ಕಲಾಭವನ್ ಮಣಿಯ ಮರಣ ಕೀಟನಾಶಕ,ಮಿಥೇನ್ ಕಾರಣದಿಂದ ಸಂಭವಿಸಿದೆ: ಕರುಳು ರೋಗವನ್ನೇ ಶಂಕಿಸಬೇಕಿಲ್ಲ
ತೃಶೂರ್, ಎಪ್ರಿಲ್.3: ಕಲಾಭವನ್ ಮಣಿ ಮರಣದಲ್ಲಿ ನಿಗೂಢತೆ ಇದೆಯೆಂದು ಪೋಸ್ಟ್‌ಮಾರ್ಟಂ ವರದಿ ತಿಳಿಸಿದ್ದು ಮಣಿಯ ಸಾವಿಗೆ ಕ್ಲೋರ್‌ಫೈರಿಫೋಸ್ ಕೀಟನಾಶಕವೂ ಮದ್ಯದ ಮಿಥೇನ್ ದೇಹವನ್ನು ಸೇರಿದ್ದರಿಂದ ಸಂಭವಿಸಿದೆಂದು ಪೋಸ್ಟ್‌ಮಾರ್ಟಂ ನಡೆಸಿರುವ ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ. ಪೋಸ್ಟ್‌ಮಾರ್ಟಂ ವರದಿಯನ್ನು ಪೊಲೀಸರಿಗೆ ಸಲ್ಲಿಸಲಾಗಿದ್ದು ವೈದ್ಯರು ದಾಖಲೆಯಲ್ಲಿ ಸಲ್ಲಿಸಿರುವ ಮೊದಲ ವರದಿ ಇದೆನ್ನಲಾಗಿದೆ. ರಾಸಾಯನಿಕ ಪರೀಕ್ಷೆಯಲ್ಲಿ ದೊರೆತ ಮಾಹಿತಿಯ ಆಧಾರದಲ್ಲಿ ವರದಿಯನ್ನು ವೈದ್ಯರು ತಯಾರಿಸಿದ್ದಾರೆ.
ಮಣಿಗಿದ್ದ ಕರುಳು ರೋಗ ಮರಣವನ್ನು ವೇಗವಾಗಿ ಸಂಭವಿಸುವಂತೆ ಮಾಡಲು ಕಾರಣವಾಗಿದೆ. ಆದರೆ ಕರಳುರೋಗ ಮರಣಕ್ಕೆ ಕಾರಣವಾಗಿಲ್ಲ ಎಂದು ಪೋಸ್ಟ್‌ಮಾರ್ಟಂ ವರದಿಯಲ್ಲಿ ವಿವರಿಸಲಾಗಿದೆ. ಮಣಿಗೆ ಚಿಕಿತ್ಸೆ ನೀಡಿದ್ದ ಕೊಚ್ಚಿಯ ಅಮೃತ ಆಸ್ಪತ್ರೆಯಲಿ ನಡೆಸಿದ ಪರೀಕ್ಷೆಯಲ್ಲಿ ರಾಸಾಯನಿಕ ವಸ್ತುಗಳಿರುವುದು ಕಂಡು ಬಂದಿರಲಿಲ್ಲ. ಆದರೆ ಇದನ್ನು ಕಂಡುಹುಡುಕಲು ತಜ್ಞ ಪರೀಕ್ಷೆ ಅಗತ್ಯವೆಂದು ಅಮೃತದ ಲ್ಯಾಬ್ ವರದಿಯಲ್ಲಿ ಸೂಚಿಸಲಾಗಿತ್ತು. ರೋಗಿಯ ಸ್ಥಿತಿ ಗಂಭೀರವಾದ್ದರಿಂದ ಅದನ್ನು ನಡೆಸಿಲ್ಲವೆಂದು ಪೋಸ್ಟ್‌ಮಾರ್ಟಂ ವರದಿಯಲ್ಲಿ ಹೇಳಲಾಗಿದೆ. ಸಹಜ ಮರಣವಾಗಿ ಮಣಿಯ ಸಾವನ್ನು ಪರಿಗಣಿಸುವಂತಿಲ್ಲ ಎಂಬ ಸೂಚನೆ ಇದರಿಂದ ಲಭಿಸುತ್ತಿದೆಯೆನ್ನಲಾಗಿದೆ.
