲೇಷಣೆಯಲ್ಲ" ಎಂದು ಅಭಿಪ್ರಾಯ ವ್ಯಕ್ತವಾಗಿದೆ.


ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದ, ಎಎಂಯು ಬಚಾವೊ ಮಂಚ್‌ನ ಸಂಚಾಲಕ ಹಾಗೂ ಉತ್ತರ ಪ್ರದೇಶ ಬಿಜೆಪಿ ಶಿಕ್ಷಕರ ಘಟಕದ ಮುಖ್ಯಸ್ಥ ಡಾ.ಮನವೇಂದ್ರ ಸಿಂಗ್, "ಇದು 1820ರಲ್ಲಿ ಸ್ಥಾಪನೆಯಾಗಿದ್ದು, ಸಯ್ಯದ್ ಅಹ್ಮದ್ ಖಾನ್ 1897ಕ್ಕೂ ಮುನ್ನವೇ ನಿಧನರಾಗಿದ್ದಾರೆ. ಹಾಗಿದ್ದ ಮೇಲೆ ಅವರು ಅದರ ಸ್ಥಾಪಕರಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.


ಎಎಂಯು 1920ರಲ್ಲಿ ಜಾರಿಗೆ ಬಂದ ಕಾಯ್ದೆಯ ಅನ್ವಯ ಸ್ಥಾಪನೆಯಾದ ಸಂಸ್ಥೆ. 1875ರಲ್ಲಿ ಎಎಂಯು ಕಾಲೇಜು ಸ್ಥಾಪನೆಯಾಗಿತ್ತು. ಇದು ಬಳಿಕ ವಿಶ್ವವಿದ್ಯಾನಿಲಯವಾಯಿತು ಎಂದು ವಿಶ್ಲೇಷಿಸಿದರು.


ಹಿಂದಿನ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಮುಸ್ಲಿಂ ಶಿಕ್ಷಣ ಸಚಿವರೇ ಇದ್ದು, ಮೂರು ಬಾರಿ ಎಎಂಯು ಕಾಯ್ದೆಗೆ ತಿದ್ದುಪಡಿ ತಂದರೂ, ಅದನ್ನು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಾಗಿ ಮಾರ್ಪಡಿಸುವ ವಿಷಯ ಚರ್ಚೆಗೆ ಬರಲೇ ಇಲ್ಲ ಎಂದೂ ಕಾರ್ಯಾಗಾರದಲ್ಲಿ ಪ್ರತಿಪಾದಿಸಲಾಯಿತು.

ಜೆಎನ್‌ಯು ಹಾಗೂ ಎಎಂಯು ಸ್ಥಿತಿಗತಿಗಳ ಬಗ್ಗೆ ಜಾಗೃತಿ ಮೂಡಿಸಲು ದೇಶಾದ್ಯಂತ ಕರಪತ್ರ ಹಂಚಲಾಗುವುದು ಎಂದು ಎಬಿವಿಪಿ ಮುಖಂಡರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News