×
Ad

ಶಿಕ್ಷಕರ ವೌಲ್ಯಮಾಪನ ಮಾಡುತ್ತಿರುವ ವಿದ್ಯಾರ್ಥಿಗಳು

Update: 2016-04-15 23:30 IST

ಈ ದೇಶದಲ್ಲಿ ವೇತನ, ಸೌಲಭ್ಯ ಇತ್ಯಾದಿಗಳ ಕೊರತೆಯಿಂದ ಮತ್ತು ಹಲವು ವೈಯಕ್ತಿಕ ಜಂಜಾಟಗಳಿಂದ ನರಳುತ್ತಿರುವ ಸರಕಾರಿ ಸಿಬ್ಬಂದಿಗಳೆಂದರೆ ನಮ್ಮ ಸೇನಾ ಪಡೆ. ಭಾವನಾತ್ಮಕ ಕಾರಣಗಳಿಗಾಗಿ ಅವರು ಅದನ್ನು ಬರೇ ಹುದ್ದೆಯೆಂದು ಸ್ವೀಕರಿಸದೆ ಸೇವೆಯೆಂದು ಸ್ವೀಕರಿಸುತ್ತಿರುವ ಕಾರಣಕ್ಕಾಗಿ ಹಿಮಕಂದರಗಳ ಮಧ್ಯೆ ಚಳಿಯನ್ನು ಸಹಿಸುತ್ತಾ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಅವರು ವೌನವಾಗಿದ್ದಾರೆ ಎನ್ನುವುದರ ಅರ್ಥ, ಅವರಿಗೆ ಸರಕಾರ ಸಕಲ ಸೌಲಭ್ಯಗಳನ್ನೂ ನೀಡಿದೆ ಎಂದಲ್ಲ. ಇದೇ ಸಂದರ್ಭದಲ್ಲಿ ಗಡಿಯಲ್ಲಿ ಯುದ್ಧ ಘೋಷಣೆಯಾದ ಹೊತ್ತಿನಲ್ಲೇ, ಸೈನಿಕರು ತಮ್ಮ ಬೇಡಿಕೆಗಳೆಲ್ಲ ಈಡೇರುವವರೆಗೆ ಶಸ್ತ್ರ ಕೈಗೆತ್ತಿಕೊಳ್ಳುವುದಿಲ್ಲ ಎಂದು ಒಂದಾಗಿ ಪ್ರತಿಭಟನೆಗಿಳಿದರೆ ಈ ದೇಶದ ಸ್ಥಿತಿ ಏನಾದೀತು? ಪೊಲೀಸರ ಉದಾಹರಣೆಯನ್ನು ತೆಗೆದುಕೊಳ್ಳೋಣ. ಹೆಸರಿಗೆ ಖಾಕಿಯನ್ನು ಧರಿಸಿಕೊಂಡು ದರ್ಬಾರು ನಡೆಸುತ್ತಿದ್ದರೂ, ಸಮಾಜ ಅತ್ಯಂತ ಪೂರ್ವಾಗ್ರಹ ಪೀಡಿತ ದೃಷ್ಟಿಯನ್ನು ಇವರನ್ನು ನೋಡುತ್ತಾ ಬಂದಿದೆ. ನಡುರಾತ್ರಿಯಲ್ಲಿ ಚಳಿಯಲ್ಲಿ ಗಡಗಡ ನಡುಗುತ್ತಾ, ಕೈಯಲ್ಲಿರುವ ಲಾಠಿಯ ಧೈರ್ಯದಿಂದಲೇ ವಾಹನಗಳ ತಪಾಸಣೆ ನಡೆಸುತ್ತಾ ನಾಡಿನ ಭದ್ರತೆಯನ್ನು ಕಾಪಾಡುವ ಹೊಣೆ ಇವರದು. ನಗರದಲ್ಲಿ ಭೀಕರ ಕೋಮುಗಲಭೆ, ದೊಂಬಿ ಎದ್ದಾಗಲೇ ಈ ಪೊಲೀಸರೆಲ್ಲ ಒಂದಾಗಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟು, ಪ್ರತಿಭಟನೆಗೆ ನಿಂತು ಬಿಟ್ಟರೆ ವ್ಯವಸ್ಥೆಯ ಗತಿ ಏನಾದೀತು? ಮತ್ತೂ ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ವೈದ್ಯರು