ಮಣಿಯ ಆಂತರಿಕ ಅವಯವಗಳನ್ನು ಕಾಕನಾಟ್ಟ ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಇದರ ಫಲಿತಾಂಶವನ್ನು ಪರಿಗಣಿಸಿ ವರದಿ ತಯಾರಿಸಲಾಗಿದೆ. ಮೆಡಿಕಲ್ ಕಾಲೇಜ್‌ನ ಫಾರೆನ್ಸಿಕ್ ತಜ್ಞರಾದ ಡಾ.ಪಿ.ಎ. ಶಿಜು, ಡಾ. ಶೇಖ್ ಝಾಕಿರ್ ಹುಸೈನ್ ಪೊಲೀಸರಿಗೆ ಅಂತಿಮ ವರದಿಯನ್ನು ನೀಡಿದ್ದಾರೆ. ಮದ್ಯದ ವಿಷಾಂಶ ಅಪಾಯಕಾರಿ ಪ್ರಮಾಣದಲ್ಲಿರಲಿಲ್ಲ ಎಂದು ರಿಪೋರ್ಟ್‌ನಲ್ಲಿ ಈ ವೈದ್ಯರು ಸೂಚಿಸಿದ್ದಾರೆ. ಇದು ತರಕಾರಿ ಮೂಲಕ ರಾಸಾಯನಿಕ ವಸ್ತು ದೇಹವನ್ನು ಸೇರಿತ್ತೇ ಅಥವಾ ನೇರವಾಗಿ ರಾಸಾಯನಿಕವನ್ನು ಸೇವಿಸಲಾಯಿತೆ ಎಂಬುದನ್ನು ಇನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ವರದಿಗಳು ತಿಳಿಸಿವೆ. ತರಕಾರಿಯಲ್ಲಿ ಶರೀರ ಸೇರುವ ರಾಸಾಯನಿಕ ವಸ್ತುಗಳನ್ನು ಈ ರೀತಿ ಪೋಸ್ಟ್ ಮಾರ್ಟಂನಲ್ಲಿ ರಕ್ತದ ಮೂಲಕ ಕಂಡುಹುಡುಕಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಕೃಷಿ ವಿಶ್ವವಿದ್ಯಾನಿಲಯದ ವರದಿಗಳು ಈ ವಿಷಯವನ್ನು ಎತ್ತಿ ಹೇಳಿವೆ.ಆದ್ದರಿಂದ ಈ ಅಧ್ಯಯನ ವರದಿಯನ್ನೂ ಪೊಲೀಸರು ಸಂಗ್ರಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಲ್ಯಾಬ್‌ನ ಪರೀಕ್ಷೆ ಫಲಿತಾಂಶ ನಿರ್ಣಾಯಕ ಪಾತ್ರವನ್ನು ವಹಿಸಲಿದೆ ಎಂದು ವರದಿಗಳು ತಿಳಿಸಿವೆ. ಕೀಟನಾಶಕವಿತ್ತೆಂದು ಅಲ್ಲಿನ ವರದಿಯೂ ತಿಳಿಸಿದರೆ ಪೊಲೀಸರು ಮಣಿಯ ಮರಣ ಸಹಜವಲ್ಲ ಎಂಬ ತೀರ್ಮಾನಕ್ಕೆ ಬರಬೇಕಾಗುವುದೆನ್ನಲಾಗಿದೆ.
ಮಣಿಯ ಮರಣಕ್ಕೆ ಸಂಬಂಧಿಸಿ 200ರಷ್ಟು ಜನರನ್ನು ಪೊಲೀಸರು ತನಿಖೆ ನಡೆಸಿದ್ದರೂ ಅಸಹಜ ಸಾವೆಂದು ಕಂಡುಬಂದಿರಲಿಲ್ಲ. ಪೋಸ್ಟ್‌ಮಾರ್ಟಂ ವರದಿ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅವರನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಮಣಿಯ ಮರಣ ಸಹಜವಲ್ಲ ಎಂದು ಸಂಬಂಧಿಕರು ಆರೋಪಿಸಿದ ಹಿನ್ನೆಲೆಯಲ್ಲಿ ಭಾರೀ ಎಚ್ಚರಿಕೆ ವಹಿಸಿ ಪೊಲೀಸರು ತೀರ್ಮಾನಕ್ಕೆ ಬರಲಿದ್ದಾರೆಂದು ವರದಿಗಳು ವಿವರಿಸಿವೆ.