ವಿದೇಶದಿಂದ ಊರನ್ನು ಲೈವ್ ನೋಡಿ!
ವಡೋದರ/ ಆನಂದ್: ಆನಂದ್ ಜಿಲ್ಲೆಯ ಪುಟ್ಟ ಗ್ರಾಮದಲ್ಲಿ ಈ ರವಿವಾರ ದೊಡ್ಡ ಡಿಜಿಟಲ್ ಕ್ರಾಂತಿಯಾಗುತ್ತಿದೆ.
ಕ್ಷೀರನಗರ ಎಂದು ಕರೆಸಿಕೊಂಡಿರುವ ಆನಂದ್‌ನಿಂದ 23 ಕಿಲೋಮೀಟರರ್ ದೂರದ ಭರೋಡಾ ಎಂಬ ಈ ಪುಟ್ಟಹಳ್ಳಿ, ಶೇ. 100ರಷ್ಟು ಸಿಸಿ ಟಿವಿ ಕಣ್ಗಾವಲು ಹೊಂದಿದ ಪ್ರಪ್ರಥಮ ಹಳ್ಳಿ ಎಂದಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 95 ಕ್ಯಾಮೆರಾಗಳನ್ನು ಹಳ್ಳಿಯಲ್ಲಿ ಅಳವಡಿಸಿ, ವೈ- ಫೈ ಸೌಲಭ್ಯವನ್ನು ಇದಕ್ಕೆ ಸಂಪರ್ಕಿಸಲಾಗಿದೆ. ಇದಕ್ಕಾಗಿ ವಿಶೇಷ ಫೈಬರ್ ಆಪ್ಟಿಕ್ ಜಾಲ ರೂಪಿಸಲಾಗಿದೆ.
ಇಷ್ಟೇ ಅಲ್ಲ, ಈ ಅನಿವಾಸಿ ಗುಜರಾತಿ ಗ್ರಾಮದಲ್ಲಿ ಶೇ. 50 ಮನೆಗಳ ಮಂದಿ ವಿದೇಶಗಳಲ್ಲಿ ನೆಲೆಸಿದ್ದಾರೆ. ಇವರೆಲ್ಲರೂ ತಮ್ಮ ಹುಟ್ಟೂರಿನ ಎಲ್ಲ ಚಟುವಟಿಕೆಗಳನ್ನೂ ಲೈವ್ ಆಗಿ ತಮ್ಮ ಮೊಬೈಲ್ ಆಪ್‌ಗಳ ಮೂಲಕ ವೀಕ್ಷಿಸಲು ಕೂಡಾ ಸಾಧ್ಯವಾಗಲಿದೆ. ತಮ್ಮ ಊರಿನ ಎರಡು ಪ್ರಮುಖ ದೇವಸ್ಥಾನಗಳು, ಲೇನ್‌ಗಳು ಹಾಗೂ ಹೊಲಗಳನ್ನು ಕೂಡಾ ದಿನವಿಡೀ ವೀಕ್ಷಿಸಲು ಇದು ಅನುಕೂಲ ಮಾಡಿಕೊಟ್ಟಿದೆ. ಈ ಗ್ರಾಮದ ಬಹುತೇಕ ಮಂದಿ ಅಮೆರಿಕ, ಕೆನಡಾ ಹಾಗೂ ಆಫ್ರಿಕನ್ ದೇಶಗಳಲ್ಲಿ ನೆಲೆಸಿದ್ದಾರೆ.
ಈ ತಂತ್ರಜ್ಞಾನ ನಮ್ಮನ್ನು ತವರಿನ ಜತೆಗಿನ ಸಂಬಂಧವನ್ನು ನಿಕಟಗೊಳಿಸಿದೆ. ನಮ್ಮ ಸೆಲ್‌ಫೋನ್ ಮೂಲಕವೇ ಇಡೀ ನನ್ನ ಹಳ್ಳಿಯನ್ನು ವೀಕ್ಷಿಸಲು ಸಾಧ್ಯವಾಗಲಿದೆ ಎಂದು ಕೆನಡಾದ ವಿನ್ನಿಪೆಗ್‌ನಲ್ಲಿ ನೆಲೆಸಿರುವ ಅಮ್ರಿಶ್ ಪಟೇಲ್ ಹೇಳುತ್ತಾರೆ.
ಈ ಡಿಜಿಟಲೀಕರಣ ಯೋಜನೆಗೆ ದೊಡ್ಡ ಮೊತ್ತವನ್ನು ಫ್ಲೋರಿಡಾ ಮೂಲದ ಮಹೇಂದ್ರಸಿನ್ಹಾ ರಾವುಲ್‌ಜಿ ನೀಡಿದ್ದಾರೆ. ಇವರು 30 ವರ್ಷ ಮೊದಲು ಅಮೆರಿಕೆಗೆ ಹೋಗಿದ್ದರು. ಈ ಯೋಜನೆಗೆ ಅವರು 25 ಲಕ್ಷ ರೂಪಾಯಿ ನೀಡಿ, ದೇಶದ ನಕ್ಷೆಯಲ್ಲಿ ಈ ಡಿಜಿಟಲ್ ಗ್ರಾಮ ಗುರುತಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ನಿರಂತರ ಕಣ್ಗಾವಲಿಗಾಗಿ ಗ್ರಾಮದಲ್ಲಿ 50 ಅಡಿಯ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗಿದೆ. ಜನರು ತಮ್ಮ ಸೆಲ್‌ಫೋನ್‌ಗಳ ಮೂಲಕವೂ ಈ ದೃಶ್ಯಾವಳಿಗಳನ್ನು ವೀಕ್ಷಿಸಬಹುದಾಗಿದೆ.