ಮಾಡುವ ವೃತ್ತಿ ಸಮಾಜದ ಕಣ್ಣಲ್ಲಿ ಸೇವೆ ಎಂದು ಗುರುತಿಸಲ್ಪಡುತ್ತದೆ. ಒಬ್ಬ ವೈದ್ಯ ತನ್ನ ವೃತ್ತಿಯಲ್ಲಿ ಪಾಲಿಸಬೇಕಾಗ ವೌಲ್ಯ ಅತೀ ದೊಡ್ಡದು. ಇಂದು ಆ ವೌಲ್ಯವನ್ನು ಪಾಲಿಸದ ಕಾರಣಕ್ಕಾಗಿಯೇ ವೈದ್ಯ ವೃತ್ತಿಯೆನ್ನುವುದು ಬಡರೋಗಿಗಳನ್ನು ಸುಲಿಗೆ ಮಾಡುವ ವೃತ್ತಿ ಎಂದು ಗುರುತಿಸಲ್ಪಟ್ಟಿದೆ. ಜನರ ಪ್ರಾಣ ಉಳಿಸಬೇಕಾಗಿರುವ ವೈದ್ಯರ ಕುರಿತಂತೆ ಈ ನಾಡಿನಲ್ಲಿ ಪೂರ್ವಾಗ್ರಹ ಬೆಳೆಯುತ್ತಿದೆ. ಹಣಕ್ಕಾಗಿ ಎಂತಹ ನೀಚ ಕೆಲಸಕ್ಕೂ ಹೇಸದವರು ವೈದ್ಯರು ಎಂಬ ಪೂರ್ವಾಗ್ರಹ ಬೆಳೆಯುತ್ತಿದೆ. ಅದಕ್ಕೆ ಪೂರಕವಾಗಿಯೇ ಇಂದು, ಸಣ್ಣ ಪುಟ್ಟ ನೆಪವನ್ನು ಹಿಡಿದು ವೈದ್ಯರು ಧರಣಿ ನಡೆಸುತ್ತಿದ್ದಾರೆ. ಇವರು ಧರಣಿ ನಡೆಸಿದ ಪರಿಣಾಮವಾಗಿಯೇ ಅದೆಷ್ಟೋ ರೋಗಿಗಳು ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಒಬ್ಬ ರೋಗಿ ಸಾವು ಬದುಕಿನ ನಡುವೆ ಒದ್ದಾಡುತ್ತಿರುವಾಗ ಈ ವೈದ್ಯರು ಏಕಾಏಕಿ ತಮ್ಮ ಬೇಡಿಕೆಗಳಿಗಾಗಿ ಧರಣಿ ಕೂತರೆ ಈ ರೋಗಿಯ ಗತಿಯೇನಾಗಬೇಕು? ಬೇಡಿಕೆ ಈಡೇರಿದ ಬಳಿಕ ವೈದ್ಯರು ಕೆಲಸಕ್ಕೇನೋ ಹಾಜರಾಗುತ್ತಾರೆ.ಆದರೆ ಉಸಿರು ನಿಂತು ಹೋದ ದೇಹಕ್ಕೆ ಮರಳಿ ಉಸಿರನ್ನು ನೀಡುವುದಕ್ಕೆ ವೈದ್ಯರಿಗೆ ಸಾಧ್ಯವೇ? ನಾಳೆ ರೋಗಿ ಕುಟುಂಬ ಆ ಬೇಡಿಕೆಯನ್ನು ಅವರ ಮುಂದೊಡ್ಡಿದರೆ ಅವರು ಅದನ್ನು ಈಡೇರಿಸಬಲ್ಲರೇ? ಪರೋಕ್ಷವಾಗಿ ವೈದ್ಯರು ರೋಗಿಗಳನ್ನು ಒತ್ತೆಯಾಳನ್ನಾಗಿಸಿ, ತಮ್ಮ ಬೇಡಿಕೆಯನ್ನು ಈಡೇರಿಸಿಕೊಂಡರು. ಇದನ್ನು ನಾವು ಧರಣಿ ಎಂದು ಕರೆಯುವುದೋ, ಬ್ಲಾಕ್‌ಮೇಲ್ ಎಂದು ಕರೆಯುವುದೋ? ಇಷ್ಟು ಹಣ ನಮಗೆ ಸಿಗದೇ ಇದ್ದಲ್ಲಿ ನಿಮ್ಮ ಮಗನನ್ನು ಕೊಂದು ಹಾಕುತ್ತೇವೆ ಎನ್ನುವ ಬ್ಲಾಕ್‌ಮೇಲರ್‌ಗೂ, ನಮ್ಮ ಬೇಡಿಕೆ ಈಡೇರುವವರೆಗೆ ಸಾವಿನ ಅಂಚಿನಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ ಎನ್ನುವ ವೈದ್ಯರಿಗೂ ಸಣ್ಣ ಅಂತರವಷ್ಟೇ ಇದೆ. ಮೇಲಿನೆಲ್ಲ ಉದಾಹರಣೆಗಳ ಜೊತೆಗೆ ನಾವಿಂದು ಉಪನ್ಯಾಸಕರ ಧರಣಿಯನ್ನು ಚರ್ಚಿಸಬೇಕಾಗಿದೆ. ಉಪನ್ಯಾಸಕ ಹುದ್ದೆಯೆನ್ನುವುದು ಸೇನೆ, ವೈದ್ಯಕೀಯ, ಪೊಲೀಸ್ ಹುದ್ದೆಗಳಷ್ಟೇ ಘನತೆಯನ್ನು ಹೊಂದಿರುವಂತಹದ್ದು. ಅದು ಒಂದು ಹುದ್ದೆಯಲ್ಲ, ಜವಾಬ್ದಾರಿ. ಸೇವೆಯ ವ್ಯಾಪ್ತಿಗೆ ಒಳಪಡುವಂತಹದ್ದು. ವೌಲ್ಯಗಳ ತಳಹದಿಯ ಮೇಲೆ ಶಿಕ್ಷಕ ಹುದ್ದೆ ನಿಂತಿದೆ. ಒಂದು ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ಅವರ ಮೇಲಿದೆ. ಹಾಗೆಂದು ತಮಗೆ ಅನ್ಯಾಯವಾದಾಗ ಅದನ್ನು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಪ್ರತಿಭಟನೆ ಮಾಡುವ ಅವಕಾಶ ಅವರಿಗೆ ಇಲ್ಲ ಎಂದಲ್ಲ. ಇದೀಗ ಶಿಕ್ಷಕರು ಸರಕಾರದ ಮುಂದಿಟ್ಟಿರುವ ಬೇಡಿಕೆ ಸಂಪೂರ್ಣವಾಗಿ ಅಲ್ಲಗಳೆಯುವಂತಹದ್ದಲ್ಲ. ಶೇಕಡ 75ರಷ್ಟು ಬೇಡಿಕೆಗಳೂ ಈಡೇರಬೇಕಾದಂಥವುಗಳು. ಇದರ ಬಗ್ಗೆ ಯಾವ ಅನುಮಾನವೂ ಇಲ್ಲ. ವಿಪರ್ಯಾಸವೆಂದರೆ, ಈ ಬೇಡಿಕೆ ಇಂದು ನಿನ್ನೆಯದಲ್ಲ. ಶಿಕ್ಷಕರ ಪರವಾಗಿ ಇಂದು ಮೊಸಳೆ ಕಣ್ಣೀರು ಸುರಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಈ ಹಿಂದೆ ಅಧಿಕಾರದಲ್ಲಿದ್ದಾಗಲೂ ಶಿಕ್ಷಕರ ಈ ಬೇಡಿಕೆಗಳನ್ನು ನಿರ್ಲಕ್ಷಿಸಿವೆ ಎನ್ನುವುದನ್ನು ನಾವು ಮರೆಯಬಾರದು. ಶಿಕ್ಷಣ ವ್ಯವಸ್ಥೆಯನ್ನು ಸರಕಾರ ಎಷ್ಟು ಗಂಭೀರವಾಗಿ ಸ್ವೀಕರಿಸಿದೆ ಎನ್ನುವುದನ್ನು ಇದು ಹೇಳುತ್ತದೆ. ಈ ಬಾರಿ ಶಿಕ್ಷಕರು ಮತ್ತೆ ಮುಷ್ಕರಕ್ಕಿಳಿಯುತ್ತಾರೆ ಎನ್ನುವುದು ಸರಕಾರಕ್ಕೆ ತಿಳಿಯದ ವಿಷಯವಲ್ಲ. ಆದರೂ ಈ ಮುಷ್ಕರವನ್ನು ಸರಕಾರ ನಿರ್ಲಕ್ಷಿಸುತ್ತಾ ಬಂತು. ಇದೀಗ ಶಿಕ್ಷಕರು ಉತ್ತರ ಪತ್ರಿಕೆ ವೌಲ್ಯಮಾಪನವನ್ನು ವಿರೋಧಿಸಿ ಬೀದಿಗಿಳಿದಾಕ್ಷಣ ‘‘ವಿದ್ಯಾರ್ಥಿಗಳ ಬದುಕಲ್ಲಿ ಚೆಲ್ಲಾಟ ವಾಡಬೇಡಿ’’ ‘‘ಮಾತುಕತೆಗೆ ಬನ್ನಿ’’ ಎಂದೆಲ್ಲ ನಾಟಕವಾಡುತ್ತಿದೆ. ಶಿಕ್ಷಕರ ಮುಷ್ಕರದ ಅರಿವಿದ್ದೂ ಸರಕಾರ ಈವರೆಗೆ ಕಾದದ್ದು ಯಾಕೆ? ಲಾರಿ ಚಾಲಕರು ಮುಷ್ಕರಕ್ಕಿಳಿದಾಕ್ಷಣ ಸರಕಾರ ಎಚ್ಚೆತ್ತುಕೊಳ್ಳುತ್ತದೆ. ಯಾಕೆಂದರೆ ಇಡೀ ಆರ್ಥಿಕ ವ್ಯವಸ್ಥೆ ಅದರಿಂದ ಅಸ್ತವ್ಯಸ್ತವಾಗಿ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎನ್ನುವ ಭಯ. ಇದೇ ಸಂದರ್ಭದಲ್ಲಿ ಶಿಕ್ಷಕರು ಮುಷ್ಕರಕ್ಕಿಳಿದರೆ, ಸಾರಿಗೆ ವ್ಯವಸ್ಥೆಗೆ ಯಾವ ತೊಂದರೆಯೂ ಆಗುವುದಿಲ್ಲ ಎನ್ನುವುದು ಗೊತ್ತಿದೆ. ಮಾರುಕಟ್ಟೆಯಲ್ಲಿ ಯಾವ ಏರು ಪೇರು ಉಂಟಾಗುವುದಿಲ್ಲ. ಏನಾದರೂ ಸಮಸ್ಯೆ ಎದುರಾಗುವುದಿದ್ದರೆ ಅದು ವಿದ್ಯಾರ್ಥಿಗಳಿಗೆ ಮಾತ್ರ ಎಂಬ ಉಡಾಫೆಯನ್ನು ಎಲ್ಲ ಸರಕಾರಗಳೂ ಪ್ರದರ್ಶಿಸುತ್ತಾ ಬಂದಿವೆ. ಆದುದರಿಂದಲೇ ಶಿಕ್ಷಕರ ಸಮಸ್ಯೆ ಇನ್ನೂ ಜೀವಂತವಾಗಿದೆೆ. ಇದೇ ಸಂದರ್ಭದಲ್ಲಿ ಶಿಕ್ಷಕರೂ ತಮ್ಮ ಹೊಣೆಗಾರಿಕೆಯನ್ನು ಸಂಪೂರ್ಣ ಮರೆತ್ತಿದ್ದಾರೆ. ಈವರೆಗೆ ಪ್ರತಿಭಟನೆಗೆ ಇಳಿಯದ ಶಿಕ್ಷಕರು ಉತ್ತರಪತ್ರಿಕೆ ವೌಲ್ಯ ಮಾಪನದ ಸಂದರ್ಭದಲ್ಲೇ ಯಾಕೆ ಪ್ರತಿಭಟನೆಗಿಳಿಯುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವುದೇ ಆಗಿದೆ. ಅಂದರೆ, ಅವರು ತಮ್ಮ ಬೇಡಿಕೆಗಾಗಿ ತಮ್ಮ ವಿದ್ಯಾರ್ಥಿಗಳನ್ನೇ ಒತ್ತೆಯಾಳನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ಇದು ಅಕ್ಷಮ್ಯ. ಯಾವ ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ಸುಭದ್ರಗೊಳಿಸಲು ಶಿಕ್ಷಕರು