×
Ad

ಇಕ್ವೆಡಾರ್: ಭೂಕಂಪಕ್ಕೆ 233 ಬಲಿ

Update: 2016-04-17 23:57 IST
ಪ್ರಬಲ ಭೂಕಂಪದ ಪರಿಣಾಮವಾಗಿ ಇಕ್ವೆಡಾರ್‌ನ ಗ್ವಾಯಕ್ವಿಲ್‌ನಲ್ಲಿ ಮೇಲ್ಸೇತುವೆಯೊಂದು ಕಾರೊಂದರ ಮೇಲೆ ಉರುಳಿ ಬಿದ್ದಿರುವುದು.

ಕ್ವಿಟೊ (ಇಕ್ವೆಡಾರ್), ಎ. 17: ಶನಿವಾರ ತಡ ರಾತ್ರಿ ಪೆಸಿಫಿಕ್ ಸಾಗರದ ಕರಾವಳಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಇಕ್ವೆಡಾರ್‌ನಲ್ಲಿ ಕನಿಷ್ಠ 233 ಮಂದಿ ಮೃತಪಟ್ಟಿದ್ದಾರೆ ಹಾಗೂ ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಆ ದೇಶದ ಉಪಾಧ್ಯಕ್ಷ ಜಾರ್ಜ್ ಗ್ಲಾಸ್ ಹೇಳಿದ್ದಾರೆ.
ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.8ರಷ್ಟಿತ್ತು.

‘‘ಈ ಹಂತದಲ್ಲಿ, ಮೃತಪಟ್ಟವರ ಅಧಿಕೃತ ಸಂಖ್ಯೆ 233ನ್ನು ತಲುಪಿದೆ’’ ಎಂದು ರವಿವಾರ ಮುಂಜಾನೆ ಜಾರ್ಜ್ ಹೇಳಿದರು. ಭೂಕಂಪದ ಹಿನ್ನೆಲೆಯಲ್ಲಿ ಇಕ್ವೆಡಾರ್ ಅಧ್ಯಕ್ಷ ರಫೆಲ್ ಕೊರೆಯಾ ರಾಷ್ಟ್ರೀಯ ತುರ್ತುಸ್ಥಿತಿ ಘೋಷಿಸಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ಗಾಯ ಗೊಂಡಿದ್ದಾರೆ ಎಂದು ಅವರು ತಿಳಿಸಿದರು. ಭೂಕಂಪ ಇಕ್ವೆಡಾರ್‌ನಾದ್ಯಂತ ಹಾಗೂ ಉತ್ತರ ಪೆರು ಮತ್ತು ದಕ್ಷಿಣ ಕೊಲಂಬಿಯಗಳಲ್ಲಿ ಅನುಭವಕ್ಕೆ ಬಂದಿದೆ.
ಇಕ್ವೆಡಾರ್‌ನ ಅತ್ಯಂತ ಹಾನಿಗೀಡಾಗಿರುವ ಆರು ರಾಜ್ಯಗಳಲ್ಲಿ ಅಧಿಕಾರಿಗಳು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

‘‘ಭೂಕಂಪದ ಕೇಂದ್ರ ಬಿಂದುವಿನ ಸುತ್ತಮುತ್ತ ಸಾಕಷ್ಟು ಪ್ರಮಾಣದಲ್ಲಿನಾಶ ಸಂಭವಿಸಿದೆ. ಪೆಡಾರ್ನೆಲೇಸ್ ಪಟ್ಟಣ ಸಂಪೂರ್ಣವಾಗಿ ನೆಲಸಮಗೊಂಡಿದೆ. ಅದೇ ವೇಳೆ, ಗ್ವಾಯಕ್ವಿಲ್ ಮುಂತಾದ ಕೇಂದ್ರ ಬಿಂದುವಿನಿಂದ ಸಾಕಷ್ಟು ದೂರದಲ್ಲಿರುವ ಪ್ರದೇಶಗಳಲ್ಲೂ ಹಾನಿ ಸಂಭವಿಸಿದೆ’’ ಎಂದು ಇಕ್ವೆಡಾರ್ ಭೂಗೋಳಶಾಸ್ತ್ರ ಕಚೇರಿ ತಿಳಿಸಿದೆ.


ಸುನಾಮಿ ಎಚ್ಚರಿಕೆ
ಭೂಕಂಪವು ಕ್ವಿಟೊದಿಂದ 173 ಕಿ.ಮೀ. ವಾಯುವ್ಯದಲ್ಲಿ ಸಾಗರ ತಳದಿಂದ ಸುಮಾರು 10 ಕಿ.ಮೀ. ಆಳದಲ್ಲಿ ಸಂಭವಿಸಿದೆ ಎಂದು ಅಮೆರಿಕ ಜಿಯಾಲಜಿಕಲ್ ಸರ್ವೇ ತಿಳಿಸಿದೆ.
‘‘ಪ್ರಾಥಮಿಕ ಭೂಕಂಪ ಮಾನದಂಡಗಳ ಆಧಾರದಲ್ಲಿ, ಭೂಕಂಪದ ಕೇಂದ್ರ ಬಿಂದುವಿನಿಂದ 300 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಕರಾವಳಿಗಳಿಗೆ ಸುನಾಮಿ ಅಲೆಗಳು ಸಂಭವಿಸಬಹುದು’’ ಎಂಬ ಎಚ್ಚರಿಕೆಯನ್ನು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ನೀಡಿತ್ತು.
ಉತ್ತರ ಪೆರು ಮತ್ತು ದಕ್ಷಿಣ ಕೊಲಂಬಿಯಗಳಲ್ಲೂ ಭೂಮಿ ಕಂಪಿಸಿತಾದರೂ, ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News