×
Ad

ನಕಲಿ ರಾಷ್ಟ್ರವಾದಿಗಳ ಹುನ್ನಾರ

Update: 2016-03-23 23:11 IST

ಬಿಜೆಪಿಯ ಹಿರಿಯ ನಾಯಕ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇತ್ತೀಚೆಗೆ ಹಾಡಿ ಹೊಗಳಿದರು. ‘ಮೋದಿ ಭಾರತಕ್ಕೆ ದೇವರು ನೀಡಿದ ವರ’ಎಂದು ಬಣ್ಣಿಸಿದರು. ಅವರು ಯಾಕೆ ಹಾಗೆ ಕರೆದರೋ ಗೊತ್ತಿಲ್ಲ. ಆದರೆ, ದೇವರು ನೀಡಿದ ಈ ವರದಾನ ಭಾರತದ ಜನತೆಯ ಪಾಲಿಗೆ ಶಾಪವಾದಂತಾಗಿದೆ. ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ಅವಲೋಕಿಸಿದರೆ ದೇವರು ನೀಡಿದ ಈ ವರ ದೇಶಕ್ಕೆ ವಕ್ಕರಿಸಿದ ನಂತರ ಜನಸಾಮಾನ್ಯರ ನೆಮ್ಮದಿ ಮಾಯವಾಗಿದೆ. ಬೆಲೆಯೇರಿಕೆಯ ಈ ದಿನಗಳಲ್ಲಿ ತಮ್ಮ ಪಾಡಿಗೆ ತಾವು ಹೇಗೋ ಬದುಕು ಸಾಗಿಸುತ್ತಿದ್ದ ಜನರನ್ನು ಬೆಂಬತ್ತಿ ಕಾಡುತ್ತಿರುವ ಈ ಉಡುಗೊರೆಯ ಪರಿವಾರ ದೇಶದಲ್ಲಿ ಅರಾಜಕತೆಯ ವಾತಾವರಣವನ್ನು ಉಂಟುಮಾಡಿದೆ. ಈಗ ಬಡವರು ತಮ್ಮ ಪಾಡಿಗೆ ತಾವು ನೆಮ್ಮದಿಯಾಗಿರುವುದು ಕಷ್ಟಕರವಾಗಿದೆ. ಹೇಗೋ ಕಷ್ಟಪಟ್ಟು ದುಡಿದು ಊಟ ಮಾಡಬೇಕೆಂದರೆ ಯಾರ ಅಡುಗೆ ಮನೆಯಲ್ಲಿ ಯಾವ ಆಹಾರ ಸಿದ್ಧವಾಗುತ್ತಿದೆ ಎಂದು ಪತ್ತೆಹಚ್ಚಿ ದಾಳಿ ಮಾಡುವ ಗೂಂಡಾ ಪಡೆಗಳು ಹುಟ್ಟಿಕೊಂಡಿವೆ. ದಾದ್ರಿಯಲ್ಲಿ ಒಬ್ಬನನ್ನು ಬಲಿತೆಗೆದುಕೊಂಡ ಈ ಶಕ್ತಿಗಳು, ರಾಜಸ್ಥಾನ ವಿವಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದವು. ಈ ಘಟನೆಗಳ ನಂತರವಾದರೂ ಪರಿಸ್ಥಿತಿ ಸುಧಾರಿಸಬಹುದಾಗಿತ್ತು. ಆದರೆ, ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇದೆ. ಅಮಾಯಕರ ಮೇಲೆ ಹಲ್ಲೆಯಾಗುತ್ತಲೇ ಇದೆ. ಕಳೆದವಾರ ಜಾರ್ಖಂಡ್‌ನ ಲಾತೆಹಾರ್ ಜಿಲ್ಲೆಯಲ್ಲಿ ಈ ಗೂಂಡಾಗಳು ದನದ ವ್ಯಾಪಾರಿಗಳ ಮೇಲೆ ಹಲ್ಲೆ ಮಾಡಿ ಇಬ್ಬರನ್ನು ನೇಣಿಗೆ ಹಾಕಿ ಕೊಂದಿದ್ದಾರೆ. ಇಂತಹ ಘಟನೆಗಳನ್ನು ಸಹಜವೆಂಬಂತೆ ಈ ದೇಶ ಒಪ್ಪಿಕೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ. ಸೂಫಿ ಸಮ್ಮೇಳನದಲ್ಲಿ ಸೌಹಾರ್ದದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಅವರು, ಪ್ರತಿ ನಿತ್ಯವೂ ತಮ್ಮ ಪರಿವಾರದವರಿಂದ ನಡೆ ಯುತ್ತಿರುವ ಈ ಕಗ್ಗೊಲೆಗಳ ಬಗ್ಗೆ ಮಾತನ್ನೇ ಆಡುತ್ತಿಲ್ಲ. ಅವರ ಈ ವೌನವನ್ನು ವೌನ ಸಮ್ಮತಿ ಯೆಂದು ಪರಿಗಣಿಸಬಹುದೇ ಎಂಬ ಸಂದೇಹ ಉಂಟಾಗುತ್ತಿದೆ. ಒಂದೆಡೆ ಮನುಷ್ಯರನ್ನು ಹಾಡಹಗಲೇ ನೇಣಿಗೆ ಹಾಕಿ ಕೊಲ್ಲುತ್ತಿದ್ದರೆ, ಇನ್ನೊಂದೆಡೆ ಸಾಹಿತಿಗಳು ಮತ್ತು ಕಲಾವಿದರ ಮೇಲೆ ಬಂಧನದ ಬೇಡಿ ತೂಗಾಡುತ್ತಿದೆ. ಇತ್ತೀಚೆಗೆ ಉರ್ದು ಲೇಖಕರಿಗೆ ಸರಕಾರದ ವಿರುದ್ಧ ಟೀಕೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲು ಮುಂದಾಗಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಮತ್ತೊಂದೆಡೆ ಬಿಜೆಪಿಯನ್ನು ಮತ್ತು ಸಂಘಪರಿವಾರವನ್ನು ವಿರೋಸುವ ಎಲ್ಲರನ್ನೂ ರಾಷ್ಟ್ರದ್ರೋಹಿಗಳು ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಇತ್ತೀಚೆಗೆ ರಾಷ್ಟ್ರದ್ರೋಹಿಗಳನ್ನು ಸಹಿಸುವುದಿಲ್ಲ ಎಂಬಂತೆ ಮಾತ ನಾಡಿದ್ದಾರೆ. ಅವರ ದೃಷ್ಟಿಯಲ್ಲಿ ದಾದ್ರಿಯಲ್ಲಿ ಅಮಾಯಕ ವ್ಯಕ್ತಿಯನ್ನು ಕೊಂದವನು ರಾಷ್ಟ್ರದ್ರೋಹಿಯಲ್ಲ. ದಾಭೋಲ್ಕರ್, ಪನ್ಸಾರೆ ಮತ್ತು ಕಲಬುರ್ಗಿ ಅವರನ್ನು ಕೊಂದವರು ರಾಷ್ಟ್ರದ್ರೋಹಿಗಳಲ್ಲ. ಆದರೆ, ಬಡತನದಿಂದ ಆಝಾದಿ ಎಂದು ಘೋಷಣೆ ಕೂಗಿದ ಜೆಎನ್‌ಯು ವಿದ್ಯಾರ್ಥಿಗಳು ರಾಷ್ಟ್ರದ್ರೋಹಿಗಳಾಗಿದ್ದಾರೆ. ದಿಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮತ್ತು ಉಮರ್ ಖಾಲಿದ್ ಅವರನ್ನು ಅಪರಾಗಳ ಸಾಲಿನಲ್ಲಿ ನಿಲ್ಲಿಸುವ ಯತ್ನ ನಡೆಯುತ್ತಿದೆ. ಕನ್ಹಯ್ಯಿ ಕುಮಾರ್ ಮಾಡಿದ ಅಪರಾಧವೆಂದರೆ ಆತ ಬ್ರಾಹ್ಮಣ್ಯವನ್ನು ಟೀಕಿಸಿ ಘೋಷಣೆ ಕೂಗಿದನೆಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅದಲ್ಲದೆ, ಜೆಎನ್‌ಯುನಲ್ಲಿ ಎಬಿವಿಪಿಯಿಂದ ಬಂಡಾಯವೆದ್ದು ಬಂದ ಐವರು ವಿದ್ಯಾರ್ಥಿಗಳು ಮನುಸ್ಮತಿಯನ್ನು ಸುಟ್ಟರೆಂದು ಅವರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ. ಕೇಂದ್ರ ಸರಕಾರದ ದೃಷ್ಟಿಯಲ್ಲಿ ಮನುಸ್ಮತಿ ಸುಡುವುದು ಮತ್ತು ಬ್ರಾಹ್ಮಣ್ಯವನ್ನು ಟೀಕಿಸುವುದು ರಾಷ್ಟ್ರ ದ್ರೋಹ ಎಂದು ಪರಿಗಣಿಸಲ್ಪಡುತ್ತಿದೆ. ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಎಪ್ಪತ್ತು ವರ್ಷಗಳ ಹಿಂದೆಯೇ ಬಹಿರಂಗವಾಗಿ ಮನುಸ್ಮತಿಯನ್ನು ಸುಟ್ಟು ಹಾಕಿದ್ದರು. ಈಗ ಅಂಬೇಡ್ಕರ್ ಬದುಕಿದ್ದರೆ ಮೋದಿ ಸರಕಾರ ಅವರನ್ನೂ ರಾಷ್ಟ್ರದ್ರೋಹಿ ಎಂದು ಆರೋಪಿಸಿ ಜೈಲಿಗೆ ಕಳುಹಿಸುತ್ತಿತ್ತು.

ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿದರೆ ಮೋದಿ ಸರಕಾರ ತನ್ನ ಎಲ್ಲ ವೈಲ್ಯಗಳನ್ನು ಮುಚ್ಚಿಕೊಳ್ಳಲು ರಾಷ್ಟ್ರವಾದಿ ಮತ್ತು ರಾಷ್ಟ್ರ ವಿರೋ ಎಂಬ ಲಕ್ಷ್ಮಣ ರೇಖೆಯನ್ನು ಎಳೆದು ಪ್ರತಿಪಕ್ಷಗಳನ್ನು ಹತ್ತಿಕ್ಕಲು ಮುಂದಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಇದೇ ರಾಷ್ಟ್ರವಾದದ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗಲು ಬಿಜೆಪಿ ತೀರ್ಮಾನಿಸಿದಂತೆ ಕಾಣುತ್ತದೆ. ಇದು ನಿಜಕ್ಕೂ ಆಘಾತಕಾರಿ ಸಂಗತಿ. ದೇಶದ ಸಂವಿಧಾನ ಮತ್ತು ಜಾತ್ಯತೀತತೆಯಲ್ಲಿ ನಂಬಿಕೆ ಇಲ್ಲದ ಶಕ್ತಿಗಳು ಅಕಾರವನ್ನು ವಶಪಡಿಸಿಕೊಂಡಿರುವುದರಿಂದ ಭಾರತದ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗಿದೆ. ಈಗ ನಡೆಯುತ್ತಿರುವುದು ರಾಷ್ಟ್ರವಾದಿಗಳು ಮತ್ತು ರಾಷ್ಟ್ರವಿರೋಗಳ ನಡುವಿನ ಸಮರವಲ್ಲ. ನಕಲಿ ಮತ್ತು ಅಸಲಿ ರಾಷ್ಟ್ರವಾದಿಗಳ ನಡುವಿನ ಸಂಘರ್ಷವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News