×
Ad

ಪನಾಮಾ ದಾಖಲೆ: ಸರಕಾರ ಪಂಗನಾಮ ಹಾಕೀತು ಜೋಕೆ..

Update: 2016-04-12 22:44 IST

ಏನೂ ಬದಲಾಗುವುದಿಲ್ಲ ಎಂಬ ಪಲಾಯನವಾದಕ್ಕೆ ನಾವು ಮೊರೆ ಹೋದರೆ, ಅಂಥ ಕಾನೂನುಬಾಹಿರ ಚಟುವಟಿಕೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲು ನಾವು ಕೂಡಾ ಅವಕಾಶ ಮಾಡಿಕೊಟ್ಟಂತಾಗುತ್ತದೆ. ನಾಗರಿಕರು ತಮ್ಮನ್ನು ತಾವೇ ಕೀಳಂದಾಜು ಮಾಡಿಕೊಂಡರೆ, ಸರಕಾರಗಳು ತಮ್ಮ ನಿಷಕ್ರೆಿಯತೆಯನ್ನು ಮುಂದುವರಿಸುತ್ತವೆ.

ಜಾಗತಿಕ ಮಟ್ಟದಲ್ಲಿ ಕಪ್ಪುಹಣದ ಹರಿವಿನ ಬಗ್ಗೆ ರಹಸ್ಯ ಮಾಹಿತಿ ಸೋರಿಕೆ ಮಾಡಿ, ವಿಶ್ವಾದ್ಯಂತ ಆರ್ಥಿಕ ವಲಯದಲ್ಲಿ ತಲ್ಲಣ ಸೃಷ್ಟಿಸಿದ ಪನಾಮಾ ದಾಖಲೆಗಳನ್ನು ಸ್ಫೋಟಕ ಮಾಹಿತಿ ಎಂದು ಪರಿಗಣಿಸಬಹುದು. ಲಂಚ, ಶಸ್ತ್ರಾಸ್ತ್ರ ಮಾರಾಟ, ತೆರಿಗೆ ಕಳ್ಳತನ, ಹಣಕಾಸು ವಂಚನೆ ಹಾಗೂ ಮಾದಕ ವಸ್ತುಗಳ ಕಳ್ಳಸಾಕಣೆಯಲ್ಲಿ ಬಂದ ಹಣವನ್ನು ತೆರಿಗೆ ಸ್ವರ್ಗಗಳಲ್ಲಿ ಹೇಗೆ ಹುದುಗಿಸಲಾಗುತ್ತದೆ ಎನ್ನುವುದನ್ನು ಇದು ತೆರೆದಿಟ್ಟಿದೆ. ಕೆಲ ವರ್ಷಗಳ ಹಿಂದೆ ಜಾಗತಿಕ ಮಟ್ಟದಲ್ಲಿ ತನಿಖಾ ಪತ್ರಕರ್ತರು ಸ್ವಿಸ್ ಬ್ಯಾಂಕ್ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ ಬಳಿಕ ಎಚ್‌ಎಸ್‌ಬಿಸಿ ತೆರಿಗೆ ಕಳ್ಳತನ ವರೆಗೂ ತನಿಖೆ ಮುಂದುವರಿದಿತ್ತು. ಆದರೆ ನಾಗರಿಕರಾಗಿ ಇಂತಹ ಮಾಹಿತಿ ಸ್ಫೋಟಕ್ಕೆ ನಾವು ಹೇಗೆ ಸ್ಪಂದಿಸಬೇಕು?

ಏನೂ ಬದಲಾಗುವುದಿಲ್ಲ ಎಂಬ ಪಲಾಯನವಾದಕ್ಕೆ ನಾವು ಮೊರೆ ಹೋದರೆ, ಅಂಥ ಕಾನೂನುಬಾಹಿರ ಚಟುವಟಿಕೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲು ನಾವು ಕೂಡಾ ಅವಕಾಶ ಮಾಡಿಕೊಟ್ಟಂತಾಗುತ್ತದೆ. ನಾಗರಿಕರು ತಮ್ಮನ್ನು ತಾವೇ ಕೀಳಂದಾಜು ಮಾಡಿಕೊಂಡರೆ, ಸರಕಾರಗಳು ತಮ್ಮ ನಿಷ್ಕ್ರಿಯತೆಯನ್ನು ಮುಂದುವರಿಸುತ್ತವೆ. ಸಾಮಾನ್ಯವಾಗಿ ಸಾರ್ವಜನಿಕ ತಿಳುವಳಿಕೆ ಹಾಗೂ ವಿಚಕ್ಷಣಾ ಮನೋಭಾವವನ್ನು ಸಾರಾಸಗಟಾಗಿ ಕೀಳಂದಾಜು ಮಾಡಲಾಗುತ್ತಿದೆ. ಆದರೆ ನಾವು ಗಮನ ಹರಿಸಬೇಕಿರುವುದು ಅದು ಎಲ್ಲಿ ಉಪಯೋಗಕ್ಕೆ ಬರಬೇಕು ಹಾಗೂ ನಾವು ಸಮರ್ಪಕ ಪ್ರಶ್ನೆಯನ್ನು ಎತ್ತುತ್ತೇವೆಯೇ ಎಂಬ ಬಗ್ಗೆ.

ಇಂತಹ ರಹಸ್ಯ ಕಪ್ಪುಚುಕ್ಕೆಗಳಿಂದಲೇ ಪ್ರತೀ ಬಾರಿಯೂ ಬೆಳಕಿನ ಕಿರಣ ಮೂಡುವುದು. ಸಾರ್ವಜನಿಕ ವ್ಯಕ್ತಿಗಳ ಹೆಸರುಗಳು ಮೇಲ್ನೋಟಕ್ಕೆ ಕಾಣುತ್ತಿದ್ದು, ನಾವು ಈ ಬಗ್ಗೆ ಗಮನ ಹರಿಸಬೇಕಿದೆ. ಆದರೆ ಇದು ಕೇವಲ ಶ್ರೀಮಂತರು ಅಥವಾ ಖ್ಯಾತನಾಮರನ್ನು ಶಿಕ್ಷಿಸುವುದಕ್ಕೆ ಸೀಮಿತವಾಗಬಾರದು. ನಾವು ತುರ್ತಾಗಿ ಸಮಸ್ಯೆಯ ಸ್ವರೂಪವನ್ನು ವ್ಯವಸ್ಥಿತವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಇಂತಹ ಸೆಲೆಬ್ರಿಟಿಗಳನ್ನು ಹೆಸರಿಸುವುದು ಹಾಗೂ ಅವಮಾನಿಸುವುದರಿಂದ ನಾವು ಏನೂ ಸಾಧನೆ ಮಾಡಿದಂತಾಗುವುದಿಲ್ಲ. ಕಾನೂನು ವ್ಯವಸ್ಥೆ ಹಾಗೂ ಆಡಳಿತ ಯಂತ್ರ ಕೂಡಾ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಸರಕಾರಿ ತನಿಖೆಗಳು ಇಂತಹ ಸಂರಚನೆಗಳನ್ನು ಪತ್ತೆ ಮಾಡಿ ಏಕೆ ಛಿದ್ರಗೊಳಿಸಬಾರದು ಎನ್ನುವುದನ್ನು ತೋರಿಸಿಕೊಡಬೇಕು.

