×
Ad

ಬರ: ಕೇಂದ್ರದ ನಿರ್ಲಕ್ಷ

Update: 2016-04-06 23:51 IST

ಈ ಬಾರಿಯ ಬೇಸಿಗೆಯ ಬಿಸಿಲಿಗೆ ಇಡೀ ದೇಶ ತತ್ತರಿಸಿ ಹೋಗಿದೆ. ಕೆರೆ ಕುಂಟೆಗಳು ಬತ್ತಿ ಹೋಗಿವೆ. ಜಲಾಶಯಗಳಲ್ಲಿ ನೀರು ನೆಲಕಚ್ಚಿದೆ. ಅಷ್ಟೇ ಅಲ್ಲ ಬಿಸಿಲಿನ ಬೇಗೆಗೆ ಜನ ಸಾಯುತ್ತಿದ್ದಾರೆ. ಕುಡಿಯುವ ನೀರಿಗಾಗಿ ಎಲ್ಲೆಡೆ ಹಾಹಾಕಾರ ಆರಂಭವಾಗಿದೆ. ಮಹಾರಾಷ್ಟ್ರದ ಲಾತೂರ್‌ನಲ್ಲಿ ನೀರಿಗಾಗಿ ಬಾವಿಯ ಬಳಿ ಜಮಾಯಿಸಿದ್ದ ಜನರ ನಡುವೆ ಪರಸ್ಪರ ಹೊಡೆದಾಟ ನಡೆದು 144ನೆ ವಿಧಿಯನ್ವಯ ನಿಷೇಧಾಜ್ಞೆಯನ್ನು ಜಾರಿಗೆ ತರಲಾಗಿದೆ. ಒಂದು ಬಾರಿ ಐದಕ್ಕಿಂತ ಹೆಚ್ಚು ಕೊಡ ನೀರಿಗೆ ಬರಬಾರದೆಂದು ಕಟ್ಟುಪಾಡು ರೂಪಿಸಲಾಗಿದೆ. ಉತ್ತರ ಕರ್ನಾಟಕದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಕಲಬುರಗಿ, ರಾಯಚೂರು, ಬೀದರ್, ಬಿಜಾಪುರ, ಗದಗ, ಹಾವೇರಿ, ಕೊಪ್ಪಳ ಮುಂತಾದ ಜಿಲ್ಲೆಗಳಲ್ಲಿ ಮಳೆಯಾಗದೆ ಬಾವಿಗಳು ಬತ್ತಿ ಹೋಗಿವೆ. ದನಕರುಗಳು ಕುಡಿಯಲು ನೀರಿಲ್ಲದೆ ವಿಲಿವಿಲಿ ಒದ್ದಾಡುತ್ತಿವೆ. ಜನ ದಿಕ್ಕುಗಾಣದೆ ಮಹಾನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇದು ಕೇವಲ ಒಂದು ರಾಜ್ಯದ ಪರಿಸ್ಥಿತಿಯಲ್ಲ. ದೇಶದ ಅನೇಕ ರಾಜ್ಯಗಳಲ್ಲಿ ಈ ಸ್ಥಿತಿ ಇದೆ. ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳಿಂದ ಮಳೆಯಾಗದೆ ಪರಿಸ್ಥಿತಿ ಅತ್ಯಂತ ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕೈಗೊಳ್ಳಬೇಕಾದ ಕೇಂದ್ರ ಸರಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಇದು ಪ್ರತಿಪಕ್ಷಗಳ ಆರೋಪವಲ್ಲ. ಸುಪ್ರೀಂ ಕೋರ್ಟ್ ಬುಧವಾರ ಈ ಕುರಿತಂತೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ದೇಶದ ಎಲ್ಲೆಡೆ ಬರದ ಛಾಯೆ ಕವಿದಿದೆ. ಜನ ಕಂಗಾಲಾಗಿದ್ದಾರೆ. ಕೇಂದ್ರ ಸರಕಾರ ಏನು ಮಾಡುತ್ತಿದೆ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಕೇಂದ್ರ ಸರಕಾರದ ನಿರ್ಲಕ್ಷದ ಬಗ್ಗೆ ಸ್ವರಾಜ್ಯ ಆಂದೋಲನದ ಯೋಗೇಂದ್ರ ಯಾದವ್ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್ ತಕ್ಷಣ ಪರಿಹಾರ ಕಾರ್ಯ ಕೈಗೊಳ್ಳುವಂತೆ ಮೋದಿ ಸರಕಾರಕ್ಕೆ ನಿರ್ದೇಶನ ನೀಡಿದೆ. ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಂತೆ ಕೇಂದ್ರ ಸರಕಾರ ಸಂಪೂರ್ಣ ನಿಷ್ಕ್ರಿಯವಾಗಿರುವುದು ಸ್ಪಷ್ಟವಾಗಿದೆ. ಬರಪೀಡಿತ ರಾಜ್ಯಗಳಿಗೆ ಅನುದಾನ ನೀಡುವಲ್ಲಿ ಪಕ್ಷಪಾತ ಮಾಡಲಾಗುತ್ತಿದೆ. ಲಭ್ಯವಿರುವ ನೀರನ್ನು ಬಳಕೆ ಮಾಡಿಕೊಳ್ಳುವ ಕುರಿತು ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಸಮನ್ವಯ ಇಲ್ಲದಂತಾಗಿದೆ. ಅಂತಾರಾಜ್ಯ ನದಿ ನೀರಿನ ವ್ಯಾಜ್ಯಗಳನ್ನು ರಾಜಕೀಯ ಪಕ್ಷಗಳು ತಮಗೆ ಅನುಕೂಲವಾಗುವಂತೆ ಬಳಸಿಕೊಳ್ಳುತ್ತಿವೆ. ಕುಡಿಯುವ ನೀರಿನ ವಿಷಯ ಬಂದಾಗ ತಕರಾರು ತೆಗೆಯಬಾರದು ಎಂಬ ನಿಯಮವಿದೆ. ಆದರೂ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವುದಕ್ಕೆ ತಮಿಳುನಾಡು ಸರಕಾರ ಅಡ್ಡಗಾಲು ಹಾಕಿದೆ. ಉತ್ತರಕರ್ನಾಟಕದ ಜನತೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಆ ಭಾಗದ ರೈತರು ಕಳೆದ ನಾಲ್ಕು ತಿಂಗಳಿಂದ ಹೋರಾಡುತ್ತಿದ್ದಾರೆ. ಆದರೂ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಕೇಂದ್ರ ಸರಕಾರ ರಾಜಕೀಯ ಮಾಡುತ್ತಿದೆ. ಗೋವಾದಲ್ಲಿ ಬಿಜೆಪಿ ಸರಕಾರವಿದೆ. ಕೇಂದ್ರದಲ್ಲೂ ಬಿಜೆಪಿ ಸರಕಾರವಿದೆ. ಪ್ರಧಾನಿ ಒಂದೇ ನಿಮಿಷದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಬಹುದು. ಆದರೆ, ಈ ಸಮಸ್ಯೆಯನ್ನು ಬಗೆಹರಿಸುವ ಆಸಕ್ತಿ ಅವರಿಗಿಲ್ಲ. ಮಹದಾಯಿ ನೀರಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ವಪಕ್ಷ ನಿಯೋಗವನ್ನು ದಿಲ್ಲಿಗೆ ತೆಗೆದುಕೊಂಡು ಹೋದರೂ ಪ್ರಧಾನಿ ಮೋದಿ ಅವರು ಗೋವಾದ ವಿರೋಧ ಪಕ್ಷದ ನಾಯಕರ ಮನವೊಲಿಸಿಕೊಂಡು ಬನ್ನಿ ಎಂದು ಉಪದೇಶ ನೀಡಿ ಕಳುಹಿಸಿದರು. ಕುಡಿಯುವ ನೀರಿನ ಪ್ರಶ್ನೆಯಲ್ಲಿ ಪ್ರಧಾನಿ ಸ್ಥಾನದಲ್ಲಿರುವ ವ್ಯಕ್ತಿ ಇಂತಹ ಹೊಣೆಗೇಡಿತನದ ಉತ್ತರ ನೀಡಿದ್ದು, ಭಾರತದ ಇತಿಹಾಸದಲ್ಲಿ ಇದೇ ಮೊದಲು. ಅತ್ಯಂತ ವಿಷಾದದ ಸಂಗತಿಯೆಂದರೆ ರಾಜ್ಯದ ಬಿಜೆಪಿ ನಾಯಕರು ಕೂಡಾ ಕರ್ನಾಟಕದ ಹಿತಾಸಕ್ತಿಯನ್ನು ಕಡೆಗಣಿಸಿ ಮೋದಿ ಅವರು ಹೇಳಿದಂತೆ ಕೇಳುತ್ತಿದ್ದಾರೆ. ಬರಗಾಲದಿಂದ ರಾಜ್ಯದ ಜನತೆ ತತ್ತರಿಸಿ ಹೋಗಿರುವಾಗ ರಾಜಕಾರಣಿಗಳು ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಪರಸ್ಪರ ಕೆಸರೆರಚಾಟದಲ್ಲಿ ನಿರತರಾಗಿದ್ದಾರೆ. ಆಳುವ ಪಕ್ಷದಲ್ಲಿ ಸಂಪುಟ ಪುನಾರಚನೆಯ ಬೇಗುದಿ ಉಂಟಾಗಿದೆ. ಪ್ರತಿಪಕ್ಷ ಬಿಜೆಪಿಯಲ್ಲಿ ಪಕ್ಷದ ಅಧ್ಯಕ್ಷತೆಗೆ ಯಡಿಯೂರಪ್ಪ ಬರದಂತೆ ಹೇಗೆ ತಡೆಯಬೇಕೆಂಬ ರಾಜಕಾರಣ ನಡೆದಿದೆ. ಹೀಗಾಗಿ ಇವರ್ಯಾರಿಗೂ ರಾಜ್ಯದ ಜನತೆಯ ಹಿತಾಸಕ್ತಿಯ ಬಗ್ಗೆ ಆಸಕ್ತಿಯಿಲ್ಲ. ನಮ್ಮ ಪ್ರಧಾನಿಗೆ ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಸಮಯವಿಲ್ಲ. ಸಂಬಂಧಿಸಿದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ಪರಿಹಾರ ಕಾರ್ಯಗಳ ಬಗ್ಗೆ ಪರಾಮರ್ಶೆ ನಡೆಸುವ ಯತ್ನವನ್ನೂ ಅವರು ಮಾಡಿಲ್ಲ. ಸದಾ ವಿದೇಶ ಪ್ರವಾಸದಲ್ಲಿರುವ ಮೋದಿ ಅವರಿಗೆ ದೇಶದ ಆಂತರಿಕ ಸಮಸ್ಯೆಗಳ ಬಗ್ಗೆ ಆಲೋಚಿಸಲು ಸಮಯವಿಲ್ಲ. ಇನ್ನು ಉಳಿದ ಮಂತ್ರಿಗಳು ಭಾರತ್ ಮಾತಾ ಕಿ ಜೈ ಎಂಬ ಘೋಷಣೆಯ ಸುತ್ತ ವಿವಾದವನ್ನು ಹುಟ್ಟುಹಾಕುತ್ತ ಸಾಮಾಜಿಕ ನೆಮ್ಮದಿ ಕೆಡಿಸುತ್ತಿದ್ದಾರೆ. ಇದು ರಾಜಕಾರಣಿಗಳ ಸ್ಥಿತಿಯಾದರೆ, ಒಟ್ಟಾರೆ ನಮ್ಮ ಸಮಾಜ ಬರಪೀಡಿತ ಜನತೆಯ ಬಗ್ಗೆ ತೋರಿಸುತ್ತಿರುವ ಉದಾಸೀನ ಮನೋಭಾವ ಕೂಡಾ ಆತಂಕಕಾರಿಯಾಗಿದೆ. ಮಹಾರಾಷ್ಟ್ರದ ಮರಾಠವಾಡದಂತಹ ಪ್ರದೇಶದಲ್ಲಿ ನೀರಿಗಾಗಿ ಜನ ಬಾಯಿಬಾಯಿ ಬಿಡುತ್ತಿದ್ದಾರೆ. ಇನ್ನೊಂದೆಡೆ ಐಪಿಎಲ್ ಪಂದ್ಯಗಳಿಗಾಗಿ ಸಾವಿರಾರು ಲೀಟರ್ ನೀರನ್ನು ನೆಲಕ್ಕೆ ಚೆಲ್ಲಲಾಗುತ್ತಿದೆ. ಇಂತಹ ಅವಿವೇಕಕ್ಕೆ ಸರಕಾರವೂ ಅವಕಾಶ ಮಾಡಿಕೊಡುತ್ತಿದೆ. ಈ ಬಗ್ಗೆ ಮಹಾರಾಷ್ಟ್ರ ಕ್ರಿಕೆಟ್ ಮಂಡಳಿಯನ್ನು ಬುಧವಾರ ತರಾಟೆಗೆ ತೆಗೆದುಕೊಂಡಿರುವ ಬಾಂಬೆ ಹೈಕೋರ್ಟ್ "ನೀವು ಈ ರೀತಿ ನೀರನ್ನು ವ್ಯರ್ಥಮಾಡುತ್ತೀರಿ? ನಿಮಗೆ ಜನರು ಹೆಚ್ಚು ಮುಖ್ಯವೋ ಅಥವಾ ಐಪಿಎಲ್ ಮುಖ್ಯವೋ?" ಎಂದು ಪ್ರಶ್ನಿಸಿದೆ. ಇನ್ನಾದರೂ ಈ ನೀರಿನ ದುರ್ಬಳಕೆಯನ್ನು ತಡೆಯಬೇಕಾಗಿದೆ. ಇಂತಹ ಸ್ಥಿತಿಯಲ್ಲಿ ಹವಾಮಾನ ತಜ್ಞರು ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಆಗುತ್ತದೆ ಎಂದು ಹೇಳಿಕೆ ನೀಡಿ ಆಸೆ ಹುಟ್ಟಿಸಿದ್ದಾರೆ. ಆದರೆ, ಇದೊಂದು ರೀತಿ ಮೂಗಿಗೆ ತುಪ್ಪ ಸವರಿದಂತೆ. ಹೊತ್ತಿಗೆ ಮುಂಚೆ ಬೇಸಿಗೆ ಆರಂಭವಾಗಿ ಭೂಮಿ ಕಾಯ್ದು ಸಮುದ್ರದ ಕಡೆಗಳಿಂದ ಮೋಡಗಳನ್ನು ಸೆಳೆದುಕೊಳ್ಳುತ್ತದೆ ಎಂಬುದೆನೋ ನಿಜ. ಅದರೆ, ಈ ಮಳೆ ಜುಲೈ ತಿಂಗಳ ಕೊನೆಯವರೆಗೆ ಸುರಿಯುವುದಿಲ್ಲ ಎಂಬುದು ಹಿಂದಿನ ಅನುಭವಗಳಿಂದ ಸ್ಪಷ್ಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News