ಗೋವಾದಲ್ಲಿ ಬಿಜೆಪಿ ಜೊತೆ ಆಮ್ ಆದ್ಮಿ ಪಾರ್ಟಿಯ ಲವ್ !

Update: 2016-04-15 05:50 GMT

ಗೋವಾ : ಗೋವಾ ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿ ಎಪ್ರಿಲ್ ಒಂದರಂದು ಗೋವಾ ಜೋಡೋ ಅಭಿಯಾನ ಆರಂಭಿಸಿಬಿಜೆಪಿಯ ಹಾಗೂ ಕಾಂಗ್ರೆಸ್ಸಿನ ವಿನಾಶಕಾರಿ ಹಾಗೂ ವಿಭಜನಾತ್ಮಕ ರಾಜಕೀಯದ ವಿರುದ್ಧ ಗೋವಾ ಜನರನ್ನು ಒಂದುಗೂಡಿಸಲು ಪಣ ತೊಟ್ಟಿತ್ತು. ಈ ಅಭಿಯಾನ ಆರಂಭಿಸಿ ಈಗಷ್ಟೇ ಎರಡು ವಾರಗಳಾಗಿವೆ. ಆದರೂ ಎಎಪಿ, ಬಿಜೆಪಿಯೊಂದಿಗೆ ಕೈಜೋಡಿಸುತ್ತಿದೆಯೇನೋ ಎಂಬ ಗೋವಾದ ಜನರ ಭಾವನೆಯನ್ನು ಹೋಗಲಾಡಿಸಲು ಪಕ್ಷಕ್ಕೆಇನ್ನೂ ಸಾಧ್ಯವಾಗಿಲ್ಲ.

ಭ್ರಷ್ಟಾಚಾರ ಮುಕ್ತ ರಾಜಕೀಯದ ಆಶ್ವಾಸನೆ ನೀಡುವ ಎಎಪಿಯ ಪೋಸ್ಟರುಗಳು ಗೋವಾದ ಹಲವೆಡೆ ಕಾಣಸಿಗುತ್ತಿವೆ. ಫೆಬ್ರವರಿ 2017ರ ಮೊದಲು ಗೋವಾದ ವಿಧಾನಸಭಾ ಚುನಾವಣೆಗಳು ನಡೆಯದೇ ಹೊದರೂ, ಎಎಪಿ ಈಗಾಗಲೇ ಸಾಕಷ್ಟು ಪೂರ್ವತಯಾರಿ ನಡೆಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ.

ಗೋವಾದ ಎಲ್ಲಾ 40 ಅಸೆಂಬ್ಲಿ ಕ್ಷೇತ್ರಗಳಲ್ಲೂ ಎಎಪಿ ಸ್ಪರ್ಧಿಸುವುದಾಗಿ ಕಳೆದ ತಿಂಗಳು ಪಕ್ಷದ ವಕ್ತಾರ ಅಶುತೋಷ್ ತಿಳಿಸಿದ್ದರು. ಈಗಾಗಲೇ ಗೋವಾ ಬಿಜೆಪಿ ಸರಕಾರ ತೆಗೆದುಕೊಂಡಿರುವ ಹಲವು ಕ್ರಮಗಳನ್ನು ಎಎಪಿ ಟೀಕಿಸಿದೆ. ಸರಕಾರ ತೆಂಗಿನಮರವನ್ನು ತಾಳೆ ಜಾತಿಯ ಮರವೆಂದು ಪರಿಗಣಿಸಲು ನಿರ್ಧರಿಸಿದ್ದು ಹಾಗೂ ಅದರ ಬಿಲ್ಡರುಗಳ ಹಾಗೂ ಉದ್ಯಮಿಗಳ ಪರ ಧೋರಣೆ ಎಎಪಿಯ ಆಕ್ರೋಶಕ್ಕೆ ಕಾರಣವಾಗಿದೆ.

ಆದರೂ ಬಿಜೆಪಿಯ ಪ್ರಭಾವದಲ್ಲೇ ಇರುವ ಗೋವಾದಲ್ಲಿ ಎಎಪಿ ಇನ್ನಷ್ಟೇ ತನ್ನ ಅಸ್ತಿತ್ವವನ್ನು ಬಲವಾಗಿ ಬೇರೂರಿಸಬೇಕಿದೆ.ಎಎಪಿ ಇಲ್ಲಿ ಬಿಜೆಪಿಯ ತಂತ್ರವನ್ನೇ ಅನುಸರಿಸಲಿದೆಯೇನೋ ಎಂಬ ಭಾವನೆಯೂ ಇದೆ. ಸಣ್ಣ ಪಕ್ಷಗಳಿಗೆ, ಬಂಡುಕೋರರಿಗೆ ಹಾಗೂ ಪಕ್ಷೇತರರಿಗೆ ಸಹಾಯ ಮಾಡಿ ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸುವ ತಂತ್ರವನ್ನು ಬಿಜೆಪಿ ಈ ಹಿಂದೆ ಹಲವಾರು ಬಾರಿ ಮಾಡಿದೆಯೆಂಬುದು ಹಲವರಅಭಿಪ್ರಾಯ.

ಗೋವಾದ ಎಎಪಿ ಬಿಜೆಪಿಯ ಪ್ರಭಾವಕ್ಕೊಳಗಾಗಿದೆಯೆಂದು ಹಲವು ಪಕ್ಷ ಕಾರ್ಯಕರ್ತರು ಪಿಸುಗುಟ್ಟುತ್ತಿದ್ದಾರೆ.ಆರ್‌ಟಿಐ ಕಾರ್ಯಕರ್ತ ಏರಿಸ್ ರಾಡ್ರಿಗ್ಸ್ ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಇತ್ತೀಚೆಗಷ್ಟೇ ಎಎಪಿ ತನ್ನ ಜನಸಂಪರ್ಕ ಕಾರ್ಯಕ್ರಮವನ್ನು ಕ್ಯಾಥೋಲಿಕ್ಕರು ಹೆಚ್ಚಿರುವ ದಕ್ಷಿಣ ಗೋವಾದಬೆನೌಲಿಮ್ ಪ್ರದೇಶದಿಂದ ಆರಂಭಿಸಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಇಲ್ಲಿಂದ ಸ್ಪರ್ಧಿಸಿದ್ದ ಹಲವು ಅಲ್ಪಸಂಖ್ಯಾತ ವರ್ಗದ ಅಭ್ಯರ್ಥಿಗಳಿಂದ ಬಿಜೆಪಿ ಇಲ್ಲಿ ತನ್ನ ಖಾತೆಯನ್ನು ಆರಂಭಿಸಲು ಸಹಕಾರಿಯಾಯಿತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಮೇಲಾಗಿ ಗೋವಾ ಎಎಪಿಯ ಪ್ರಮುಖ ಹೆಸರು ದಿನೇಶ್ ವಘೇಲಾ ಈ ಹಿಂದೆ ಬಾಬಾ ರಾಮ್‌ದೇವ್, ಪತಂಜಲಿ ಯೋಗ್ ಹಾಗೂ ಭಾರತ್ ಸ್ವಾಭಿಮಾನ್ ಟ್ರಸ್ಟ್ಜತೆ ಕೈಜೋಡಿಸಿದ್ದು ಬಾಬಾ ರಾಮ್‌ದೇವ್ ಜತೆ ಒಂದೆರಡು ಬಾರಿ ವೇದಿಕೆಯನ್ನೂ ಹಂಚಿಕೊಂಡಿದ್ದಾರೆ.

ನಿಜ ಹೇಳಬೇಕೆಂದರೆ ಗೋವಾ ಜನರು ಇನ್ನೂ ಎಎಪಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ಪಕ್ಷದಿಂದ ಹೊರಹಾಕಿದ ನಂತರ ಹಲವುಮಂದಿ ಎಎಪಿಯಿಂದ ಇಲ್ಲಿ ದೂರ ಸರಿದಿದ್ದಾರೆ. ಮುಂದಿನ ವರ್ಷ ಪಂಜಾಬಿನಲ್ಲಿ ನಡೆಯುವ ಚುನಾವಣೆಯಲ್ಲಿ ಎಎಪಿ ನಿರ್ವಹಣೆ ತೃಪ್ತಿಕರವಾಗಿದ್ದಲ್ಲಿ ಮಾತ್ರ ಅದುಗೋವಾದಲ್ಲಿ ಏನಾದರೂ ಉತ್ತಮ ಬೆಳವಣಿಗೆ ನಿರೀಕ್ಷಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News