×
Ad

ಜನಸಂಖ್ಯೆ ಸಮುದಾಯದ ಶಕ್ತಿಯೇ?

Update: 2016-04-12 22:55 IST

ಮುದಿನ ಮೇ ತಿಂಗಳಲ್ಲಿ ಜಾತಿ ಸಮೀಕ್ಷೆಯ ವರದಿ ಹೊರಬೀಳಲಿದೆ ಎಂದು ಸಮಾಜ ಕಲ್ಯಾಣ ಸಚಿವರು ಘೋಷಿಸಿದ ಬೆನ್ನಿಗೇ ಸಮೀಕ್ಷೆಯ ಪ್ರಾಥಮಿಕ ವರದಿ ಕೆಲವು ಪತ್ರಿಕೆಗಳಲ್ಲಿ ಸೋರಿಕೆಯಾಗಿದೆ ಎಂಬ ವದಂತಿಗಳು ಹರಡಿವೆ. ಆ ಸೋರಿಕೆಯಾದ ವರದಿಯ ಪ್ರಕಾರ ರಾಜ್ಯದಲ್ಲಿ ದಲಿತರು ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದಾರೆ. ಜನಸಂಖ್ಯೆಯಲ್ಲಿ ಮುಸ್ಲಿಮರಿಗೆ ಎರಡನೆ ಸ್ಥಾನವಿದೆ. ಹಾಗೆಯೇ ಲಿಂಗಾಯತ, ಗೌಡ, ಕುರುಬ ಸಮುದಾಯಗಳೂ ತಮ್ಮ ತಮ್ಮ ಜನಸಂಖ್ಯೆಗಾಗಿ ಸಂಭ್ರಮ ಪಡುತ್ತಿವೆ. ಇದೇ ಸಂದರ್ಭಗಳಲ್ಲಿ ಈ ವರದಿ ಸೋರಿಕೆಯನ್ನೇ ಸರಕಾರ ತಳ್ಳಿ ಹಾಕಿದೆ. ಇನ್ನೂ ಸಮೀಕ್ಷೆ ಕಾರ್ಯ ಪೂರ್ಣ ಮುಗಿದಿಲ್ಲ. ಅದಲ್ಲದೇ, ಸಮೀಕ್ಷಾ ವರದಿಯೂ ಅಂತಿಮಗೊಂಡಿಲ್ಲ. ವರದಿ ಬಹಿರಂಗವಾಗಿದೆ ಎಂದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ವಿವರ ಸತ್ಯಕ್ಕೆ ದೂರವಾದುದು ಎಂದೂ ಸರಕಾರ ಹೇಳಿದೆ. ಇಷ್ಟಕ್ಕೂ ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ತೀರಾ ಅನಿರೀಕ್ಷಿತವೇನಲ್ಲ. ಈ ನಾಡಿನಲ್ಲಿ ಚದುರಿ ಹೋಗಿರುವ ವಿವಿಧ ದಲಿತ ಸಮುದಾಯವನ್ನು ಲೆಕ್ಕ ಹಾಕಿದರೆ, ಅವರ ಜನಸಂಖ್ಯೆ ಪ್ರಥಮ ಸ್ಥಾನದಲ್ಲಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಲಿಂಗಾಯತ ಸಮುದಾಯವೇ ಈವರೆಗೆ ರಾಜ್ಯದಲ್ಲಿ ಪ್ರಬಲ ಸಮುದಾಯವೆಂದು ಗುರುತಿಸಲ್ಪಡುತ್ತಿತ್ತು. ಇದಾದ ಬಳಿಕ ಒಕ್ಕಲಿಗ ಸಮುದಾಯ ಪ್ರಾಬಲ್ಯವನ್ನು ಪಡೆದಿತ್ತು. ಇದೀಗ ದಲಿತರು ಪ್ರಥಮ ಸ್ಥಾನದಲ್ಲಿದ್ದಾರೆ ಎನ್ನುವ ಕಾರಣಕ್ಕೆ ಅವರು ರಾಜಕೀಯವಾಗಿ ನಿರ್ಣಾಯಕರಾಗುತ್ತಾರೆ ಎಂದು ಹೇಳುವಂತಿಲ್ಲ. ಯಾಕೆಂದರೆ, ಕರ್ನಾಟಕ ರಾಜ್ಯ ರಾಜಕಾರಣದಲ್ಲಿ, ದಲಿತರು ರಾಜಕೀಯ ಶಕ್ತಿಯಾಗಿ ಇನ್ನೂ ಗುರುತಿಸಲ್ಪಟ್ಟಿಲ್ಲ. ಈಗಲೂ ಕರ್ನಾಟಕದಲ್ಲಿ ರಾಜಕೀಯವನ್ನು ನಿಯಂತ್ರಿಸುತ್ತಿರುವುದು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯವೇ ಆಗಿದೆ. ಇದೇ ಸಂದರ್ಭದಲ್ಲಿ ಮರೆಯಲ್ಲಿ ನಿಂತು ತಂತ್ರಗಾರಿಕೆಯಿಂದ ಬ್ರಾಹ್ಮಣ ಸಮುದಾಯವೂ ರಾಜಕೀಯವನ್ನು ‘ಹಿಂದುತ್ವ’ದ ಹೆಸರಿನಲ್ಲಿ ತನಗೆ ಪೂರಕವಾಗಿ ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಉಳಿದ ಸಮುದಾಯಗಳು ಜನಸಂಖ್ಯೆಯಲ್ಲಿ ಪ್ರಬಲರಾಗಿದ್ದರೂ ರಾಜಕೀಯದಲ್ಲಿ ಪ್ರಬಲರಾಗಿಲ್ಲ. ಆದುದರಿಂದ ಜನಸಂಖ್ಯೆಯ ಬಲವನ್ನು ಮುಂದಿಟ್ಟುಕೊಂಡು ನಾವು ಸಮರ್ಥರು ಎಂದು ದಲಿತರು, ಮುಸ್ಲಿಮರಂತಹ ಶೋಷಿತ ಸಮುದಾಯಗಳು ಸಂಭ್ರಮ ಪಡುವುದರಲ್ಲಿ ಯಾವ ಅರ್ಥವೂ ಇಲ್ಲ. ಯಾವುದೇ ಜನರು ಸಂಘಟಿತವಾಗಬೇಕು, ಶಕ್ತಿಯಾಗಬೇಕು, ಸಂಪನ್ಮೂಲವಾಗಬೇಕು. ಆಗ ಮಾತ್ರ ಅವರ ಜನಸಂಖ್ಯೆಗಾಗಿ ಯಾವುದೇ ಸಮುದಾಯ ಸಂಭ್ರಮಿಸಬಹುದು. ಅನಕ್ಷರತೆ, ಅಜ್ಞಾನ, ಬಡತನ, ಜಾತೀಯತೆ ಇವುಗಳ ನಡುವೆ ಸಿಲುಕಿಕೊಂಡ ಯಾವುದೇ ಸಮುದಾಯದ ಜನಸಂಖ್ಯೆಗಳಿಂದ ವಿಶೇಷ ಲಾಭವೇನೂ ಇಲ್ಲ. ಈ ಸಮುದಾಯ ಎಷ್ಟರಮಟ್ಟಿಗೆ ಶಿಕ್ಷಣವನ್ನು ಪಡೆದಿವೆ, ಎಷ್ಟರ ಮಟ್ಟಿಗೆ ಅಭಿವೃದ್ಧಿಗೊಂಡಿವೆ ಎನ್ನುವುದನ್ನು ಈ ವರದಿ ಬಹಿರಂಗ ಪಡಿಸುವವರೆಗೂ ನಾವು ಜನಸಂಖ್ಯಾ ಬಲಾಬಲವನ್ನು ಇಟ್ಟುಕೊಂಡು ಸಂಭ್ರಮ ಪಡುವುದರಲ್ಲಿ ಅರ್ಥವಿಲ್ಲ.