ಹಣಕಾಸು ರಹಸ್ಯ ಸೂಚ್ಯಂಕವು ಸಾಗರೋತ್ತರ ಹಣಕಾಸು ವಹಿವಾಟಿನ ಪ್ರಮಾಣ, ರಹಸ್ಯ ಹಾಗೂ ವ್ಯಾಪ್ತಿಯನ್ನು ಅವಲಂಬಿಸಿದೆ. ಸ್ವಿಟ್ಝರ್‌ಲೆಂಡ್ ಅಗ್ರಸ್ಥಾನಿಯಾಗಿದ್ದರೆ ಪನಾಮಾ 13ನೆ ಸ್ಥಾನದಲ್ಲಿದೆ. ಸುಮಾರು 21 ದಶಸಹಸ್ರ ಕೋಟಿ ಡಾಲರ್‌ನಿಂದ 32 ದಶಸಹಸ್ರ ಕೋಟಿ ಡಾಲರ್‌ವರೆಗೆ ಖಾಸಗಿ ಹಣಕಾಸು ಸಂಪನ್ಮೂಲ ಪತ್ತೆಯಾಗಿದೆ. ಇವೆಲ್ಲವೂ ತೆರಿಗೆ ತಪ್ಪಿಸಿರುವ ಅಥವಾ ಲಘು ತೆರಿಗೆ ವಿಧಿಸಲ್ಪಟ್ಟ ವಿಶ್ವಾದ್ಯಂತ ಬೇರೆ ಬೇರೆ ದೇಶಗಳ ಹಣ.
ಜೇಟ್ಲಿ ಪ್ರತಿಪಾದನೆ
ಇಂಡಿಯನ್ ಎಕ್ಸ್‌ಪ್ರೆಸ್ ಹಾಗೂ ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ ಜಂಟಿಯಾಗಿ ನಡೆಸಿದ ತನಿಖೆಯಿಂದ ಸ್ಪಷ್ಟವಾಗಿ ತಿಳಿದುಬರುವ ಅಂಶವೆಂದರೆ, ಭಾರತ ಸ್ವಿಟ್ಝರ್‌ಲೆಂಡ್ ಹಾಗೂ ಪನಾಮಾ ಎರಡೂ ಕಡೆಗಳಲ್ಲಿ ಠೇವಣಿ ಇಟ್ಟಿದೆ. ಭಾರತೀಯರು ಇತರ ರಹಸ್ಯ ತಾಣಗಳಿಗೂ ಹಣ ಹರಿಸಿರುವುದಲ್ಲಿ ಯಾವ ಸಂಶಯವೂ ಇಲ್ಲ. ಸ್ಥಳೀಯ ಭಾರತೀಯ ಮಧ್ಯವರ್ತಿಗಳು ವಿಸ್ತೃತವಾದ ಜಾಗತಿಕ ಜಾಲದ ಜತೆ ಸಂಪರ್ಕ ಹೊಂದಿದ್ದಾರೆ. ಇದನ್ನು ಪತ್ತೆ ಮಾಡುವುದು ಹಾಗೂ ಅನಾವರಣಗೊಳಿಸುವುದು ಕಷ್ಟ. ನಾವು ಕಪ್ಪುಹಣವನ್ನು ಕೇವಲ ರಹಸ್ಯ ಖಾತೆಗಳ ಜಿಜ್ಞಾಸೆಯ ಪ್ರಕರಣಗಳು ಎಂದು ಪರಿಗಣಿಸಿದೆ, ಇದನ್ನು ನಾವು ದೈತ್ಯ ಉದ್ಯಮ ಎಂದು ಪರಿಗಣಿಸಬೇಕಾಗುತ್ತದೆ. ಇಲ್ಲದಿದ್ದರೆ ಸರಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಮಾಡುವಲ್ಲಿ ನಾವು ವಿಫಲರಾಗುತ್ತೇವೆ.

 ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಇರುವ ಕಾನೂನುಗಳು ಸಾಧಿಸುವುದು ಅಷ್ಟರಲ್ಲೇ ಇದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇಂತಹ ಹಣಕಾಸು ಅಪರಾಧಗಳನ್ನು ಮಟ್ಟಹಾಕಲು ಕಟ್ಟುನಿಟ್ಟಿನ ಪ್ರತ್ಯೇಕ ಕಾನೂನುಗಳನ್ನು ರೂಪಿಸಿದರೆ ಮಾತ್ರ ಇದು ಸಾಧ್ಯವಾದೀತು. ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡುವ ಕೆಲ ಸಂಸದರೇ ದುರ್ಬಲ ನಿಯಂತ್ರಣ ವ್ಯವಸ್ಥೆಗೆ ಬೆಂಬಲಿಸುತ್ತಿರುವುದು ಸುಳ್ಳಲ್ಲ.

