ಭಿಕ್ಷುಕನಿಗೆ ಒಲಿದ ಲಾಟರಿ - 65 ಲಕ್ಷ ಜಾಕ್‌ಪಾಟ್!
ತಿರುವನಂತಪುರ: ಬರಡು ನೆಲ ಆಂಧ್ರದಿಂದ ಭಿಕ್ಷಾಟನೆಗಾಗಿ ಕೇರಳಕ್ಕೆ ಬಂದ ಅಂಗವಿಕಲ ಭಿಕ್ಷುಕನಿಗೆ ದೇವರ ನಾಡಿನ ಲಾಟರಿಲಕ್ಷ್ಮಿ ಒಲಿದಿದ್ದಾಳೆ. ಕೇರಳ ರಾಜ್ಯ ಲಾಟರಿಯಲ್ಲಿ 65 ಲಕ್ಷದ ಜಾಕ್‌ಪಾಟ್ ಪಡೆದ ಪೊನ್ನಯ್ಯ ಇದೀಗ ನಿಜಕ್ಕೂ ಹೊನ್ನಿನ ಒಡೆಯ.
ವೆಲ್ಲರದಾ ಉಪನಗರದಲ್ಲಿ ವಾಸಿಸುವ ಈ ವಲಸೆ ಕಾರ್ಮಿಕನಿಗೆ ರಾಜ್ಯ ಸರ್ಕಾರದ ಅಕ್ಷಯಲಕ್ಷ್ಮಿ ಲಾಟರಿಯಲ್ಲಿ 65 ಲಕ್ಷ ಬಹುಮಾನ ಬಂದಿದೆ. ಕಳೆದ ಬುಧವಾರ ನಡೆದ ಡ್ರಾದಲ್ಲಿ 90 ಸಾವಿರ ಮೌಲ್ಯದ ಸಮಾಧಾನಕರ ಬಹುಮಾನಗಳು ಕೂಡಾ ಈತನ ಪಾಲಿಗೆ ಸಿಕ್ಕಿವೆ. ಪೊಲೀಸರು ಆತನ ಕುಟುಂಬದವರಿಗೆ ವಿಷಯ ಮುಟ್ಟಿಸಿದ ಬಳಿಕ ತಂದೆ ಹಾಗೂ ಸಹೋದರ ತಿರುವನಂತಪುರಕ್ಕೆ ಬಂದು ಬಹುಮಾನ ಮೊತ್ತವನ್ನು ಪಡೆಯುವ ವಿಧಿವಿಧಾನ ಪೂರ್ಣಗೊಳಿಸಿ, ಆತನನ್ನು ಮನೆಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ 22 ವರ್ಷದ ವಲಸೆ ಕಾರ್ಮಿಕನಿಗೆ ಕಳೆದ ತಿಂಗಳು ಒಂದು ಕೋಟಿ ರೂಪಾಯಿ ಬಹುಮಾನ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಹಿಂದೆ ಗಾರೆ ಕೆಲಸ ಮಾಡಿಕೊಂಡಿದ್ದ ಅನಂತಪುರ ಜಿಲ್ಲೆಯ ಪೊನ್ನಯ್ಯ, ಅಪಘಾತದಲ್ಲಿ ಕಾಲು ಕಳೆದುಕೊಂಡ ಬಳಿಕ, ಪತ್ನಿ ಮತ್ತು ಮೂವರು ಮಕ್ಕಳನ್ನು ಸಾಕುವ ಸಲುವಾಗಿ ಭಿಕ್ಷಾಟನೆಗೆ ಇಳಿದಿದ್ದ. ವೆಲ್ಲರದ ಸುತ್ತಮುತ್ತಲೂ ಭಿಕ್ಷೆ ಬೇಡಿಕೊಂಡು, ಕೇರಳ- ತಮಿಳುನಾಡು ಗಡಿಯ ಮಾರ್ತಾಂಡಂ ಎಂಬಲ್ಲಿ ಬಸ್ ನಿಲ್ದಾಣದಲ್ಲಿ ರಾತ್ರಿ ತಂಗುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ. ಭಿಕ್ಷೆ ಬೇಡಿದ ಸಂಪಾದನೆಯಲ್ಲಿ ಬಹುಪಾಲನ್ನು ಬ್ಯಾಂಕ್ ಖಾತೆ ಮೂಲಕ ತನ್ನ ಕುಟುಂಬಕ್ಕೆ ಕಳುಹಿಸಿಕೊಡುತ್ತಿದ್ದ ಈತ ಪ್ರತಿ ತಿಂಗಳು ಲಾಟರಿಗಾಗಿ ಒಂದಷ್ಟು ಹಣ ಮೀಸಲಿಡುತ್ತಿದ್ದ. ಈತನಿಗೆ ಲಾಟರಿ ಮಾರಾಟ ಮಾಡಿದ್ದ ಏಜೆಂಟ್, ಈತನಿಗೆ ಪ್ರಥಮ ಬಹುಮಾನ ಬಂದಿರುವ ಬಗ್ಗೆ ಮಾಹಿತಿ ನೀಡಿದರು. ಬಳಿಕ ಆತನ ಸುರಕ್ಷತೆ ದೃಷ್ಟಿಯಿಂದ ಪೊಲೀಸರ ಬಳಿ ಕರೆದೊಯ್ದಿದ್ದ. ಮುಂದಿನ ಪ್ರಕ್ರಿಯೆಗಾಗಿ ಪೊಲೀಸರು ಆತನನ್ನು ಹತ್ತಿರದ ಎಸ್‌ಬಿಐ ಶಾಖೆಗೆ ಕರೆದುಕೊಂಡು ಹೋದರು.