ಗುಜರಾತ್‌ನ 994 ಗ್ರಾಮಗಳಲ್ಲಿ ನೀರಿಗೆ ಬರ
ಅಹ್ಮದಾಬಾದ್, ಎ.20: ಬರದ ಬೇಗೆಯಿಂದ ತತ್ತರಿಸಿರುವ ಸೌರಾಷ್ಟ್ರ ಹಾಗೂ ಕಛ್ ಪ್ರಾಂತ್ಯದ ಇನ್ನೂ 468 ಗ್ರಾಮಗಳನ್ನು ‘ ಭಾಗಶಃ ಅಭಾವ ಪೀಡಿತ’ವೆಂದು ಗುಜರಾತ್ ಸರಕಾರ ಬುಧವಾರ ಘೋಷಿಸಿದ್ದು, ಇದರೊಂದಿಗೆ ರಾಜ್ಯದಲ್ಲಿ ನೀರಿನ ತೀವ್ರ ಸಮಸ್ಯೆಯನ್ನು ಎದುರಿಸುತ್ತಿರುವ ಹಳ್ಳಿಗಳ ಸಂಖ್ಯೆ ಸಾವಿರದ ಹತ್ತಿರಕ್ಕೆ ಬಂದಿದೆ.
ಈ ತಿಂಗಳ ಆರಂಭದಲ್ಲಿ 526 ಗ್ರಾಮಗಳನ್ನು ಅಭಾವ ಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು ಅವುಗಳನ್ನು ಕೆಂಪುವಲಯದ ಪಟ್ಟಿಗೆ ಸೇರ್ಪಡೆಗೊಳಿಸಿತ್ತು. ನಿನ್ನೆ ಪ್ರಕಟಿಸಿದ ಅಧಿಕೃತ ಅಧಿಸೂಚನೆಯೊಂದು ಇನ್ನೂ 468 ಗ್ರಾಮಗಳನ್ನು ಈ ಪಟ್ಟಿಗೆ ಸೇರ್ಪಡೆಗೊಳಿಸಿರುವುದರಿಂದ ಕುಡಿಯುವ ನೀರಿನ ಕೊರತೆಯಿರುವ ಗ್ರಾಮಗಳ ಸಂಖ್ಯೆ 994ಕ್ಕೇರಿದೆ. ರಾಜ್ಯದ ಬರಪರಿಸ್ಥಿತಿಗೆ ಸಂಬಂಧಿಸಿ ಅಫಿದಾವಿತ್ ಬದಲಿಗೆ ಟಿಪ್ಪಣಿಯನ್ನು ಸಲ್ಲಿಸಿದ್ದಕ್ಕಾಗಿ ಸುಪ್ರೀಂಕೋರ್ಟ್ ಮಂಗಳವಾರ ಗುಜರಾತ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು ಹಾಗೂ ಈ ಬಗ್ಗೆ ಎಪ್ರಿಲ್ 21ರೊಳಗೆ ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದೆ.
ಇದೀಗ ಗುಜರಾತ್ ಸರಕಾರವು ಅಭಾವಪೀಡಿತವೆಂದು ಘೋಷಿಸಿರುವ 468 ಗ್ರಾಮಗಳ ಪೈಕಿ 301 ಗ್ರಾಮಗಳು ಕಛ್, 64 ಪೋರ್‌ಬಂದರ್ ಹಾಗೂ 47 ದ್ವಾರಕಾ ಜಿಲ್ಲೆಯಲ್ಲಿವೆಯೆಂದು ರಾಜ್ಯದ ಕಂದಾಯ ಇಲಾಖೆಯು ಪ್ರಕಟಿಸಿದ ಅಧಿಸೂಚನೆ ತಿಳಿಸಿದೆ.
ಈ ಗ್ರಾಮಗಳಿಗೆ ಸಮರ್ಪಕ ನೀರಿನ ಜೊತೆಗೆ ಜಾನುವಾರುಗಳಿಗೆ ಮೇವನ್ನು ಕೂಡಾ ಪೂರೈಕೆ ಮಾಡಲಾಗುವುದೆಂದು ಗುಜರಾತ್‌ನ ಶಿಕ್ಷಣಸಚಿವ ಹಾಗೂ ಬರ ಅಂದಾಜು ಉಪಸಮಿತಿಯ ವರಿಷ್ಠ ಭೂಪೇಂದ್ರ ಸಿಂಹ ಚೂಡಾಸಮ ತಿಳಿಸಿದ್ದಾರೆ.
ಈ ಗ್ರಾಮಗ ಜನರ ನೀರಿನ ಬವಣೆಯನ್ನು ನೀಗಿಸಲು ಸರಕಾರವು ನೂತನ ಕೈಪಂಪ್‌ಗಳನ್ನು ಹಾಗೂ ಬೋರ್‌ವೆಲ್‌ಗಳನ್ನು ನಿರ್ಮಿಸಲಿದೆ. ಒಂದು ವೇಳೆ ಇವ್ಯಾವುದೂ ಫಲ ನೀಡದಿದ್ದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುವುದೆಂದು ಚೂಡಾಸಮ ತಿಳಿಸಿದ್ದಾರೆ.