×
Ad

ಪೊಲೀಸರ ಜತೆ ‘ಅನೈತಿಕ’ ಸಂಬಂಧ: ಏಕತಾ ಮಂಚ್ ವಿಸರ್ಜನೆ

Update: 2016-04-16 09:44 IST

ಜೈಪುರ: ಛತ್ತೀಸ್‌ಗಢ ವಿಚಕ್ಷಣಾ ಸಂಘಟನೆಯಾದ ಸಾಮಾಜಿಕ್ ಏಕ್ತಾ ಮಂಚ್, ಪೊಲೀಸರ ಜತೆ ‘ಅನೈತಿಕ’ಸಂಬಂಧವನ್ನು ಹೊಂದಿದೆ ಎಂಬ ಆತಂಕಕಾರಿ ಅಂಶವನ್ನು ಸಾಬೀತುಪಡಿಸುವ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಸ್‌ನಂತೆ ಹಬ್ಬಿರುವ ಹಿನ್ನೆಲೆಯಲ್ಲಿ ತೀವ್ರ ಮುಜುಗರಕ್ಕೀಡಾಗಿರುವ ಸಂಸ್ಥೆಯ ವಿಸರ್ಜನೆಯನ್ನು ಮುಖಂಡರು ಘೋಷಿಸಿದ್ದಾರೆ.
ಗುರುವಾರ ಬಿಡುಗಡೆ ಮಾಡಲಾದ ಈ ವೀಡಿಯೊ ದೃಶ್ಯಾವಳಿಯಲ್ಲಿ ಬಸ್ತರ್ ಪೊಲೀಸರು ಈ ಸಂಘಟನೆಯ ಜತೆಗೆ ಕೈಜೋಡಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರೇ ಒಪ್ಪಿಕೊಂಡಿದ್ದಾರೆ. ಆದರೆ ಸಾಮಾಜಿಕ್ ಏಕ್ತಾ ಮಂಚ್, ಈ ಸಂಘಟನೆಯ ವಿಸರ್ಜನೆ ಕುರಿತ ಹೇಳಿಕೆಯಲ್ಲಿ, ಕೆಲ ಸಮಾಜವಿರೋಧಿ ಶಕ್ತಿಗಳು ಈ ಪರಿಸ್ಥಿತಿಯ ಲಾಭ ಪಡೆದುಕೊಂಡು ಸಂಘಟನೆಯ ಹೆಸರು ನಾಶಗೊಳಿಸಲು ಸಂಚು ರೂಪಿಸಿವೆ ಎಂದು ಹೇಳಿಕೊಂಡಿದೆ.
ಸಮಾಜದ ವಿವಿಧ ವರ್ಗಗಳಿಂದ ಒತ್ತಡ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸಂಘಟನೆಯನ್ನು ವಿಸರ್ಜಿಸುವುದು ಅನಿವಾರ್ಯ ಎಂದು ಪೊಲೀಸರು ಹೇಳಿದ್ದಾರೆ.
ಸಾಮಾಜಿಕ್ ಏಕ್ತಾ ಮಂಚ್ ನ ತುರ್ತುಸಭೆ ಜೋಧಪುರದಲ್ಲಿ ನಡೆದು, ಸಂಘಟನೆ ವಿಸರ್ಜಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಪದಾಧಿಕಾರಿ ಸುಬ್ಬಾ ರಾವ್ ಪ್ರಕಟನೆಯಲ್ಲಿ ಹೇಳಿದ್ದಾರೆ.
ನಕ್ಸಲ್ ವಿರೋಧಿ ಹೋರಾಟ ಮಾಡುತ್ತಿರುವ ಕೇಂದ್ರ, ರಾಜ್ಯ ಹಾಗೂ ಜಿಲ್ಲಾಡಳಿತಕ್ಕೆ ನೆರವು ನೀಡುವ ಸಲುವಾಗಿ ಈ ಸಂಘಟನೆ ಸ್ಥಾಪಿಸಲಾಗಿತ್ತು. ಈ ಬಗ್ಗೆ ಸಾರ್ವಜನಿಕ ಜಾಗೃತಿಗಾಗಿ ಹಲವು ಅಹಿಂಸಾತ್ಮಕ ಚಳವಳಿಯನ್ನೂ ನಡೆಸಲಾಗಿತ್ತು. ಆದರೆ ಕೆಲ ವ್ಯಕ್ತಿಗಳು ಸಂಘಟನೆಯ ಚಟುವಟಿಕೆಯ ದುರ್ಲಾಭ ಪಡೆದು, ಸ್ಥಳೀಯ ಪೊಲೀಸರನ್ನು ಗುರಿ ಮಾಡಲು ಆರಂಭಿಸಿದ ಹಿನ್ನೆಲೆಯಲ್ಲಿ, ಸಂಘಟನೆಯನ್ನು ವಿಸರ್ಜಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ವಿವರಿಸಿದ್ದಾರೆ.
ಆದರೆ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೆ ನಕ್ಸಲ್ ವಿರುದ್ಧದ ಹೋರಾಟಕ್ಕೆ ನೆರವು ಮುಂದುವರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News