ಪನಾಮಾ ದಾಖಲೆಗಳ ಬಗ್ಗೆ ಪ್ರತಿಕ್ರಿಯಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಅಂತಾರಾಷ್ಟ್ರೀಯ ಸ್ವಯಂ ಮಾಹಿತಿ ವಿನಿಮಯ ಒಪ್ಪಂದಗಳು ಈ ಎಲ್ಲ ಸಮಸ್ಯೆಗೆ ಪರಿಹಾರ ಎಂದಿದ್ದಾರೆ. ಆದರೆ ಇದು ಅವಾಸ್ತವಿಕ ಪ್ರತಿಪಾದನೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ರೂಪಿಸಿರುವ ಈ ಬಹುರಾಷ್ಟ್ರೀಯ ಒಪ್ಪಂದ ಪ್ರಸ್ತಾಪವನ್ನು ಪನಾಮಾ ಇದುವರೆಗೂ ಒಪ್ಪಿಕೊಂಡಿಲ್ಲ. ಜೇಟ್ಲಿ ಹೇಳುತ್ತಿರುವ ಒಪ್ಪಂದಗಳಲ್ಲಿ ಹಲವು ಲೋಪಗಳಿದ್ದು, ಇದು ತಪ್ಪಿತಸ್ಥರಿಗೆ ತಪ್ಪಿಸಿಕೊಳ್ಳಲು ದಾರಿ ಮಾಡಿಕೊಡುವುದು ನಿಸ್ಸಂದೇಹ. ಇದರ ಜತೆಗೆ, ಒಂದು ವಿಸ್ತೃತವಾದ, ಪ್ರಬಲ ತಜ್ಞರ ಉದ್ಯಮವೇ, ತಮಗಾಗಿ ಕಾರ್ಯನಿರ್ವಹಿಸುವ ಲಾಬಿದಾರರ ಹಾಗೂ ರಾಜಕಾರಣಿಗಳನ್ನು ಅವಲಂಬಿಸಿರುವುದರಿಂದ ಅದನ್ನು ಮುಚ್ಚಿಹಾಕುವುದು ಸುಲಭ.

ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸರಕಾರ ಹಾಗೂ ತನಿಖಾ ಸಂಸ್ಥೆಗಳು ನೀಡುವ ಭರವಸೆಗೆ ಮಾಧ್ಯಮಗಳು ತೃಪ್ತಿಪಟ್ಟುಕೊಳ್ಳಬಾರದು. ನಿರ್ದಿಷ್ಟವಾಗಿ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಚಿತಪಡಿಸುವವರೆಗೂ ಇಂತಹ ಹೇಳಿಕೆಗಳು ಪ್ರಮುಖ ಸುದ್ದಿಯೂ ಆಗಬಾರದು. ಹಿಂದಿನ ವೈಫಲ್ಯಗಳಿಗೆ ಸರಕಾರವನ್ನು ಪ್ರಶ್ನಿಸಬೇಕು. ಹಾಗೂ ಇದು ವಿಫಲಗೊಳ್ಳುವ ಸಲುವಾಗಿಯೇ ಮಾಡಿದ ವೈವಿಧ್ಯಮಯ ಕಾನೂನುಗಳ ಬಗ್ಗೆ ಕೇಳಬೇಕು.

ಕೆಲ ತಪ್ಪಿತಸ್ಥರನ್ನು ಹಿಡಿದು, ದೊಡ್ಡ ಕುಳಗಳನ್ನು ಬಚಾವ್ ಮಾಡುವುದು ಸಾಮಾನ್ಯವಾಗಿ ನಡೆದುಕೊಂಡುಬಂದ ಪದ್ಧತಿ. ಅತಿಶ್ರೀಮಂತರು ಹಾಗೂ ಕಾರ್ಪೊರೇಟ್ ಉದ್ಯಮಿಗಳು ತೆರಿಗೆ ಪಾವತಿಸದಿದ್ದರೆ, ಸ್ಥಳೀಯ ಆರ್ಥಿಕತೆಗೆ ಹಿನ್ನಡೆಯಾಗುತ್ತದೆ ಹಾಗೂ ಶ್ರೀಮಂತರು ಹಾಗೂ ಬಡವರ ನಡುವಿನ ಅಂತರ ಹೆಚ್ಚುತ್ತದೆ. ಕೆಲ ರಾಜಕಾರಣಿಗಳು ಮತ್ತು ಉದ್ಯಮಿಗಳನ್ನು ಶಿಕ್ಷಿಸುವುದು ಸಾಂಕೇತಿಕ ಮಾತ್ರ. ನಾವು ಇನ್ನಷ್ಟು ಹೆಚ್ಚಿನದನ್ನು ನಿರೀಕ್ಷಿಸಬೇಕು. ಎಚ್‌ಎಸ್‌ಬಿಸಿ ಪಟ್ಟಿಯಲ್ಲಿರುವ ಅಂಬಾನಿಗಳ ವಿರುದ್ಧ, ಪನಾಮಾ ಪಟ್ಟಿಯಲ್ಲಿರುವ ಅದಾನಿಗಳ ವಿರುದ್ಧ ತನಿಖೆ ಕೈಗೊಳ್ಳುವ ಬಗ್ಗೆ ಸರಕಾರದ ಸ್ಪಷ್ಟ ನಿರ್ಧಾರ ಏನು?