ನೆರವಾಗಬೇಕಾಗಿತ್ತೋ, ಅಂತಹ ವಿದ್ಯಾರ್ಥಿಗಳ ಭವಿಷ್ಯವನ್ನೇ ಒತ್ತೆಯಾಳನ್ನಾಗಿಸಿಕೊಂಡು ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ. ಇದು ಹೀಗೆ ಮುಂದುವರಿದರೆ, ಹಲವು ಪ್ರತಿಭಾವಂತ ವಿದ್ಯಾರ್ಥಿಗಳು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮುಂದಿನ ವಿದ್ಯಾಭ್ಯಾಸದ ಸಂದರ್ಭದಲ್ಲಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ನಾಳೆ ಶಿಕ್ಷಕರಸಮಸ್ಯೆ ಈಡೇರಬಹುದು. ಆದರೆ ತಮ್ಮ ಬದುಕಿನ ಮೇಲೆ ಚೆಲ್ಲಾಟವಾಡಿ ಬೇಡಿಕೆಯನ್ನು ಈಡೇರಿಸಿಕೊಂಡ ಶಿಕ್ಷಕರ ಕುರಿತಂತೆ ವಿದ್ಯಾರ್ಥಿಗಳು ಯಾವ ಅಭಿಪ್ರಾಯವನ್ನು ತಾಳಬಹುದು? ನಾಳೆ ತಮ್ಮ ಈ ವಿದ್ಯಾರ್ಥಿಗಳನ್ನು ಶಿಕ್ಷಕರು ಯಾವ ಮುಖ ಹೊತ್ತು ಮುಖಾಮುಖಿಯಾಗುತ್ತಾರೆ? ಈ ನಿಟ್ಟಿನಲ್ಲಿ ಹಗ್ಗ ತುಂಡಾಗುವ ಮೊದಲು ಸರಕಾರ ಮತ್ತು ಶಿಕ್ಷಕರು ತಮ್ಮ ಜಗ್ಗಾಟವನ್ನು ನಿಲ್ಲಿಸಬೇಕಾಗಿದೆ. ವಿದ್ಯಾರ್ಥಿಗಳ ಭವಿಷ್ಯ ಇಲ್ಲಿ ಮುಖ್ಯವಾಗಿರುವುದರಿಂದ ಉಭಯ ಪಕ್ಷಗಳೂ ಪರಸ್ಪರ ಬಿಟ್ಟುಕೊಡುವ ಮನಸ್ಸನ್ನು ಹೊಂದಿ, ಮಾತುಕತೆ ಮುಂದುವರಿಸಬೇಕು. ಎಲ್ಲ ಬೇಡಿಕೆಗಳೂ ಒಮ್ಮೆಲೇ ಈಡೇರಬೇಕು ಎನ್ನುವ ಹಟಕ್ಕೆ ಕಟ್ಟು ಬೀಳದೆ, ಹಂತಹಂತವಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರಕಾರದ ಮನವೊಲಿಸಬೇಕು. ಹಾಗೆಯೇ ಸರಕಾರವೂ ಶಿಕ್ಷಕರ ಬೇಡಿಕೆಗಳಲ್ಲಿ ಶೇ. 50ರಷ್ಟನ್ನಾದರೂ ಈಡೇರಿಸಿ, ವೌಲ್ಯಮಾಪನ ಸುಗಮವಾಗುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಸರಕಾರ ಮತ್ತು ಶಿಕ್ಷಕರ ವೌಲ್ಯ ಮಾಪನವನ್ನು ಜನರೇ ಮಾಡುತ್ತಾರೆ. ಈ ಎಚ್ಚರಿಕೆ ಉಭಯಪಕ್ಷಗಳಿಗೂ ಇರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News