 ಕೆಲವರಂತೂ ಈ ಸೋರಿಕೆಯ ವರದಿಯನ್ನು ಮುಂದಿಟ್ಟು ಮತ್ತೆ ದಲಿತ ಮುಖ್ಯಮಂತ್ರಿಯ ಬೇಡಿಕೆಯನ್ನು ಮುನ್ನೆಲೆಗೆ ತಂದಿದ್ದಾರೆ. ಆದರೆ ಈ ಬೇಡಿಕೆಯನ್ನು ಮುಂದಕ್ಕಿಡುತ್ತಿರುವವರು ದಲಿತ ಸಮುದಾಯಕ್ಕೆ ಸೇರಿದವರಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಿಲ್ಲ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವುದು ಇವರ ಗುರಿಯೇ ಹೊರತು, ದಲಿತರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸುವುದಲ್ಲ. ದಲಿತರನ್ನು ಇಲ್ಲಿ ತಮ್ಮ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ. ಇಂತಹ ರಾಜಕೀಯದಿಂದ, ದಲಿತ ಸಮುದಾಯಕ್ಕೆ ಆಗುವ ಪ್ರಯೋಜನ ಅಷ್ಟರಲ್ಲೇ ಇದೆ. ವರದಿಯೇ ಹೇಳುವಂತೆ ದಲಿತರೇ ಈ ರಾಜ್ಯದಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದಾರೆ ಎಂದೇ ಇಟ್ಟುಕೊಳ್ಳೋಣ. ಆದರೂ ಯಾಕೆ, ಒಬ್ಬ ದಲಿತ ಮುಖ್ಯಮಂತ್ರಿ ಆಯ್ಕೆಯಾಗುವಂತಹ ತೀರ್ಪೊಂದನ್ನು ಕಳೆದ ಚುನಾವಣೆಯಲ್ಲಿ ದಲಿತರಿಂದ ನೀಡಲು ಸಾಧ್ಯವಾಗಲಿಲ್ಲ? ಕೆಪಿಸಿಸಿ ಅಧ್ಯಕ್ಷರೆನಿಸಿಕೊಂಡಂತಹ ಪರಮೇಶ್ವರ್ ಅವರೇ ಯಾಕೆ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲಬೇಕಾಯಿತು? ಅಂದರೆ ಕೇವಲ ಒಂದು ಸಮುದಾಯದ ಜನಸಂಖ್ಯೆ, ಆ ಸಮುದಾಯದ ರಾಜಕೀಯ ನಾಯಕನನ್ನು ನಿರ್ಧರಿಸುವುದಿಲ್ಲ ಎನ್ನುವುದಕ್ಕೆ ಇದೇ ಉದಾಹರಣೆಯಾಗಿದೆ.

ಎಲ್ಲಿಯವರೆಗೆ ಶೋಷಿತ ಸಮುದಾಯ ರಾಜಕೀಯವಾಗಿ, ಸಾಮಾಜಿಕವಾಗಿ ಸಂಘಟಿತರಾಗಿ ಕಾರ್ಯಯೋಜನೆಯನ್ನು ರೂಪಿಸುವುದಿಲ್ಲವೋ ಅಲ್ಲಿಯವರೆಗೆ ಈ ಜನಸಂಖ್ಯೆಯನ್ನು ಬಳಸಿಕೊಳ್ಳುವವರೂ ಮೇಲ್ವರ್ಗದ ಜನರೇ ಆಗಿರುತ್ತಾರೆ ಎನ್ನುವ ಸತ್ಯವನ್ನು ನಾವು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಅಥವಾ ಕೆಲವು ದಲಿತ ನಾಯಕರು ತುಸು ಮೇಲಿನ ಸ್ಥಾನಕ್ಕೆ ಹೋದಾಕ್ಷಣ ಅವರು