ನೈತಿಕವಲ್ಲ; ಕಾನೂನಾತ್ಮಕ

ಸೌಲಭ್ಯ ವಂಚನೆ ಹಾಗೂ ಭ್ರಷ್ಟಾಚಾರಕ್ಕೆ ನಮ್ಮನ್ನು ನಾವು ಶಪಿಸಿಕೊಳ್ಳುವುದರಿಂದ ಯಾವ ಉಪಯೋಗವೂ ಆಗದು. ಸಾಗರೋತ್ತರ ಉದ್ದಿಮೆಗಳ ದೊಡ್ಡ ಕುಳಗಳು ಹಾಗೂ ಶ್ರೀಮಂತ ದೇಶಗಳಲ್ಲಿ ನೆಲೆ ನಿಂತಿರುವ ದೈತ್ಯ ರಕ್ಕಸ ಬ್ಯಾಂಕುಗಳನ್ನು ನಾವು ಸಾಮಾನ್ಯವಾಗಿ ಭ್ರಷ್ಟ ಎಂದು ತಿಳಿಯುವುದಿಲ್ಲ. ತೀರಾ ಸಂಕಷ್ಟದಲ್ಲಿರುವ ಬಡರಾಷ್ಟ್ರಗಳಿಂದ ಹಿಡಿದು, ವಿಶ್ವದ ಎಲ್ಲೆಡೆಯಿಂದ ದೊಡ್ಡ ಕುಳಗಳಿಗೆ ಅವು ಗಾಳ ಹಾಕಿರುತ್ತವೆ. ಇದರಲ್ಲಿ ಇಂತಹ ಬ್ಯಾಂಕುಗಳ ಪಾತ್ರವೂ ಇದೆ. ಭ್ರಷ್ಟಾಚಾರದ ವಿರುದ್ಧ ಸಮರ ಸಾಧ್ಯವೇ ಇಲ್ಲ ಎಂದು ನಾವು ಕೈಚೆಲ್ಲಬಾರದು.
ಇಲ್ಲಿ ತೀರಾ ಗೊಂದಲಕಾರಿ ಅಂಶವೆಂದರೆ, ಇವುಗಳಲ್ಲಿ ಕೆಲ ಚಟುವಟಿಕೆಗಳು ತಾಂತ್ರಿಕವಾಗಿ ಕಾನೂನುಬದ್ಧವಾಗಿರಬಹುದು. ಆದರೆ ಕಾನೂನುಬದ್ಧವಾಗಿರುವ ಎಲ್ಲವೂ ನೈತಿಕವಾಗಿ ಇರಬೇಕಿಲ್ಲ. ಕಾನೂನನ್ನು ತೆರಿಗೆ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡುವ ರೀತಿಯಲ್ಲಿ ವಿಶ್ಲೇಷಿಸುವುದರಿಂದ ಅದು ಸಾರ್ವಜನಿಕರಲ್ಲಿ ಗೊಂದಲಮಯ ಅಭಿಪ್ರಾಯ ಮೂಡಲು ಕಾರಣವಾಗುತ್ತದೆ. ಇದು ಸಹಿಸಿಕೊ ಳ್ಳುವ ಮತ್ತು ಶಿಕ್ಷಿಸದಿರುವ ಸಂಸ್ಕೃತಿಯನ್ನು ಬೆಳೆಸಲು ಕಾರಣವಾಗುತ್ತದೆ. ಕಪ್ಪುಹಣದ ಕಾನೂನಿನಿಂದ ಹಿಡಿದು ಆರ್‌ಬಿಐ ನಿಯಂತ್ರಣದವರೆಗೆ ಎಲ್ಲವನ್ನೂ ಪ್ರಶ್ನಿಸಬೇಕು.

