ಮುಂಚಿತ ಚುನಾವಣೆ ನಡೆಸಲು ಸಿದ್ಧ: ಸಿರಿಯ ಅಧ್ಯಕ್ಷ
ಡಮಾಸ್ಕಸ್ (ಸಿರಿಯ), ಎ. 1: ಶೀಘ್ರದಲ್ಲೇ ಅಧ್ಯಕ್ಷೀಯ ಚುನಾವಣೆ ನಡೆಸಲು ತಾನು ಸಿದ್ಧನಿದ್ದೇನೆ ಎಂದು ಸಿರಿಯದ ಅಧ್ಯಕ್ಷ ಬಶರ್ ಅಲ್-ಅಸಾದ್ ಹೇಳಿದ್ದಾರೆ. ಆದರೆ, ಭವಿಷ್ಯದ ಸರಕಾರದಲ್ಲಿ ಅವರ ಪಾತ್ರದ ಕುರಿತು ಉದ್ಭವಿಸಿರುವ ತೀವ್ರ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ, ದೇಶದ ಐದು ವರ್ಷಗಳ ಆಂತರಿಕ ಯುದ್ಧಕ್ಕೆ ಪರಿಹಾರವೊಂದನ್ನು ಕಂಡುಹಿಡಿಯುವ ಅಂತಾರಾಷ್ಟ್ರೀಯ ಯತ್ನ ಹಿನ್ನಡೆ ಕಂಡಿದೆ.
ಯಾವುದೇ ಪರಿವರ್ತನೆ ಅವಧಿಯ ಆಡಳಿತದ ಆರಂಭದಲ್ಲಿ ಅಸಾದ್ ಅಧಿಕಾರದಿಂದ ಕೆಳಗಿಳಿಯಬೇಕು ಎಂಬುದಾಗಿ ಪ್ರತಿಪಕ್ಷ ಪಟ್ಟುಹಿಡಿದಿದೆ. ಆದರೆ, ಅವರನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕೆ ಸಂಬಂಧಿಸಿದ ಯಾವುದೇ ಮಾತುಗಳು ಸ್ವೀಕಾರಾರ್ಹವಲ್ಲ ಎಂದು ಬಶರ್ ಸರಕಾರ ಹೇಳಿದೆ.
ಸಿರಿಯನ್ನರು ಬಯಸುವುದಾದರೆ, ತನ್ನ ಈಗಿನ ಏಳು ವರ್ಷಗಳ ಅಧಿಕಾರಾವಧಿಯನ್ನು ಮುಗಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ರಶ್ಯದ ಸರಕಾರಿ ಮಾಧ್ಯಮದಲ್ಲಿ ಗುರುವಾರ ಪ್ರಕಟ ಗೊಂಡ ಹೇಳಿಕೆ ಯೊಂದರಲ್ಲಿ ಸಿರಿಯ ಅಧ್ಯಕ್ಷ ಹೇಳಿದ್ದಾರೆ.
‘‘ಅಧ್ಯಕ್ಷೀಯ ಚುನಾವಣೆಯನ್ನು ಮುಂಚಿತವಾಗಿ ನಡೆಸಬೇಕು ಎಂಬ ಅಭಿಪ್ರಾಯ ಜನರಲ್ಲಿದೆಯೇ? ಹಾಗಿದ್ದರೆ, ಮುಂಚಿತ ಚುನಾವಣೆಯನ್ನು ನಡೆಸಲು ನನಗೇನೂ ಸಮಸ್ಯೆಯಿಲ್ಲ’’ ಎಂದು ಅಸಾದ್ ನುಡಿದರು. 2014ರ ಜೂನ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಸಾದ್ ಸುಮಾರು 90 ಶೇಕಡ ಮತಗಳೊಂದಿಗೆ ಸಿರಿಯದ ಅಧ್ಯಕ್ಷರಾಗಿ ಏಳು ವರ್ಷಗಳ ಅವಧಿಗೆ ಪುನರಾಯ್ಕೆಯಾಗಿದ್ದರು. ಆದರೆ, ಪ್ರತಿಪಕ್ಷ ಮತ್ತು ಪಾಶ್ಚಾತ್ಯ ದೇಶಗಳು ಇದನ್ನು ‘‘ಪ್ರಹಸನ’’ ಎಂಬುದಾಗಿ ಬಣ್ಣಿಸಿವೆ.