ಮೃತ ಯೋಧನ ದೇಹವನ್ನು ಬೆತ್ತಲೆಯಾಗಿಯೇ ಕುಟುಂಬಕ್ಕೆ ಒಪ್ಪಿಸಿದ ಅರೆಸೇನಾ ಪಡೆ: ಆರೋಪ
ಕೊಚ್ಚಿ, ಮಾ.27: ಛತ್ತೀಸ್‌ಗಡದ ಬಿಲಾಸ್ಪುರದಲ್ಲಿ ಹುತಾತ್ಮನಾದ ಸೈನಿಕನನ್ನು ಅತ್ಯಂತ ಅನಾಗರಿಕ ರೀತಿಯಲ್ಲಿ ಅರೆಸೇನಾ ಪಡೆ ಆತನ ಕುಟುಂಬಕ್ಕೆ ಒಪ್ಪಿಸಿದ ಘಟನೆಯೊಂದು ಬಹಿರಂಗವಾಗಿದೆ.
ಕೇರಳದ ಕೊಚ್ಚಿಯ ಮೂಲದ ಯೋಧ ಅನಿಲ್ ಎಂಬವರ ಮೃತದೇಹವನ್ನು ಪ್ಲಾಸ್ಟಿಕ್‌ನಿಂದಲೂ ಮುಚ್ಚದೆ, ಯಾವುದೇ ಗೌರವವನ್ನು ನೀಡದೆ, ಬತ್ತಲೆ ರೀತಿಯಲ್ಲೇ ಕುಟುಂಬಕ್ಕೆ ಅರೆಸೇನಾ ಪಡೆ ಒಪ್ಪಿಸಿದೆ ಎಂದು ಲೋಕಸಭಾ ಸದಸ್ಯ ಕೆ. ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ.
ತನ್ನೊಬ್ಬ ಯೋಧನಿಗೆ ಅರೆ ಸೇನಾ ಪಡೆ ಅಗೌರವ ತೋರಿಸಿದೆಯೆಂಬ ಆರೋಪದ ಕುರಿತು ಸಿಆರ್‌ಪಿಎಫ್ ತನಿಖೆ ನಡೆಸಲಿದೆಯೆಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಇಂದು ಲೋಕಸಭಾ ಸದಸ್ಯ ಕೆ.ಸಿ. ವೇಣುಗೋಪಾಲರಿಗೆ ಭರವಸೆ ನೀಡಿದ್ದಾರೆ.
ಚಿಂಗೋಲಿ ಪಂಚಾಯ್ ನಿವಾಸಿ ಅನಿಲ್, ಛತ್ತೀಸ್‌ಗಡದ ಬಿಲಾಸಪುರದಲ್ಲಿ ಗುರುವಾರ ನೀರಲ್ಲಿ ಕೊಚ್ಚಿಕೊಂಡು ಹೋಗಿ ಮೃತರಾಗಿದ್ದರು. ಆದರೆ, ಅವರ ಪಾರ್ಥಿವ ಶರೀರ ಆಲಪ್ಪುರಕ್ಕೆ ತಲುಪಿದಾಗ, ಅದು ಬತ್ತಲೆಯಾಗಿತ್ತು. ಅದನ್ನು ಪ್ಲಾಸ್ಟಿಕ್ ಹಾಳೆಯಲ್ಲ್ಲೂ ಸುತ್ತಿರಲಿಲ್ಲ ಹಾಗೂ ಕೆಡದಂತೆ ಸುಗಂಧ ದ್ರವ್ಯವನ್ನೂ ಹಾಕಿರಲಿಲ್ಲ. ಈ ಕಾರಣದಿಂದ ಮೃತದೇಹ ಕೊಳೆಯಲಾರಂಭಿಸಿತ್ತು ವೇಣುಗೋಪಾಲ್ ಆರೋಪಿಸಿದರು.
ಆಘಾತಗೊಂಡ ಅನಿಲ್‌ರ ಬಂಧುಗಳು ಮೃತದೇಹ ಪಡೆಯಲು ನಿರಾಕರಿಸಿದರು.
ಬಳಿಕ ಸ್ಥಳೀಯ ಪೊಲೀಸರು ಅದನ್ನು ಪಡೆದು, ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಆಸ್ಪತ್ರೆಯೊಂದರ ಶವಾಗಾರದಲ್ಲಿರಿಸಿದರು.
ಸಿಆರ್‌ಪಿಎಫ್ ಅಧಿಕಾರಿಗಳು ತೋರಿಸಿದ ಅಗೌರವದ ಬಗ್ಗೆ ತನಿಖೆಗೆ ಕೋರಿ ತಾನು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹಾಗೂ ಅವರ ಸಹಾಯಕ ಸಚಿವ ಕಿರಣ್ ರಿಜಿಜು ಅವರಿಗೆ ಪತ್ರ ಬರೆದಿದ್ದೆ. ಗೃಹ ಸಚಿವರಿಂದು ತನಗೆ ಕರೆ ಮಾಡಿದ್ದರು. ಘಟನೆಯ ಕುರಿತು ತನಿಖೆಗೆ ಸಿಆರ್‌ಪಿಎಫ್ ಮಹಾನಿರ್ದೇಶಕರಿಗೆ ಆದೇಶ ನೀಡಿದ್ದೇನೆಂದು ಅವರು ತಿಳಿಸಿದ್ದಾರೆಂದು ವೇಣುಗೋಪಾಲ್ ಹೇಳಿದರು.
ಗೃಹ ಸಚಿವರ ಆಶ್ವಾಸನೆಯ ಬಳಿಕ ಸಮಾಧಾನಿತರಾದ ಬಂಧುಗಳು ಅಂತ್ಯ ಸಂಸ್ಕಾರಕ್ಕಾಗಿ ಅನಿಲ್‌ರ ಪಾರ್ಥಿವ ಶರೀರವನ್ನು ಪಡೆದರು. ನಾಗರಿಕ ಸಮಾಜದಲ್ಲಿ ಮೃತ ದೇಹಕ್ಕೆ ಅತ್ಯಂತ ಗೌರವ ನೀಡುವುದು ಸಾಮಾನ್ಯ ಸಂಪ್ರದಾಯವಾಗಿದೆ. ಅಗೌರವಕ್ಕೆ ಹೊಣೆಗಾರರಾದವರನ್ನು ತೀವ್ರವಾಗಿ ಶಿಕ್ಷಿಸಬೇಕೆಂದು ಅವರು ಆಗ್ರಹಿಸಿದರು.