ಪನಾಮಾ ದಾಖಲೆಗಳಂತಹ ದೊಡ್ಡ ಮಾಹಿತಿ ಸ್ಫೋಟ ಸಂಭವಿಸಿದಾಗ, ನಾಗರಿಕ ಸಮಾಜ, ಸರಕಾರಗಳು ನೀಡುವ ಭರವಸೆಗಳು ಹೆಚ್ಚು ಪಾರದರ್ಶಕವಾಗಿರುವಂತೆ ಸರಕಾರಗಳ ಮೇಲೆ ಒತ್ತಡ ತರಬೇಕು. ಸರಕಾರಗಳಳು ತೆರಿಗೆ ಸ್ವರ್ಗಗಳ ರಹಸ್ಯದ ವಿರುದ್ಧ ಹೋರಾಟಕ್ಕೆ ಇಳಿದರೂ, ಅದು ಪಾರದರ್ಶಕವಾಗಿರದಿದ್ದರೆ ಕೇವಲ ಬೂಟಾಟಿಕೆಯಾಗುತ್ತದೆ. ಈ ಸಂಬಂಧ ಉತ್ತಮ ಒಪ್ಪಂದಗಳಿಗೆ ಏಕೆ ಕಠಿಣ ಪರಿಶ್ರಮ ವಹಿಸುವುದಿಲ್ಲ?

ರಾಜಕೀಯ ಆಡಳಿತ ಹಾಗೂ ಶ್ರೀಮಂತ, ಪ್ರಭಾವಿಗಳ ನಡುವಿನ ಅಪವಿತ್ರ ಮೈತ್ರಿಯನ್ನು ನಾವು ಅಮೂರ್ತ ವಿಧಾನದಿಂದ ನೋಡುತ್ತೇವೆ. ಆದರೆ ಈ ಬಾರಿ ಸ್ಫೋಟಗೊಂಡಿರುವ ರಹಸ್ಯಗಳು ಅತ್ಯಂತ ಪ್ರಬಲ ಅಂಶಗಳನ್ನು ಹೊಂದಿವೆ. ಈ ವೇಳೆಯಲ್ಲಿ ನಾವು ಅವರನ್ನು ಹಿಡಿದು ಹೊಣೆಗಾರರನ್ನಾಗಿ ಮಾಡಬೇಕು.


ಹಣಕಾಸು ರಹಸ್ಯ ಸೂಚ್ಯಂಕವು ಸಾಗರೋತ್ತರ ಹಣಕಾಸು ವಹಿವಾಟಿನ ಪ್ರಮಾಣ, ರಹಸ್ಯ ಹಾಗೂ ವ್ಯಾಪ್ತಿಯನ್ನು ಅವಲಂಬಿಸಿದೆ. ಸ್ವಿಟ್ಝರ್‌ಲೆಂಡ್ ಅಗ್ರಸ್ಥಾನಿಯಾಗಿದ್ದರೆ ಪನಾಮಾ 13ನೆ ಸ್ಥಾನದಲ್ಲಿದೆ. ಸುಮಾರು 21 ದಶಸಹಸ್ರ ಕೋಟಿ ಡಾಲರ್‌ನಿಂದ 32 ದಶಸಹಸ್ರ ಕೋಟಿ ಡಾಲರ್‌ವರೆಗೆ ಖಾಸಗಿ ಹಣಕಾಸು ಸಂಪನ್ಮೂಲ ಪತ್ತೆಯಾಗಿದೆ. ಇವೆಲ್ಲವೂ ತೆರಿಗೆ ತಪ್ಪಿಸಿರುವ ಅಥವಾ ಲಘು ತೆರಿಗೆ ವಿಧಿಸಲ್ಪಟ್ಟ ವಿಶ್ವಾದ್ಯಂತ ಬೇರೆ ಬೇರೆ ದೇಶಗಳ ಹಣ.

Writer - ನೂಪುರ‍್ ತಿವಾರಿ

contributor

Editor - ನೂಪುರ‍್ ತಿವಾರಿ

contributor

Similar News