ಮೇಲ್ವರ್ಗದ ಪಾದ ಸೇವೆಯಲ್ಲಿ ಧನ್ಯರಾಗಿ ಬಿಡುತ್ತಾರೆ. ಅವರೇ ದಲಿತರ ಪಾಲಿನ ನಿಜವಾದ ಶತ್ರುಗಳಾಗಿ ಬಿಡುತ್ತಾರೆ. ರಾಜಕೀಯ ವ್ಯಕ್ತಿಗಳು ಇದನ್ನು ಮಾಡಿದರೆ, ರಾಜಕೀಯ ಸಮಯಸಾಧಕರು ಎಂದು ಅವರನ್ನು ನಿರ್ಲಕ್ಷಿಸಿ ಬಿಡಬಹುದು. ಆದರೆ ಇಂದು ದಲಿತ ಸಮುದಾಯದಿಂದ ಬಂದ ವೈಚಾರಿಕ, ಚಿಂತಕರೇ ಮೇಲ್ವರ್ಗದ ‘ಬಿಸ್ಕೆಟ್’ಗಳಿಗೆ ತಮ್ಮನ್ನು ಮಾರಿಕೊಳ್ಳುತ್ತಿದ್ದಾರೆ. ಒಂದು ಕಾಲದ ದಲಿತ ಕವಿಯೆಂದು ಖ್ಯಾತರಾಗಿದ್ದ ಸಿದ್ದಲಿಂಗಯ್ಯ ಅವರು ‘ರಾಘವೇಶ್ವರ ಶ್ರೀ’ಯಿರುವ ವೇದಿಕೆಯಲ್ಲಿ ನಿಂತು ಅವರಿಗೆ ‘ಕಳಂಕಗಳ ಗ್ರಹಣದಿಂದ ಹೊರಗೆ ಬಂದ ಚಂದ್ರ’ ಎಂಬ ಪ್ರಮಾಣ ಪತ್ರ ನೀಡುತ್ತಾರಾದರೆ, ಉಳಿದ ಜನಸಾಮಾನ್ಯರ ಪಾಡೇನು. ಇಂದು ದಲಿತರ ನಿಜವಾದ ಶತ್ರುಗಳು ಬ್ರಾಹ್ಮಣರಲ್ಲ. ಬದಲಿಗೆ, ಸಣ್ಣ ಪುಟ್ಟ ಪದವಿಗಾಗಿ ಮೇಲ್ವರ್ಗದ ಜನರಿಗೆ ತನ್ನ ಸಮುದಾಯದ ಹಿತಾಸಕ್ತಿಗಳನ್ನು ಮಾರಿ ಬಿಡುವ ಸಿದ್ದಲಿಂಗಯ್ಯನಂಥವರ ಬಗ್ಗೆ ಶೋಷಿತ ಸಮುದಾಯ ಎಚ್ಚರವನ್ನು ಇಟ್ಟುಕೊಳ್ಳಬೇಕಾಗಿದೆ. ಇಂದು ಅಂಬೇಡ್ಕರ್‌ರನ್ನು ಹೈಜಾಕ್ ಮಾಡಲು ಯತ್ನಿಸುತ್ತಿರುವ ಸಂಘಪರಿವಾರ ಇಂತಹ ಸಿದ್ದಲಿಂಗಯ್ಯ ಅವರಿಗೆ ಹೊಂಚು ಹಾಕುತ್ತಿರುತ್ತವೆ. ದಲಿತರು ಬಹುಸಂಖ್ಯೆಯಲ್ಲಿದ್ದರೂ ಒಂದು ರಾಜಕೀಯ ಶಕ್ತಿಯಾಗಿ ರೂಪುಗೊಳ್ಳದೇ ಇರಲು ಮುಖ್ಯ ಕಾರಣ ಇಂತಹ ಸಮಯ ಸಾಧಕರೆನಿಸಿಕೊಂಡ ಸಂಘಟಕರು. ಇಂದು ದಲಿತರಲ್ಲಿರುವ ಬಹುತೇಕ ಸಂಘಟನೆಗಳು ಹುಟ್ಟಿಕೊಂಡಿರುವುದು ದಲಿತರ ಸಮಗ್ರ ಏಳಿಗೆಗಾಗಿ ಅಲ್ಲ. ಬದಲಿಗೆ, ತಮ್ಮ ಸಮಯ ಸಾಧಕರ ರಾಜಕಾರಣಕ್ಕೆ ಪೂರಕವಾಗಿ ಬಳಸಿಕೊಳ್ಳುವುದಕ್ಕಾಗಿ. ತಮ್ಮಾಳಗಿರುವ ಈ ಶತ್ರುಗಳನ್ನು ಪರಿಹರಿಸಿಕೊಂಡು ಶೋಷಿತ ಸಮುದಾಯ ಒಂದಾಗದೇ ಇದ್ದರೆ ಯಾವ ಜನಸಂಖ್ಯೆಯೂ ಆ ಸಮುದಾಯಕ್ಕೆ ನ್ಯಾಯ ನೀಡಲಾರದು. ಇದನ್ನು ಎಲ್ಲ ಶೋಷಿತ ಸಮುದಾಯವೂ ಅರ್ಥ ಮಾಡಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News