×
Ad

ತೈಲ ಉತ್ಪಾದನೆ ನಿಯಂತ್ರಣದ ಮೇಲೆ ಸೌದಿ-ಇರಾನ್ ಸಂಘರ್ಷದ ನೆರಳು

Update: 2016-04-17 23:58 IST

ದೋಹಾ, ಎ. 17: ತೈಲ ಉತ್ಪಾದನೆಗೆ ಮಿತಿ ವಿಧಿಸುವುದಕ್ಕೆ ಸಂಬಂಧಿಸಿ ಒಪ್ಪಂದವೊಂದಕ್ಕೆ ಬರಲು ಒಪೆಕ್ ಮತ್ತು ಒಪೆಕೇತರ ತೈಲ ಉತ್ಪಾದಕ ದೇಶಗಳ ನಡುವೆ ಕತರ್‌ನಲ್ಲಿ ರವಿವಾರ ನಡೆದ ಸಭೆಯ ಕೊನೆಯಲ್ಲಿ ತೊಂದರೆ ಕಾಣಿಸಿಕೊಂಡಿದೆ. ಸೌದಿ ಅರೇಬಿಯ ಮತ್ತು ಇರಾನ್ ನಡುವೆ ಹೊಸದಾಗಿ ಉದ್ವಿಗ್ನತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎಂದು ಮೂಲಗಳು ಹೇಳಿವೆ.
ಕುಸಿಯುತ್ತಿರುವ ಕಚ್ಚಾ ತೈಲದ ಬೆಲೆಯನ್ನು ಆಧರಿಸುವ ಉದ್ದೇಶದ ಒಪ್ಪಂದವನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ ತೈಲ ಸಚಿವರು ಕತರ್‌ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ತಾನಿಯನ್ನು ಭೇಟಿ ಮಾಡಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ತೈಲ ಉತ್ಪಾದನೆ ಪ್ರಮಾಣಕ್ಕೆ ಮಿತಿ ಹೇರುವಲ್ಲಿ ಕತರ್ ಅಮೀರ್ ನಿರ್ಣಾಯಕ ಪಾತ್ರವನ್ನು ವಹಿಸಿರುವುದನ್ನು ಸ್ಮರಿಸಬಹುದಾಗಿದೆ.
ಇರಾನ್ ಬಗ್ಗೆ ಸೌದಿ ಅರೇಬಿಯ ಕಠಿಣ ನಿಲುವನ್ನು ತಳೆದಿದೆ. ತೈಲ ಉತ್ಪಾದನೆಗೆ ನಿಯಂತ್ರಣ ಹೇರಲು ಒಪ್ಪದ ಏಕೈಕ ತೈಲ ರಫ್ತು ದೇಶಗಳ ಸಂಘಟನೆ (ಒಪೆಕ್)ಯ ಸದಸ್ಯ ದೇಶ ಇರಾನ್ ಆಗಿದೆ. ತನ್ನ ವಿರುದ್ಧದ ಅಂತಾರಾಷ್ಟ್ರೀಯ ಆರ್ಥಿಕ ದಿಗ್ಬಂಧನ ಜನವರಿಯಲ್ಲಿ ತೆರವು ಆದ ಬಳಿಕ, ತನ್ನ ಮಾರುಕಟ್ಟೆ ಪಾಲನ್ನು ತಾನು ಮತ್ತೆ ಪಡೆಯಬೇಕಾಗಿದೆ ಎಂದು ಇರಾನ್ ಹೇಳುತ್ತಿದೆ. ತೈಲ ಉತ್ಪಾದನೆ ಮೇಲೆ ನಿಯಂತ್ರಣ ಹೇರಲು ಒಪ್ಪದ ಇರಾನ್ ಮಾತುಕತೆಗಳಲ್ಲಿ ಭಾಗವಹಿಸಬಾರದು ಎಂಬುದಾಗಿ ಸೌದಿ ಅರೇಬಿಯ ಆರಂಭದಲ್ಲಿ ಹೇಳಿತ್ತು. ಆದಾಗ್ಯೂ, ಅದು ಕೊನೆಗೆ ತನ್ನ ನಿಲುವನ್ನು ಬದಲಾಯಿಸಿ, ಎಲ್ಲ ಒಪೆಕ್ ಸದಸ್ಯ ದೇಶಗಳು ಮಾತುಕತೆಗಳಲ್ಲಿ ಭಾಗವಹಿಸಬೇಕು ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News